ದಾವಣಗೆರೆ: `ನಾನು ಸಾಧಿಸಬಲ್ಲೆ~ ಎಂಬ ವಿಶ್ವಾಸ ತುಂಬುವ ಶಿಕ್ಷಣ ಇಂದಿನ ಅಗತ್ಯ. ಈ ನಿಟ್ಟಿನಲ್ಲಿ ಶಿಕ್ಷಣ ವ್ಯವಸ್ಥೆಯ ಸ್ವರೂಪ ಬದಲಾಗಬೇಕು ಎಂದು ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಕರೆ ನೀಡಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಬಾಪೂಜಿ ವಿದ್ಯಾಸಂಸ್ಥೆ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಸಂಸ್ಥೆಯ ಅತ್ಯಾಧುನಿಕ ವಿದ್ಯಾರ್ಥಿನಿಲಯ ಹಾಗೂ ಪ್ರಯೋಗಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ 12ನೇ ತರಗತಿ ನಂತರ ಮುಂದೇನು, ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು ಎಂಬ ಒತ್ತಡದಲ್ಲಿ ವಿದ್ಯಾರ್ಥಿಗಳು ಇರುತ್ತಾರೆ. ವಿದ್ಯಾರ್ಥಿಗಳು ಇಷ್ಟಪಟ್ಟಿದ್ದು ಪೋಷಕರಿಗೆ, ಪೋಷಕರು ಒತ್ತಾಯಿಸಿದ್ದು ವಿದ್ಯಾರ್ಥಿಗಳಿಗೆ ಇಷ್ಟವಾಗುವುದಿಲ್ಲ.
ಇದು ಸಲ್ಲ. ಪೋಷಕರು ವಿದ್ಯಾರ್ಥಿಗಳನ್ನು ಪ್ರೀತಿಸುವಷ್ಟೇ ಅವರ ಆಯ್ಕೆ, ಅಭಿರುಚಿಗಳನ್ನು ಇಷ್ಟಪಡಬೇಕು. ವಿಶ್ವಾಸ ಬರುವಂತಹ ವಾತಾವರಣ ನಿರ್ಮಾಣ ಮಾಡಬೇಕು ಎಂದು ಪೋಷಕರು ಹಾಗೂ ಶಿಕ್ಷಕರಿಗೆ ಸಲಹೆ ನೀಡಿದರು.
2020ಕ್ಕೆ ಭಾರತ ಮುಂದುವರಿದ ದೇಶವಾಗಬೇಕು ಎಂಬುದು ನನ್ನ ಕನಸು. ಇದಕ್ಕಾಗಿ ಇನ್ನೂ 8 ವರ್ಷ ಬಾಕಿ ಇವೆ. ಭ್ರಷ್ಟಾಚಾರ, ಪರಿಸರ ಮಾಲಿನ್ಯದಂತಹ ಸಮಸ್ಯೆಗಳು ಅಭಿವೃದ್ಧಿಗೆ ತೊಡಕಾಗಿವೆ. ಇವುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಬೇಕಿದೆ. ಭ್ರಷ್ಟಾಚಾರ ಮುಕ್ತ ಹಾಗೂ ನೈತಿಕ ಸಮಾಜ ನಿರ್ಮಾಣಕ್ಕೆ ನಾನು `ಏನು ಕೊಡುಗೆ ನೀಡಬಲ್ಲೆ~ ಎಂಬುದನ್ನು ಪ್ರತಿಯೊಬ್ಬರೂ ಪ್ರಶ್ನಿಸಿಕೊಳ್ಳಬೇಕು. ಆಗ, ದೇಶದಲ್ಲಿ ಅಭಿವೃದ್ಧಿಯ ನಗೆ ಚೆಲ್ಲುತ್ತದೆ ಎಂದು ಹೇಳಿದರು.
ಪ್ರತಿ ಒಬ್ಬರೂ ತಲಾ 5 ಐದು ಸಸಿಗಳನ್ನು ನೆಟ್ಟು ಬೆಳೆಸುತ್ತೇನೆ. ಸುಂದರವಾದ ಪರಿಸರವನ್ನು ನಿರ್ಮಾಣ ಮಾಡುತ್ತೇನೆ ಹಾಗೂ ತಾಯಿ ಮತ್ತು ದೇಶವನ್ನು ನಗುವಂತೆ ಮಾಡುತ್ತೇನೆ ಎಂದು ನೆರೆದಿದ್ದ ಸಾವಿರಾರು ವಿದ್ಯಾರ್ಥಿಗಳು, ಪೋಷಕರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಯುವಜನಾಂಗ ಶಕ್ತಿಯುತ ಸಂಪನ್ಮೂಲವಾಗಿದೆ. ಹೀಗಾಗಿ, ಯಾವುದೂ ಅಸಾಧ್ಯ ಎಂಬುದಿಲ್ಲ. ನಿರಂತರ ಅಧ್ಯಯನ, ಗುರಿ ಮುಟ್ಟುವವರೆಗೂ ಪ್ರಯತ್ನ, ಜ್ಞಾನ ಸಂಪಾದನೆಯಿಂದಾಗಿ ಎಲ್ಲವನ್ನೂ ಸಾಧ್ಯ ಆಗಿಸಬಹುದು ಎಂದರು.
ಕೇಂದ್ರ ಕಾರ್ಮಿಕ ಸಚಿವ ಎಂ. ಮಲ್ಲಿಕಾರ್ಜುನ ಖರ್ಗೆ ಅವರು `ಸುವರ್ಣ ಬಾಪೂಜಿ~ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಶಾಸಕ, ಸಂಸ್ಥೆ ಗೌರವ ಕಾರ್ಯದರ್ಶಿ ಡಾ.ಶಾಮನೂರು ಶಿವಶಂಕರಪ್ಪ, ಗೌರವ ಕಾರ್ಯದರ್ಶಿ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ, ಮಾಜಿ ಶಾಸಕ ಅಲ್ಲಂ ವೀರಭದ್ರಪ್ಪ, ವಿಧಾನ ಪರಿಷತ್ ಸದಸ್ಯ ಕೊಂಡಯ್ಯ ಮತ್ತು ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.