ADVERTISEMENT

ಸಾಧಕರ ಆತ್ಮಾಹುತಿ ದುರಂತಕ್ಕೆ ವಿಡಿಯೊ ಸಾಕ್ಷಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 19:59 IST
Last Updated 9 ಏಪ್ರಿಲ್ 2013, 19:59 IST

ಬೀದರ್: `ಸ್ವಾಮೀಜಿಗಳು ಅವರ ಸಾವಿಗೆ ಮುನ್ನ ನನ್ನ ಬಳಿಗೆ ಬರಬೇಕು ಎಂದು ಪ್ರಮಾಣ ಮಾಡಿಸಿದ್ದರು. ನಾವೂ ಪ್ರತಿಜ್ಞೆ ಮಾಡಿದ್ದೆವು. ಅದನ್ನು ಈಡೇರಿಸುತ್ತಿದ್ದೇವೆ...'

ಸೋಮವಾರ ಅಗ್ನಿಪ್ರವೇಶ ಮಾಡಿ ಆತ್ಮಹತ್ಯೆ ಮಾಡಿಕೊಂಡ ತಾಲ್ಲೂಕಿನ ಚೌಳಿ ಮಠದ ಮೂವರು ಸಾಧಕರು (ಕಿರಿಯ ಸ್ವಾಮೀಜಿಗಳು) ವಿಡಿಯೊ ದೃಶ್ಯದಲ್ಲಿ ಹೇಳಿರುವ ಮಾತುಗಳಿವು.

ಮೂವರು ಸಾಧಕರು ಒಬ್ಬರ ನಂತರ ಒಬ್ಬರು ಮಾತನಾಡಿರುವ ಸುಮಾರು ಮೂರು ನಿಮಿಷಗಳ ವಿಡಿಯೊ  ದೃಶ್ಯಾವಳಿಯಲ್ಲಿ ಈ ಮಾತುಗಳನ್ನು ಹೇಳಿದ್ದಾರೆ.

`ಗುರುಗಳು ಕೈಲಾಸಕ್ಕೆ ಬರಲು ಆಜ್ಞೆ ಮಾಡಿದ್ದರು. ಅಗ್ನಿ ಮೂಲಕ ಬರುವಂತೆ ತಿಳಿಸಿದ್ದರು. ಒಂದು ತಿಂಗಳ ಸಮಯ ನೀಡಿದ್ದರು. ಎಲ್ಲ ಸಾಧಕರನ್ನು ಕೇಳಿದೆವು. ಯಾರೂ ಬರಲಿಲ್ಲ. ಈಗ ಅಗ್ನಿ ಮೂಲಕ ಖುಷಿಯಿಂದಲೇ ಗುರುಗಳ ಸೇವೆಗೆ ಹೋಗುತ್ತಿದ್ದೇವೆ. ಇದರ ಹಿಂದೆ ಯಾರದೇ ಒತ್ತಡ ಇಲ್ಲ' ಎಂದು ಪ್ರಣವ್ ಸ್ವಾಮೀಜಿ ಹೇಳಿದ್ದಾರೆ.

`ನಾನು ಜಗನ್ನಾಥ ಸ್ವಾಮೀಜಿ ಮಾತನಾಡುತ್ತಿದ್ದೇನೆ. ಶಿವನ ಸ್ವರೂಪಿಯಾದ ಗುರುಗಳಿಲ್ಲದೆ ನಮಗೆ ಬದುಕಿಲ್ಲ. ಆದ್ದರಿಂದ ನಾವು ಅವರ ಸೇವೆಗಾಗಿ ಕೈಲಾಸಕ್ಕೆ ತೆರಳುತ್ತಿದ್ದೇವೆ' ಎಂದು ಜಗನ್ನಾಥ ಸ್ವಾಮೀಜಿ ನುಡಿದಿದ್ದಾರೆ.

`ಗುರುಗಳು ಅಗ್ನಿ ಮುಖಾಂತರ ಬರುವಂತೆ ಆದೇಶಿಸಿದ್ದಾರೆ. ಅವರ ಆದೇಶದಂತೆ ಕೈಲಾಸಕ್ಕೆ ಹೋಗುತ್ತಿದ್ದೇವೆ. ನೆಂಟರಿಷ್ಟರು, ಬಂಧುಗಳು ದುಃಖ ಪಡಬೇಕಿಲ್ಲ. ನಾವು ಸಂತೋಷದಿಂದಲೇ ಹೋಗುತ್ತಿದ್ದೇವೆ' ಎಂದು ಈರರೆಡ್ಡಿ ಸ್ವಾಮೀಜಿ ಹೇಳಿದ್ದಾರೆ.

ವಿಡಿಯೊ ಈ ಮಾತುಗಳಿಗಷ್ಟೇ ಸೀಮಿತವಾಗಿರುವುದರಿಂದ ಸ್ವಾಮೀಜಿಗಳ ಸಾವಿನ ಕಾರಣದ ಸುಳಿವು ಸಿಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.