ADVERTISEMENT

ಸದಾನಂದಗೌಡ ಈಗ ನಟ!

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 19:54 IST
Last Updated 15 ಡಿಸೆಂಬರ್ 2012, 19:54 IST

ಮಂಗಳೂರು: `ರಾಜಕೀಯವೂ ಸಿನಿಮಾದಂತೆ ಒಂದು ನಟನೆಯೇ, ಅಲ್ಲಿ ಕಟ್, ರೀಟೇಕ್‌ಗಳು ಸ್ವಲ್ಪ ಕಡಿಮೆ, ಇಲ್ಲಿ ಸ್ವಲ್ಪ ಹೆಚ್ಚು ಅಷ್ಟೇ, ಸಾಮಾಜಿಕ ಕಳಕಳಿಯ ಚಿತ್ರವೊಂದರಲ್ಲಿ ನಟಿಸಬೇಕು ಎಂಬ ಮಿತ್ರರ ಒತ್ತಾಯದ ಮೇರೆಗೆ ಮೇಕಪ್ ಮಾಡಿದ್ದೇನೆ. ಒಂದು ಗಂಟೆ ಕಾಲ ನಟಿಸಿದ್ದೇನೆ...'

ನಗರದ ಸಿಟಿ ಸೆಂಟರ್ ಮಾಲ್‌ನಲ್ಲಿ ಶನಿವಾರ ಬೆಳಿಗ್ಗೆ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು `ಚೆಲ್ಲಾಪಿಲ್ಲಿ' ಚಿತ್ರಕ್ಕಾಗಿ ಬಣ್ಣ ಹಚ್ಚಿ ನಟಿಸಿದ ಬಳಿಕ ಪತ್ರಕರ್ತರೊಂದಿಗೆ ಆಡಿದ ಮಾತು ಇದು.`ಸ್ನೇಹಿತ ರಾಜಗೋಪಾಲ ರೈ ಅವರು ಈ ಚಿತ್ರದ ಒಂದು ದೃಶ್ಯದಲ್ಲಿ ನಟಿಸಬೇಕು ಎಂದು ಕೇಳಿಕೊಂಡರು.

ಮಾಲ್ ಸಂಸ್ಕೃತಿಯಲ್ಲಿ ಮಕ್ಕಳನ್ನು ಹೇಗೆ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂಬ ಸಂದೇಶ ಈ ಚಿತ್ರದಲ್ಲಿದೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರವಾಗಿದ್ದರಿಂದ ನಾನು ಇದರಲ್ಲಿ ನಟಿಸಿದ್ದೇನೆ. ನಾನು ರಾಜ್ಯದಲ್ಲಿ 11 ತಿಂಗಳ ಕಾಲ ಮುಖ್ಯಮಂತ್ರಿಯಾಗಿದ್ದವನು. ಆ ನೆಲೆಯಲ್ಲಿ ನನ್ನಿಂದ ನೈಜ ಪಾತ್ರವನ್ನು ಸಿನಿಮಾದವರು ಬಯಸಿದರು, ಅದನ್ನು ನಾನು ಮಾಡಿದ್ದೇನೆ' ಎಂದು ಸದಾನಂದ ಗೌಡರು ಹೇಳಿದರು.

ಸಾಯಿಕೃಷ್ಣ ನಿರ್ದೇಶನದ ಈ ಚಿತ್ರದ ನಿರ್ಮಾಪಕರು ಮಂಗಳೂರಿನವರೇ ಆದ ಸುದೇಶ್ ಭಂಡಾರಿ ಮತ್ತು ಸುಕೇಶ್ ಭಂಡಾರಿ. ವಿಜಯ ರಾಘವೇಂದ್ರ ಮತ್ತು ಐಶ್ವರ್ಯಾ ನಾಗ್ ಈ ಚಿತ್ರದ ನಾಯಕ, ನಾಯಕಿ. ಮಾಜಿ ಮುಖ್ಯಮಂತ್ರಿ ಅವರು `ಬೇಬಿ ಕೇರ್'ಹೆಸರಿನ ಅಂಗಡಿಯನ್ನು ಉದ್ಘಾಟಿಸುವುದು ಮತ್ತು ಒಂದಿಷ್ಟು ಮಾತನಾಡುವ ದೃಶ್ಯ ಸಿನಿಮಾದಲ್ಲಿದ್ದು, ಆ ಪಾತ್ರವನ್ನು ಡಿವಿಎಸ್ ಅವರು ನಿಭಾಯಿಸಿದ್ದಾರೆ. ಸಿಟಿ ಸೆಂಟರ್ ಮಾಲ್‌ನ 2ನೇ ಮಹಡಿಯಲ್ಲಿರುವ ಮಳಿಗೆಯಲ್ಲಿ ಈ ದೃಶ್ಯವನ್ನು ಚಿತ್ರೀಕರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT