ADVERTISEMENT

ಸಮ್ಮೇಳನ ಸ್ವಾರಸ್ಯಗಳು

​ಪ್ರಜಾವಾಣಿ ವಾರ್ತೆ
Published 8 ಜನವರಿ 2014, 19:30 IST
Last Updated 8 ಜನವರಿ 2014, 19:30 IST

ಕೆಳಗೆ ಕುಳಿತ ರಾಜಕಾರಣಿಗಳು!
ಗೋಷ್ಠಿ ನಡೆಯುತ್ತಿದ್ದ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಸಿ.ಮಹ­ದೇವಪ್ಪ, ವಿಧಾನ ಪರಿಷತ್‌ ಸದಸ್ಯ ಎಂ.ಸಿ.ನಾಣಯ್ಯ ಪ್ರೇಕ್ಷಕರ ಸಾಲಿನಲ್ಲಿ ಕುಳಿತು ಸಾಹಿತಿಗಳ ಮಾತನ್ನು ಆಲಿಸಿದರು. ನಾಣಯ್ಯ ಅವರು ತಮಗೆ ಸಂಸದೀಯ ಗುರು ಎಂದು ಸಿದ್ದಲಿಂಗಯ್ಯ ಬಣ್ಣಿಸಿದರು.

ಅಚ್ಚುಕಟ್ಟಾದ ಪುಸ್ತಕ ಮಳಿಗೆ
ಈ ಬಾರಿಯ ಸಮ್ಮೇಳನದಲ್ಲಿ ಪುಸ್ತಕ ಮಾರಾಟಗಾರರು ಬಿಸಿಲಲ್ಲಿ, ದೂಳಿನಲ್ಲಿ ಕುಳಿತು ಪುಸ್ತಕ ಮಾರಾಟವಾಗುವ ತಾಪತ್ರಯದಿಂದ ಹೊರತಾಗಿದ್ದಾರೆ.
360 ಮಳಿಗೆಗಳೂ ಪ್ರತ್ಯೇಕವಾಗಿವೆ. ಪ್ರತಿ ಮಳಿಗೆಗೆ ಎರಡು ಟೇಬಲ್‌, ನಾಲ್ಕು ಕುರ್ಚಿ ಕೊಡಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಕೂಡಾ ಇದೆ. ‘ಇದಕ್ಕಾಗಿ ಶಾಮಿಯಾನ ಹಾಕಲು ₨10 ಲಕ್ಷ ಹೆಚ್ಚು ವೆಚ್ಚವಾಗಿರಬಹುದು. ಆದರೆ, ಪ್ರಕಾಶಕರು ಪ್ರೀತಿಯಿಂದ ಪುಸ್ತಕ ಮಾರಾಟ ಮಾಡಲಿ, ಕೊಳ್ಳುವವರು ನೆರಳಲ್ಲಿ, ಆರಾಮವಾಗಿ ಕೊಳ್ಳಲಿ ಎನ್ನುವ ಕಾರಣಕ್ಕೆ ಈ ವ್ಯವಸ್ಥೆ ಮಾಡಿರುವೆ’ ಎಂದು ಸಂಸದ ಎಚ್‌. ವಿಶ್ವನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಸಾಹಿತ್ಯ ಜಾತ್ರೆಯಲ್ಲಿ ಬಳೆ, ಬೆಂಡೋಲೆ!
ಗೋಷ್ಠಿಗಳಲ್ಲಿ ಖಾಲಿ ಖಾಲಿ ಕುರ್ಚಿಗಳು. ಆದರೆ, ಸಮ್ಮೇಳನ ನಡೆಯುವ ಸುತ್ತಮುತ್ತ ಬಳೆ, ಬೆಂಡೋಲೆ ಖರೀದಿಗೆಲ್ಲ ಜನರು ಮುಗಿಬಿದ್ದಿದ್ದರು.
ಜೇನುತುಪ್ಪ, ವೈನ್‌, ಕಿತ್ತಲೆ ಖರೀದಿಯ ಜತೆಗೆ ಕಡಿಮೆ ಬೆಲೆಗೆ ಅಂಗಿ, ಪ್ಯಾಂಟು ಮಾರಾಟದ ಭರಾಟೆ ಹೆಚ್ಚಿತ್ತು. ಇವುಗಳ ಜತೆಗೆ ಊಟ ಹಾಗೂ ತಿಂಡಿಯ ವ್ಯವಸ್ಥೆಗೊಳಿಸಿದ ಜಾಗ ಸುಮಾರು ಎರಡು ಕಿ.ಮೀ. ದೂರವಿದ್ದ ಕಾರಣ ಸಮ್ಮೇಳನ ನಡೆಯುವ ಆವರಣದಲ್ಲಿದ್ದ ತಿಂಡಿತಿನಿಸು­ಗಳ ಅಂಗಡಿಗಳಿಗೆ ಮಕ್ಕಳ ಸಮೇತ ದೊಡ್ಡವರೂ ಮುತ್ತಿಗೆ ಹಾಕಿ ತಿನ್ನಲು ಮುಂದಾದರು.

