ADVERTISEMENT

ಸಮ್ಮೇಳನದಲ್ಲಿ ಮಾಧ್ಯಮ ಕೇಂದ್ರ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 18:05 IST
Last Updated 3 ಫೆಬ್ರುವರಿ 2011, 18:05 IST

ಬೆಂಗಳೂರು:   ‘ಆಧುನಿಕ ತಂತ್ರಜ್ಞಾನದ ಫಲವಾಗಿ ಇಂದು ಮಾಧ್ಯಮ ಕ್ಷೇತ್ರ ತೀವ್ರ ವೇಗ ಪಡೆದುಕೊಂಡಿದೆ, ಕ್ಷಣ ಕ್ಷಣದ ಸುದ್ದಿಯನ್ನು ವಿಶ್ವದೆಲ್ಲೆಡೆ ತಲುಪಿಸುವ ಕಾರ್ಯ ನಡೆಯುತ್ತಿದ್ದು, ಇದು ಇಡೀ ವಿಶ್ವವನ್ನು ಬೆರಳ ತುದಿಯಲ್ಲಿ ನಿಲ್ಲಿಸಿದೆ’ ಎಂದು ಪತ್ರಕರ್ತ ಎಸ್.ವಿ. ಜಯಶೀಲರಾವ್ ತಿಳಿಸಿದ್ದಾರೆ.

77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮಾಧ್ಯಮ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.  ‘ಹಿಂದಿನ ಸಮ್ಮೇಳನಗಳ ಅಧ್ಯಕ್ಷರ ಹೆಸರು, ಸಮ್ಮೇಳನ ನಡೆದ ವರ್ಷ, ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸ ಇತ್ಯಾದಿ ಉಪಯುಕ್ತ ಮಾಹಿತಿ ನೀಡುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ’ ಎಂದು ಹೇಳಿದರು.

ಆಧುನಿಕ ತಂತ್ರಜ್ಞಾನದ ಫಲವಾಗಿ ಇಂದು ಮಾಧ್ಯಮ ಕ್ಷೇತ್ರ ತೀವ್ರ ವೇಗ ಪಡೆದುಕೊಂಡಿದೆ, ಕ್ಷಣ ಕ್ಷಣದ ಸುದ್ದಿಯನ್ನು ವಿಶ್ವದೆಲ್ಲೆಡೆ ತಲುಪಿಸುವ ಕಾರ್ಯ ನಡೆಯುತ್ತಿದ್ದು ವಿಶ್ವವೇ ಬೆರಳ ತುದಿಯಲ್ಲಿ ನಿಂತಿದೆ. ನೂತನ ತಂತ್ರಜ್ಞಾನದ ಲಾಭ ಪಡೆದು ಸಮ್ಮೇಳನದ ಸಮಗ್ರ ಮಾಹಿತಿಯನ್ನು ಸಮಸ್ತ ಕನ್ನಡಿಗರಿಗೆ ಮಾಧ್ಯಮ ಪ್ರತಿನಿಧಿಗಳು ತಲುಪಿಸಬೇಕು’ ಎಂದು ಅವರು ಮನವಿ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್ ಮಾತನಾಡಿ ಮಾಧ್ಯಮ ಕೇಂದ್ರದಲ್ಲಿ 20 ಕಂಪ್ಯೂಟರ್‌ಗಳನ್ನು ಅಳವಡಿಸಲಾಗಿದ್ದು ಎಲ್ಲಾ ಕಂಪ್ಯೂಟರ್‌ಗಳಿಗೂ ಇಂಟರ್‌ನೆಟ್ ಸೌಲಭ್ಯ ಕಲ್ಪಿಸಲಾಗಿದೆ, ಸ್ಕ್ಯಾನರ್, ಪ್ರಿಂಟರ್ ವ್ಯವಸ್ಥೆಯ ಜೊತೆಗೆ ಫ್ಯಾಕ್ಸ್ ಯಂತ್ರಗಳನ್ನು ಅಳವಡಿಸಲಾಗಿದೆ. ದೃಶ್ಯ ಮಾಧ್ಯಮ ಹಾಗೂ ಪತ್ರಿಕಾ ಮಾಧ್ಯಮದ ವರದಿಗಾರರಿಗೆ ತಮ್ಮ ದೃಶ್ಯದ ತುಣುಕು ಹಾಗೂ ಛಾಯಾಚಿತ್ರಗಳನ್ನು ರವಾನೆ ಮಾಡಲು ಅವಕಾಶ ಕಲ್ಪಿಸಲಾಗಿದೆ’ ಎಂದರು.

‘ಪತ್ರಿಕಾ ಕಾರ್ಯಾಲಯಗಳಿಗೆ ಸುದ್ದಿ ರವಾನಿಸಲು ಇ-ಮೇಲ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಯೂನಿಕೋಡ್, ಶ್ರಿಲಿಪಿ, ಬರಹ ಮತ್ತು ನುಡಿ ತಂತ್ರಾಂಶಗಳನ್ನು ಎಲ್ಲಾ ಕಂಪ್ಯೂಟರ್‌ಗಳಲ್ಲಿಯೂ ಅಳವಡಿಸಲಾಗಿದೆ’ ಎಂದರು. ಮಾಧ್ಯಮ ಕೇಂದ್ರದಲ್ಲಿ ಪ್ರತ್ಯೇಕ ಸುದ್ದಿಗೋಷ್ಠಿಯ ಕೊಠಡಿ ತೆರೆಯಲಾಗಿದ್ದು ಇಲ್ಲಿ ಪತ್ರಿಕಾಗೋಷ್ಠಿಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ವಿಧಾನಪರಿಷತ್ ಸದಸ್ಯ ಅಶ್ವತ್ಥನಾರಾಯಣ, ಪ್ರೆಸ್‌ಕ್ಲಬ್ ಅಧ್ಯಕ್ಷ ಎಂ.ಎ.ಪೊನ್ನಪ್ಪ, ಪತ್ರಕರ್ತ ಟಿ. ನಾಗರಾಜ್, ಬೆಂಗಳೂರು ದೂರದರ್ಶನ ಕೇಂದ್ರದ ಉಪ ಮಹಾ ನಿರ್ದೇಶಕ ಮಹೇಶ್ ಜೋಶಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಎಸ್. ಸುಧೀಂದ್ರಕುಮಾರ್, ವಾರ್ತಾ ಇಲಾಖೆ ಉಪ ನಿರ್ದೇಶಕ ಪುಟ್ಟರಾಜು ಮತ್ತಿತರರು  ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.