ADVERTISEMENT

ಸರ್ಕಾರಿ ಆಸ್ಪತ್ರೆ ನಿರ್ವಹಣೆೆ ಮಠಕ್ಕೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2011, 18:30 IST
Last Updated 6 ಮಾರ್ಚ್ 2011, 18:30 IST
ಸರ್ಕಾರಿ ಆಸ್ಪತ್ರೆ ನಿರ್ವಹಣೆೆ ಮಠಕ್ಕೆ
ಸರ್ಕಾರಿ ಆಸ್ಪತ್ರೆ ನಿರ್ವಹಣೆೆ ಮಠಕ್ಕೆ   

ಶಿವಮೊಗ್ಗ: ಸರ್ಕಾರಿ ಆಸ್ಪತ್ರೆ ನಿರ್ವಹಣೆಗೆ ರಾಜ್ಯದ ಯಾವುದೇ ಮಠ-ಮಂದಿರಗಳು ಮುಂದೆ ಬಂದರೆ ಅವುಗಳಿಗೆ ನೆರವು ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.ನಗರ ಸಮೀಪದ ತೆವರಚಟ್ನಹಳ್ಳಿಯಲ್ಲಿ ಭಾನುವಾರ ‘ತರಳಬಾಳು ಗುರುಭವನ’ಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಸರ್ಕಾರಿ ಆಸ್ಪತ್ರೆಗಳಿಗೆ ಸರ್ಕಾರ ಎಷ್ಟೇ ಹಣ ನೀಡಿದರೂ ಬಡವರಿಗೆ ಉತ್ತಮ ಚಿಕಿತ್ಸೆ ದೊರಕಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ಉತ್ತಮ ನಿರ್ವಹಣೆಗೆ  ಮಠ- ಮಂದಿರಗಳಿಗೆ ಉಸ್ತುವಾರಿ ವಹಿಸಿದರೆ ತಪ್ಪಲ್ಲ ಎಂಬುದು ಸರ್ಕಾರದ ಭಾವನೆ. ಈ ಬಗ್ಗೆ ಗಂಭೀರ ಚಿಂತನೆ ನಡೆದಿದೆ ಎಂದರು.ಸರ್ಕಾರ ಮಾಡುವ ಕೆಲಸವನ್ನು ಮಠ-ಮಂದಿರಗಳು ಮಾಡಿದರೆ, ಅವುಗಳಿಗೆ ನೆರವು ನೀಡಬೇಕಾದ್ದು ಸರ್ಕಾರದ ಕರ್ತವ್ಯ ಎಂದ ಅವರು, ಮುಂದಿನ ವರ್ಷ 1ಲಕ್ಷ ಕೋಟಿ ರೂ ಗಾತ್ರದ ಬಜೆಟ್ ಮಂಡಿಸುವ ಗುರಿ ಇದೆ. ಅದರಲ್ಲಿ 250ರಿಂದ 300 ಕೋಟಿ ರೂ.ಗಳನ್ನು ಕೇವಲ ಮಠ-ಮಂದಿರಗಳ ಅಭಿವೃದ್ಧಿಗೆ ಮೀಸಲಿಟ್ಟರೆ ತಪ್ಪೇನು? ಇದೇ ಪ್ರಶ್ನೆಯನ್ನು ಬಜೆಟ್ ಕಲಾಪದಲ್ಲಿ ವಿರೋಧ ಪಕ್ಷಗಳಿಗೂ ಕೇಳುವವನಿದ್ದೇನೆ ಎಂದು ಹೇಳಿದರು.

10 ಕೋಟಿ ರೂ. ನೆರವು: ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಿದ್ಯಾಭ್ಯಾಸದ ಮಾಡಿದ ತೆವರಚಟ್ನಹಳ್ಳಿಯಲ್ಲಿ ಗುರುಭವನ ನಿರ್ಮಾಣಕ್ಕೆ ಸರ್ಕಾರ ಈಗಾಗಲೇ ಐದು ಕೋಟಿ ರೂ. ನೀಡಿದೆ. ಅಲ್ಲದೇ, ಇದೇ ಗುರುಭವನದಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಸರ್ಕಾರ ಮತ್ತೆ ಐದು ಕೋಟಿ ರೂ. ಮೊದಲ ಕಂತಾಗಿ ಬಿಡುಗಡೆ ಮಾಡಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದರು.

ಶಿಕ್ಷಣ ಕಾಶಿ: ಗುರುಭವನ ಸರ್ವರಿಗೂ ಉಪಯೋಗವಾಗುವ ರೀತಿಯಲ್ಲಿ ನಿರ್ಮಾಣಗೊಳ್ಳಬೇಕು ಎಂಬುದು ತಮ್ಮ ಆಶಯ. ಗುರುಭವನ, ತುಂಗಾನದಿ ದಂಡೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವ ಕಾಶಿಯಾಗಲಿ ಎಂದು ಸಿರಿಗೆರೆ ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.ಸರ್ಕಾರದ ನೆರವಿನ ಜತೆಗೆ ಸಿರಿಗೆರೆ ಮಠವೂ ಐದು ಕೋಟಿ ರೂ. ಸಹಾಯಹಸ್ತ ನೀಡಲಿದೆ ಎಂದು ಸ್ವಾಮೀಜಿ ಪ್ರಕಟಿಸಿದರು.

ಜನರ ಭಾವನೆಗಳಿಗೆ ಸ್ಪಂದಿಸಿ, ಅವರ ಆಪೇಕ್ಷೆಗೆ ಅನುಗುಣವಾಗಿ ರಾಜ್ಯಭಾರ ಮಾಡುವಂತಹದ್ದು ಪರಿಪೂರ್ಣವಾದದ್ದು. ಜನರ ನಿರೀಕ್ಷೆಯ ಮೀರಿ ನಾಡಿನ ಸೇವೆ ಮಾಡುವ ಶಕ್ತಿ ನಿಮಗೆ ಸಿಗಲಿ ಎಂದು ಸ್ವಾಮೀಜಿ, ಮುಖ್ಯಮಂತ್ರಿಗೆ ಇದೇ ಸಂದರ್ಭದಲ್ಲಿ ಹಾರೈಸಿದರು.ಗುರುಭವನ ನಿರ್ಮಾಣಕ್ಕೆ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಸಂಸದ ಬಿ.ವೈ. ರಾಘವೇಂದ್ರ ಸಂಸದರ ನಿಧಿಯಲ್ಲಿ ತಲಾ 10 ಲಕ್ಷ ರೂ. ಅನುದಾನ ಘೋಷಣೆ ಮಾಡಿದರು. ಸಮಾರಂಭದಲ್ಲಿ ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.