ಕೊಡಗು ಜಿಲ್ಲೆಯಾದ್ಯಂತ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿದ ಪರಿಣಾಮ ವಿದ್ಯಾರ್ಥಿಗಳ ದಂಡು ಹೆಚ್ಚಿತ್ತು. ಹೆತ್ತವರ ಕೈಹಿಡಿದುಕೊಂಡು ಮಕ್ಕಳು ಸಮ್ಮೇಳನ ನಡೆಯುವ ವೇದಿಕೆ ಸುತ್ತಮುತ್ತ ಹಗಲು ಹೊತ್ತು ಸುಳಿದಾಡಿದರೆ, ರಾತ್ರಿ ಹೊತ್ತು ಸ್ವೆಟರ್‌, ಮಂಕಿಟೋಪಿ ಧರಿಸಿಕೊಂಡು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ತಮ್ಮ ಗೆಳೆಯ/ಗೆಳತಿಯರೊಂದಿಗೆ ಕಾಲೇಜಿನ ವಿದ್ಯಾರ್ಥಿಗಳು ಹರಟಿದರೆ, ಅನೇಕರು ಸ್ವಯಂಸೇವಕರಾಗಿ ದುಡಿದರು.

‘ಒಬಾಮ’ ಕನ್ನಡಿಗರು!
ನೂರರ ಗಡಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಪ್ರೊ.­ಜಿ.ಅಶ್ವತ್ಥನಾರಾಯಣ ಒಬಾಮ ಕನ್ನಡಿಗರಿಗೆ ಸ್ವಾಗತ ಎಂದರು. ಒಬಾಮ ಕನ್ನಡಿಗರು ಎಂದರೆ ಓದಲು, ಬರೆಯಲು, ಮಾತನಾಡಲು ಬರುವ ಕನ್ನಡಿ­ಗರು ಎಂದು ಅವರೇ ವಿವರಿಸಿದರು. ಜೊತೆಗೆ ಗೋಷ್ಠಿಗಳತ್ತ ಕಿವಿಯನ್ನು ಮಾತ್ರ ಬಿಟ್ಟು ಜಾತ್ರೆಯತ್ತಲೇ ಸುತ್ತಾಡುತ್ತಿರುವ ಜಂಗಮ ಕನ್ನಡಿಗರಿಗೂ ಸ್ವಾಗತ ಎಂದರು.

ಇದಕ್ಕೂ ಮೊದಲು ಕಾರ್ಯಕ್ರಮ ನಿರ್ವಾಹಕರು ‘ದಯಮಾಡಿ ಬಿಸಲು ಕಾಯುತ್ತಾ ನಿಲ್ಲಬೇಡಿ. ಸಭಾಂಗಣದ ಒಳಕ್ಕೆ ಬನ್ನಿ. ಇಲ್ಲಿ ಬೆಚ್ಚನೆಯ ವಾತಾವರಣ ಇದೆ’ ಎಂದು ಪದೇ ಪದೇ ಕರೆದರೂ ಜನ ಗೋಷ್ಠಿಗಳಿಗೆ ಬರಲಿಲ್ಲ.

ಪುಸ್ತಕ ಮಳಿಗೆ
ನಾ.ಡಿಸೋಜ ಅವರ ಸುಮಾರು 18 ಪುಸ್ತಕಗಳ ಮಾರಾಟ ಮಳಿಗೆಯೊಂದು ಸಮ್ಮೇಳನದಲ್ಲಿ ಇದೆ. ಅದು ಗೀತಾಂಜಲಿ ಪುಸ್ತಕ ಪ್ರಕಾಶಕ ಜಿಬಿಟಿ ಮೋಹನ್‌ ಅವರದು. ‘ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ನಾ.ಡಿಸೋಜ ಅವರ ಪುಸ್ತಕಗಳ ಮಾರಾಟ ಮಳಿಗೆ’ ಎಂಬ ಬ್ಯಾನರ್‌ ಹಾಕಿದ ಪರಿಣಾಮ ಜನರು ಮುಗಿಬಿದ್ದು ಪುಸ್ತಕ ಕೊಳ್ಳೂವ ದೃಶ್ಯ ಬುಧವಾರ ಕಂಡಿತು.

‘ಹಾರುವ ಹಕ್ಕಿಗಳ ಹಸಿರೆಲೆ ತೋರಣ’ ಎಂಬ ಸಮಗ್ರ ಮಿನಿ ಕಾದಂಬರಿಗಳ ಸಂಪುಟ, ಮಕ್ಕಳ ಕಥಾಮಾಲೆಯ ಒಟ್ಟು ಐದು ಕೃತಿಗಳು ಚೆನ್ನಾಗಿ ಮಾರಾಟವಾಗುತ್ತಿವೆ. ಇದರೊಂದಿಗೆ ಗುರುದೇವರ ಕಥೆಗಳು, ಕೊಳಗ ಕಾದಂಬರಿ ಮಾರಾಟ ಕೂಡಾ ಚೆನ್ನಾಗಿದೆ ಸೇಲಾಗುತ್ತಿದೆ’ ಎಂದು ಮೋಹನ್ ತಿಳಿಸಿದರು.

