ADVERTISEMENT

‘ಸರ್ಕಾರದಿಂದ ಶ್ರದ್ಧಾಂಜಲಿ ವಾಹನ’

ಆಸ್ಪತ್ರೆಗಳಲ್ಲಿ ರೋಗಿ ಮೃತಪಟ್ಟರೆ ಅಂತ್ಯಕ್ರಿಯೆಗಾಗಿ ರಾಜ್ಯದೆಲ್ಲೆಡೆ ಉಚಿತ ಸೇವೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2017, 20:08 IST
Last Updated 15 ಜೂನ್ 2017, 20:08 IST
‘ಸರ್ಕಾರದಿಂದ ಶ್ರದ್ಧಾಂಜಲಿ ವಾಹನ’
‘ಸರ್ಕಾರದಿಂದ ಶ್ರದ್ಧಾಂಜಲಿ ವಾಹನ’   

ಬೆಂಗಳೂರು: ‘ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ರೋಗಿ ಮೃತಪಟ್ಟರೆ ಶವವನ್ನು ಅಂತ್ಯಕ್ರಿಯೆಗಾಗಿ ಸ್ಮಶಾನಕ್ಕೆ ಸಾಗಿಸಲು ಎಲ್ಲ ಕಡೆ ಶ್ರದ್ಧಾಂಜಲಿ ವಾಹನ ಸೇವೆ ಒದಗಿಸಲಾಗುತ್ತಿದೆ’ ಎಂದು ಆರೋಗ್ಯ ಸಚಿವ ರಮೇಶ್‌ ಕುಮಾರ್ ತಿಳಿಸಿದರು.

ವಿಧಾನಸಭೆಯಲ್ಲಿ ಜೆಡಿಎಸ್‌ನ ಪಿ.ಆರ್. ಸುಧಾಕರ್‌ಲಾಲ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಶ್ರದ್ಧಾಂಜಲಿ ಸೇವೆಗಾಗಿ ಪ್ರತಿ ಜಿಲ್ಲೆಗೆ ವಾಹನಗಳನ್ನು ಒದಗಿಸಲಾಗಿದೆ. ನಯಾಪೈಸೆ ಖರ್ಚಿಲ್ಲದೆ ಈ ಸೇವೆ ಒದಗಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ತುಮಕೂರು ಜಿಲ್ಲೆಗೆ ಮೂರು ವಾಹನ ನೀಡಲಾಗಿದೆ’ ಎಂದರು.

‘ತುಮಕೂರಿಗೆ ವಾಹನಗಳು ಬಂದಿಲ್ಲ. ಇರುವ ವಾಹನ ದುರಸ್ತಿ ಮಾಡಿಸಬೇಕಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ’ ಎಂದು ಸುಧಾಕರ್‌ಲಾಲ್ ಆರೋಪಿದಾಗ, ‘ದುರಸ್ತಿಯಲ್ಲಿವೆ ಎಂದು ತಪ್ಪುಮಾಹಿತಿ ನೀಡಿರುವ ಅಧಿಕಾರಿಗಳ ಬಗ್ಗೆ ಮಾಹಿತಿ ತರಿಸಿಕೊಂಡು ‘ಗೌರವ’ದಿಂದ ನೋಡಿಕೊಳ್ಳುತ್ತೇನೆ’ ಎಂದು ಎಚ್ಚರಿಕೆಯ ಉತ್ತರ ನೀಡಿದರು.

