ADVERTISEMENT

ಸಾಧನೆ ಮೆರೆದ ಗಣ್ಯರಿಗೆ ಪ್ರಶಸ್ತಿಯ ಸನ್ಮಾನ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2013, 19:30 IST
Last Updated 1 ನವೆಂಬರ್ 2013, 19:30 IST

ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮೆರೆದ 56 ಗಣ್ಯರು ಮತ್ತು ಎರಡು ಸಂಘ–ಸಂಸ್ಥೆಗಳಿಗೆ 2013ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಬೆಂಗಳೂರಿನ ‘ರವೀಂದ್ರ ಕಲಾಕ್ಷೇತ್ರ’ದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.

‘ಪ್ರಜಾವಾಣಿ’ಯ ಸಹ ಸಂಪಾದಕಿ ಸಿ.ಜಿ. ಮಂಜುಳಾ, ‘ಸುಧಾ’ ವಾರಪತ್ರಿಕೆಯ ಸುದ್ದಿ ಸಂಪಾದಕ ಗುಡಿಹಳ್ಳಿ ನಾಗ ರಾಜ ಸೇರಿದಂತೆ  ಗಣ್ಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಪ್ರಶಸ್ತಿಗೆ ಆಯ್ಕೆಯಾದ ಗಣ್ಯರ ಪೈಕಿ ಎಚ್‌. ಫ್ಲೋರಿನಾ ಬಾಯಿ, ಡಾ.ಎಸ್‌. ಅಯ್ಯಪ್ಪನ್‌ ಮತ್ತು ಶೀಲಾಗೌಡ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ. ಅವರಿಗೆ ನಂತರ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕಾರ್ಯಕ್ರಮ ದಲ್ಲಿ ಘೋಷಿಸಲಾಯಿತು.

ಗಾಯಕವಾಡ್‌ ಆಯ್ಕೆ: ಕ್ರೀಡಾ ವಿಭಾಗದಲ್ಲಿ ಬಳ್ಳಾರಿಯ ಜಿ.ಎಚ್‌. ತುಳಸೀಧರ ಅವರ ಹೆಸರನ್ನು ಅಂತಿಮ ಗೊಳಿಸಲಾಗಿತ್ತು. ಆದರೆ ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ಇದೆ ಎಂಬ ಕಾರಣಕ್ಕೆ ಅವರ ಹೆಸರನ್ನು ಕೈಬಿಡಲಾಯಿತು. ಶರತ್‌ ಎಂ. ಗಾಯಕವಾಡ್‌ ಅವರನ್ನು ಆಯ್ಕೆ ಮಾಡಿ, ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ರಾಜಧಾನಿ ಬೆಂಗಳೂರಿನಲ್ಲಿ ಕನ್ನಡೇತರರೇ ಬಹುಸಂಖ್ಯಾತರು ಎಂಬ ಸಂಗತಿ ನೋವು ತರುವಂಥದ್ದು. ಅವರೆಲ್ಲರೂ ಕನ್ನಡದಲ್ಲೇ ವ್ಯವಹರಿಸುವಂತೆ ಮಾಡಬೇಕಾ ಗಿದ್ದು ಇದು ಎಲ್ಲ ಕನ್ನಡಿಗರ ಜವಾಬ್ದಾರಿ’ ಎಂದು ಹೇಳಿದರು.
‘ಡಾ. ಅಯ್ಯಪ್ಪನ್‌ ಅವರನ್ನು ಹೊರತುಪಡಿಸಿ ಇನ್ಯಾರ ಹೆಸರನ್ನೂ ನಾನು ಆಯ್ಕೆ ಸಮಿತಿಗೆ ಸೂಚಿಸಿಲ್ಲ. ಪ್ರಶಸ್ತಿ ಬಯಸಿ ಅರ್ಜಿ ಸಲ್ಲಿಸದವರನ್ನೂ ಸಮಿತಿ ಗುರುತಿಸಿದೆ’ ಎಂದರು.

ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದ ಸಾಹಿತಿ ಕೋ. ಚೆನ್ನಬಸಪ್ಪ, ‘ಕೆಲವರಿಗೆ ತಡವಾಗಿ­ಯಾದರೂ ಪ್ರಶಸ್ತಿ ಬಂದಿರುವುದು ಸಂತಸದ ವಿಚಾರ’ ಎಂದರು. ‘ಕಲಾವಿದರ ವೈದ್ಯಕೀಯ ವೆಚ್ಚಗಳಿಗೆ ಸರ್ಕಾರದಿಂದ ಸಹಾಯ ಬೇಕು’ ಎಂದು ಪ್ರಶಸ್ತಿ ಪುರಸ್ಕೃತ ಕಿರುತೆರೆ ನಟಿ ಗಿರಿಜಾ ಲೋಕೇಶ್‌ ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.