ಬೆಂಗಳೂರು: ಸುವರ್ಣ ಕರ್ನಾಟಕ ಮಹೋತ್ಸವದ ಸಂದರ್ಭದಲ್ಲಿ (2006 ಆ.15) ಸನ್ನಡತೆಯ ಹೆಸರಿನಲ್ಲಿ ಬಿಡುಗಡೆಗೊಂಡಿರುವ 285 ಕೈದಿಗಳ `ಭವಿಷ್ಯ~ ಈಗ ಅತಂತ್ರ!
- ಕಾರಣ, ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಈ ಕೈದಿಗಳನ್ನು ಕಾನೂನು ಮೀರಿ, ಸಂವಿಧಾನ ಬಾಹಿರವಾಗಿ ಬಿಡುಗಡೆ ಮಾಡಲಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ. ರಾಜ್ಯಪಾಲರು ಹಾಗೂ ಸರ್ಕಾರ ತಮಗೆ ಇರುವ ಅಧಿಕಾರವನ್ನು ಬಳಸಿಕೊಂಡು, ಇವರಿಗೆ ನೀಡಲಾದ ಕ್ಷಮಾದಾನವನ್ನು ರದ್ದು ಮಾಡುವ ಸಂಬಂಧ ಯೋಚಿಸುವಂತೆ ನ್ಯಾಯಮೂರ್ತಿ ಎನ್.ಕುಮಾರ್ ಸೂಚಿಸಿದ್ದಾರೆ.
ಅದೇ ದಿನ ಬಿಡುಗಡೆಗೊಂಡಿರುವ ಮಂಡ್ಯದ ಮಂಜುನಾಥ ಅವರ ಬಿಡುಗಡೆ ಆದೇಶವನ್ನು ರದ್ದುಗೊಳಿಸಿರುವ ನ್ಯಾಯಮೂರ್ತಿಗಳು, ಕೂಡಲೇ ಆತನನ್ನು ವಾರೆಂಟ್ ಇಲ್ಲದೇ ಬಂಧಿಸುವಂತೆ ಗೃಹ ಇಲಾಖೆಗೆ ನಿರ್ದೇಶಿಸಿದ್ದಾರೆ. ಆತ ಕೇವಲ ಎಂಟು ವರ್ಷ ಜೈಲಿನಲ್ಲಿ ಕಳೆದಿರುವ ಹಿನ್ನೆಲೆಯಲ್ಲಿ, ಉಳಿದ ಶಿಕ್ಷೆಯ ಅವಧಿಯನ್ನು ಜೈಲಿನಲ್ಲಿಯೇ ಕಳೆಯುವಂತೆ ಅವರು ಸೂಚಿಸಿದ್ದಾರೆ. 1998ರಲ್ಲಿ ತಂದೆಯನ್ನೇ ಕೊಲೆ ಮಾಡಿರುವ ಸಂಬಂಧ ಶಿಕ್ಷೆ ಅನುಭವಿಸುತ್ತಿದ್ದ ಮಂಜುನಾಥನನ್ನು ಮಧ್ಯದಲ್ಲಿಯೇ ಬಿಡುಗಡೆ ಮಾಡಿದ್ದನ್ನು ಪ್ರಶ್ನಿಸಿ ರಾಮಕೃಷ್ಣ ಎನ್ನುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.