ADVERTISEMENT

ಸದಾನಂದ ಗೌಡ ವಿರುದ್ಧ ಪಿತೂರಿ: ಸ್ವಾಮೀಜಿ ವಿಷಾದ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2012, 19:30 IST
Last Updated 18 ಮಾರ್ಚ್ 2012, 19:30 IST

ಬಾಗೇಪಲ್ಲಿ: `ಒಕ್ಕಲಿಗ ಸಮುದಾಯದವರಾದ ಡಿ.ವಿ.ಸದಾನಂದಗೌಡ ಅವರು ಮುಖ್ಯಮಂತ್ರಿಯಾಗಿರುವುದನ್ನು ಯಾರೂ ಸಹಿಸುತ್ತಿಲ್ಲ. ವಿನಾಕಾರಣ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸುವ ಹುನ್ನಾರ ನಡೆಸಲಾಗುತ್ತಿದೆ~ ಎಂದು ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಬಾಗೇಪಲ್ಲಿಯ ಬಿಜಿಎಸ್ ಶಾಲಾ ಆವರಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಬಿಜಿಎಸ್ ಒಕ್ಕಲಿಗ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, `ರಾಜಕೀಯ ಮತ್ತು ಸ್ವಾರ್ಥ ಕಾರಣದಿಂದಾಗಿ ಸದಾನಂದಗೌಡರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲು ಪ್ರಯತ್ನಿಸಲಾಗುತ್ತಿದೆ~ ಎಂದು ತಿಳಿಸಿದರು.

`ನೀರಿನಲ್ಲಿ ಗಾಯಗೊಂಡ ಮೀನು ಯಾವ ರೀತಿ ಒದ್ದಾಡುವುದೋ ಅಂತಹ ಸ್ಥಿತಿಯನ್ನು ಸದಾನಂದಗೌಡರು ಅನುಭವಿಸುತ್ತಿದ್ದಾರೆ. ಒಕ್ಕಲಿಗ ಸಮುದಾಯದವರು ಮುಖ್ಯಮಂತ್ರಿ ಸ್ಥಾನದಲ್ಲಿ ಇರಬಾರದೆಂದು ಈ ರೀತಿ ಮಾಡಲಾಗುತ್ತಿದೆ~ ಎಂದು ಖಾರವಾಗಿ ಹೇಳಿದರು.

`ಒಕ್ಕಲಿಗ ಸಮುದಾಯಕ್ಕೆ ಸೇರಿದ ಅಧಿಕಾರಿಗಳು ವಿವಿಧ ಇಲಾಖೆಗಳಲ್ಲಿ ಉನ್ನತ ಸ್ಥಾನದಲ್ಲಿದ್ದು, ಅವರನ್ನು ಬೇಕೆಂದೇ ಬೇರೆ ಬೇರೆ ಕಡೆ ವರ್ಗಾಯಿಸಲಾಗುತ್ತಿದೆ. ಒಕ್ಕಲಿಗ ಅಧಿಕಾರಿಗಳನ್ನು ಒಂದು ಕಡೆ ಕೆಲಸ ಮಾಡಲು ಅವಕಾಶ ನೀಡಲಾಗುತ್ತಿಲ್ಲ~ ಎಂದು ಸ್ವಾಮೀಜಿ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.