ವೆಬ್‌ಸೈಟ್‌ನಲ್ಲಿ ನೇರ ಪ್ರಸಾರ
ಉಡುಪಿ ಜಿಲ್ಲೆಯ ಸಾಲಿಗ್ರಾಮದ ಪಿ.ವಿ. ಬಾಲಚಂದ್ರ ಅವರು www.LiveNext.in ಅಂತರ್ಜಾಲ ತಾಣದ ಮೂಲಕ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮಗಳನ್ನೆಲ್ಲ ನೇರಪ್ರಸಾರಗೊಳಿಸುತ್ತಿದ್ದಾರೆ. 

‘ವಿಜಾಪುರದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲೂ ವೆಬ್‌ಸೈಟ್‌ ಮೂಲಕ ನೇರಪ್ರಸಾರ ಕೈಗೊಂಡಿದ್ದೆ. ಜಗತ್ತಿ­ನಾದ್ಯಂತ ಸಮ್ಮೇಳನ ನಡೆಯುವುದನ್ನು ಆಸಕ್ತರು ನೋಡಲಿ ಎನ್ನುವ ಕಾರಣದ ಜತೆಗೆ ಸಣ್ಣ ಸೇವೆ ಇದು. ಇದಕ್ಕಾಗಿ ಕಸಾಪ ಪರವಾನಗಿ ಪಡೆದಿರುವೆ’ ಎಂದು ಸಾಲಿಗ್ರಾಮದಲ್ಲಿ ವೆಬ್‌ ವಿನ್ಯಾಸಕರಾಗಿರುವ ಬಾಲಚಂದ್ರ ಹೇಳಿದರು.

ಸಂಸದರ ಪುಸ್ತಕ ಮಳಿಗೆ
ಕೊಡಗು ಹಾಗೂ ಮೈಸೂರಿನ ಸಂಸದರಾದ ಅಡಗೂರು ಎಚ್. ವಿಶ್ವನಾಥ್‌ ಅವರು ತಮ್ಮ ಹಳ್ಳಿಹಕ್ಕಿ  ಪ್ರಕಾಶನದ ಪುಸ್ತಕ ಮಳಿಗೆಯೊಂದನ್ನು ಸಮ್ಮೇಳನದಲ್ಲಿ ತೆರೆದಿದ್ದಾರೆ.

ಬುಧವಾರ ಅವರು ತಮ್ಮ ಮಳಿಗೆಯಲ್ಲಿ ಕುಳಿತು ತಮ್ಮದೇ ಪುಸ್ತಕಗಳನ್ನು ಮಾರಾಟ ಮಾಡಿದರು. ಅವುಗಳಲ್ಲಿ ಹಳ್ಳಿಯ ಹಕ್ಕಿಯ ಹಾಡು, ಮತ ಸಂತೆ, ಆಪತ್ಕಾಲದ ಆಲಾಪನೆಗಳು ಹಾಗೂ ಮಲ್ಲಿಗೆಯ ಮಾತು ಕೃತಿಗಳು ಸೇರಿವೆ. ಇವುಗಳಲ್ಲಿ ಕಳೆದ ವಾರ ಬಿಡುಗಡೆಯಾಗಿದ್ದ ಮಲ್ಲಿಗೆಯ ಮಾತು ಕೃತಿಯ ಒಂದು ಸಾವಿರ ಪ್ರತಿಗಳೆಲ್ಲ ಖರ್ಚಾದ ಪರಿಣಾಮ ಮರುಮುದ್ರಿಸಿ ಬುಧವಾರ ಸಂಜೆ ಮಾರಾಟ ಮಾಡಿದರು.

‘ನೂರು ರೂಪಾಯಿಗೆ ನಾಲ್ಕು ಪುಸ್ತಕಗಳನ್ನು ಮಾರುತ್ತಿದ್ದೇವೆ. ಕೇವಲ ಮುದ್ರಣದ ವೆಚ್ಚ ಮಾತ್ರ ತೆಗೆದುಕೊಳ್ಳುತ್ತಿದ್ದೇವೆ. ಸಾಹಿತಿಗಳು, ಸಾಹಿತ್ಯಾಸಕ್ತರು ರಾಜಕಾರಣಿಗಳ ಕೃತಿಗಳನ್ನು ಸ್ವೀಕರಿಸಬೇಕು. ಏಕೆಂದರೆ, ರಾಜಕಾರಣಿಗಳ ಅನುಭವಗಳು ಅದ್ಭುತ. ಅವು ದಾಖಲಾಗಬೇಕು. ಮುಂದೆ ಮಾರ್ಗದರ್ಶನ ಆಗುತ್ತವೆ. ಜನತಂತ್ರ ವ್ಯವಸ್ಥೆಯಲ್ಲಿ ಮುಖ್ಯ ತಿರುಳೇ ರಾಜಕಾರಣ’ ಎಂದು ವಿಶ್ವನಾಥ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.