ADVERTISEMENT

ಸಮನ್ವಯ ಸಮಿತಿಗೆ ದಿಗ್ವಿಜಯ್ ನೇತೃತ್ವ?

​ಪ್ರಜಾವಾಣಿ ವಾರ್ತೆ
Published 10 ಜುಲೈ 2013, 19:59 IST
Last Updated 10 ಜುಲೈ 2013, 19:59 IST

ಬೆಂಗಳೂರು: ರಾಜ್ಯ ಸರ್ಕಾರ ಮತ್ತು ಪ್ರದೇಶ ಕಾಂಗ್ರೆಸ್ ನಡುವಣ ಸಮನ್ವಯಕ್ಕಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ನೇತೃತ್ವದಲ್ಲಿ ಆರು ಅಥವಾ ಏಳು ಸದಸ್ಯರ ಸಮನ್ವಯ ಸಮಿತಿ ರಚಿಸಲು ಪಕ್ಷದ ಹೈಕಮಾಂಡ್ ನಿರ್ಧರಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಸಂಪುಟದಲ್ಲಿನ ಒಬ್ಬ ಹಿರಿಯ ಸಚಿವರು ಸಮಿತಿಯ ಸದಸ್ಯರಾಗಿರುತ್ತಾರೆ. ಪಕ್ಷದಿಂದ ಇಬ್ಬರು ಅಥವಾ ಮೂವರು ಹಿರಿಯ ಮುಖಂಡರಿಗೆ ಸಮಿತಿಯಲ್ಲಿ ಸ್ಥಾನ ನೀಡಲಾಗುತ್ತದೆ. ಸರ್ಕಾರ ಮತ್ತು ಪಕ್ಷದ ನಡುವಣ ಸಮನ್ವಯ ಕಾಯ್ದುಕೊಳ್ಳುವ ಕೆಲಸವನ್ನು ಈ ಸಮಿತಿ ಮಾಡಲಿದೆ.

`ಸಮನ್ವಯ ಸಮಿತಿ ರಚನೆಯ ಸಂಬಂಧ ಪಕ್ಷದ ವರಿಷ್ಠರು ಮಾರ್ಗಸೂಚಿ ಸಿದ್ಧಪಡಿಸಿದ್ದಾರೆ. ರಾಜ್ಯದಿಂದ ಆಯ್ಕೆಯಾಗಿರುವ ಕೇಂದ್ರ ಸಚಿವರು, ರಾಜ್ಯದಿಂದ ಆಯ್ಕೆಯಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು, ಮಾಜಿ ಮುಖ್ಯಮಂತ್ರಿಗಳು ಮತ್ತು ಕೆಪಿಸಿಸಿ ಮಾಜಿ ಅಧ್ಯಕ್ಷರು ಸಮಿತಿಯಲ್ಲಿ ಇರುವುದಿಲ್ಲ' ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕೇಂದ್ರ ಸಚಿವರು, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು, ಮಾಜಿ ಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಮಾಜಿ ಅಧ್ಯಕ್ಷರನ್ನು ಸಮಿತಿಯಿಂದ ದೂರ ಇಡುವಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸೂಚಿಸಿದ್ದಾರೆ. ಹಿಂದೆ ಅಧಿಕಾರದಲ್ಲಿ ಇದ್ದವರು, ಈಗ ಕೇಂದ್ರ ಸರ್ಕಾರ ಹಾಗೂ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಹೊಂದಿರುವವರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸುವುದು ಬೇಡ ಎಂಬ ನಿರ್ಧಾರಕ್ಕೆ ಅವರು ಬಂದಿದ್ದಾರೆ ಎಂದು ಮೂಲಗಳು ಹೇಳಿವೆ.

ಹೆಸರು ಸೂಚಿಸಿಲ್ಲ: ಸರ್ಕಾರ ಮತ್ತು ಪಕ್ಷದ ಕಡೆಯಿಂದ ಸಮಿತಿಗೆ ಯಾರನ್ನು ನೇಮಿಸಬೇಕು ಎಂಬುದು ಇನ್ನೂ ತೀರ್ಮಾನ ಆಗಿಲ್ಲ. ಎರಡೂ ಕಡೆಗಳಿಂದಲೂ ಹೆಸರುಗಳು ಕೂಡ ಶಿಫಾರಸು ಆಗಿಲ್ಲ. ದಿಗ್ವಿಜಯ್ ಸಿಂಗ್ ಅವರು ಮತ್ತೆ ಬೆಂಗಳೂರಿಗೆ ಬಂದ ಬಳಿಕ ಈ ಕುರಿತು ಸಮಾಲೋಚನೆ ನಡೆಯಲಿದೆ. ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಜೊತೆ ಚರ್ಚಿಸಿ ಅವರು ಸಂಭಾವ್ಯರ ಹೆಸರುಗಳನ್ನು ಎಐಸಿಸಿಗೆ ರವಾನಿಸುವರು ಎಂದು ಗೊತ್ತಾಗಿದೆ.

ಸಮನ್ವಯ ಸಮಿತಿ ಸದಸ್ಯರ ಆಯ್ಕೆಯನ್ನು ಪಕ್ಷದ ಹೈಕಮಾಂಡ್ ಅಂತಿಮಗೊಳಿಸಲಿದೆ. ಸಮಿತಿಯ ಕಾರ್ಯವ್ಯಾಪ್ತಿಯನ್ನೂ ಹೈಕಮಾಂಡ್ ನಿರ್ಧರಿಸಲಿದೆ. ಬಳಿಕವೇ ಸಮಿತಿ ಅಸ್ತಿತ್ವಕ್ಕೆ ಬರಲಿದೆ. ಆದರೆ, ಈಗಾಗಲೇ ಸರ್ಕಾರ ಮತ್ತು ಪಕ್ಷದ ಕಡೆಗಳಿಂದ ಕೆಲವರ ಹೆಸರುಗಳನ್ನು ಹರಿ ಬಿಡಲಾಗಿದೆ. ಎರಡೂ ಕಡೆಯವರು ತಮ್ಮವರು ಹೆಚ್ಚಿನ ಸಂಖ್ಯೆಯಲ್ಲಿ ಸಮಿತಿಯಲ್ಲಿರಲಿ ಎಂದು ಬಯಸುತ್ತಿದ್ದಾರೆ. ಆದರೆ, ಹಿರಿತನಕ್ಕೆ ಆದ್ಯತೆ ನೀಡಲು ಹೈಕಮಾಂಡ್ ನಿರ್ಧರಿಸಿದೆ ಎಂದು ಎಐಸಿಸಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.