‘ಸಚಿವನಾದ ಹೊಸತರಲ್ಲಿ ಕೋಲಾರಕ್ಕೆ ಹೋಗುತ್ತಿದ್ದಾಗ ಆಂಧ್ರಪ್ರದೇಶದ ಕೂಲಿ ಕಾರ್ಮಿಕನೊಬ್ಬ ರಸ್ತೆ ಬದಿಯಲ್ಲಿ ಸತ್ತು ಬಿದ್ದಿರುವುದನ್ನು ನೋಡಿದೆ. ಶವವನ್ನು ಮೃತನ ಊರಿಗೆ ಕಳುಹಿಸಲು ವ್ಯವಸ್ಥೆ ಮಾಡಿ ಎಂದು ಅಧಿಕಾರಿಗಳಿಗೆ ಕರೆ ಮಾಡಿದೆ. ಅದಕ್ಕೆ ಅಧಿಕಾರಿಗಳು, ಮೃತನ ಊರು ಆಂಧ್ರ ಸಾರ್ ಎಂದರು’. ‘ಆಂಧ್ರ ಏನು ಪಾಕಿಸ್ತಾನದ ಆಚೆ ಇದೆಯೇ’ ಎಂದು ಕೇಳಿದೆ.

ಆಗ ಅಧಿಕಾರಿಗಳು, ವಾಹನ ವ್ಯವಸ್ಥೆ ಮಾಡುವುದಾಗಿ ಹೇಳಿದರಾದರೂ ಹಣ ಒದಗಿಸಲು ನಿಯಮದಲ್ಲಿ ಅವಕಾಶ ಇಲ್ಲ ಎಂದೂ ಉತ್ತರಿಸಿದ್ದರು.
‘ನನ್ನ ವಿವೇಚನೆಯಡಿ ಹಣ ಬಿಡುಗಡೆ ಮಾಡುತ್ತೇನೆ’ ಎಂದು ಹೇಳಿದ ಬಳಿಕ ಶವ ಸಾಗಿಸಲು ಅಧಿಕಾರಿಗಳು ಮುಂದಾದರು’ ಎಂದು ಘಟನೆಯೊಂದನ್ನು ಸಚಿವರು ಸದನದಲ್ಲಿ ನೆನಪಿಸಿಕೊಂಡರು.

ಸಂಪುಟ ಸಭೆಯಲ್ಲಿ ತೀರ್ಮಾನ
‘ಸಾರ್ವತ್ರಿಕ ಆರೋಗ್ಯ ಕಾರ್ಡ್‌’ (ಯೂನಿವರ್ಸಲ್ ಹೆಲ್ತ್‌ಕೇರ್ ಕವರೇಜ್) ಒದಗಿಸಿ ರಾಜ್ಯದ ಎಲ್ಲರಿಗೂ ಚಿಕಿತ್ಸಾ ಸೌಲಭ್ಯ ಒದಗಿಸಲಾಗುವುದು ಎಂದು  ರಮೇಶ್‌ಕುಮಾರ್ ತಿಳಿಸಿದರು.

ಜೆಡಿಎಸ್‌ನ ಕೆ. ಗೋಪಾಲಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಬಿಪಿಎಲ್, ಎಪಿಎಲ್ ಎಂದು ನೋಡದೆ ಎಲ್ಲರಿಗೂ ಆರೋಗ್ಯ ಸೇವೆ ಒದಗಿಸಲು ತೀರ್ಮಾನಿಸಲಾಗಿದೆ. ಯಾರೂ ಖಾಸಗಿ ಆಸ್ಪತ್ರೆಗಳ ಮೇಲೆ ಅವಲಂಬಿತರಾಗಬಾರದು. ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿ ಚಿಕಿತ್ಸೆ ಪಡೆದ ಬಳಿಕ ಎರಡನೇ ಅಥವಾ ಮೂರನೇ ಹಂತದ ಚಿಕಿತ್ಸಾ ವೆಚ್ಚ ಭರಿಸುವ ಸಂಬಂಧ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.

‘ಮನೆ ಕೆಲಸದವರು ಸೇರಿದಂತೆ ಎಲ್ಲ ಬಡರೋಗಿಗಳಿಗೂ ಉತ್ತಮ ಗುಣಮಟ್ಟದ ಚಿಕಿತ್ಸಾ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ’ ಎಂದೂ ಸಚಿವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT