ADVERTISEMENT

ಸಾಮಾಜಿಕ ನ್ಯಾಯ ಮರೀಚಿಕೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2017, 13:48 IST
Last Updated 13 ಏಪ್ರಿಲ್ 2017, 13:48 IST

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರಿಗೆ ಬಜೆಟ್‌ನಲ್ಲೂ ಸಾಮಾಜಿಕ ನ್ಯಾಯ ಒದಗಿಸುವ ಉಪ ಯೋಜನೆಗಳು ಜಾರಿಗೆ ಬಂದು ಎರಡು ದಶಕ ಕಳೆದಿದೆ. ರಾಜ್ಯ ಬಜೆಟ್ ಮೂಲಕವೇ ಹತ್ತಾರು ಸಾವಿರ ಕೋಟಿ ರೂಪಾಯಿ ಈ ಉಪ ಯೋಜನೆಗಳ ಅಡಿಯಲ್ಲಿ ಹರಿದುಹೋಗಿದೆ. ಇದು ದಲಿತರ ಬದುಕಿನಲ್ಲಿ ಬೆಳಕು ಮೂಡಿಸಿದೆಯೇ ಎಂದು ಹುಡುಕ ಹೊರಟರೆ `ಸಂಭ್ರಮದ ಸುಳಿವೇ ಸಿಗುವುದಿಲ್ಲ.

ದೇಶದಲ್ಲಿ ತಮ್ಮ ಸಮುದಾಯದ ಜನರ ಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲೂ ಪಾಲು ಪಡೆಯುವ ಅವಕಾಶ ದೊರೆತಿರುವುದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮಾತ್ರ. 1976ರಲ್ಲಿ ಈ ಯೋಜನೆಗಳು ರೂಪುಗೊಂಡಿದ್ದವು. ಆರನೇ ಪಂಚವಾರ್ಷಿಕ (1980-1985) ಯೋಜನೆಯ ಅವಧಿಯಲ್ಲಿ ಕೇಂದ್ರ ಯೋಜನಾ ಆಯೋಗ ಈ ಉಪ ಯೋಜನೆಗಳ ಜಾರಿಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿತು. ಅಂದಿನಿಂದ ಜನಸಂಖ್ಯೆಗೆ ಅನುಗುಣವಾಗಿ ಯೋಜನಾ ವೆಚ್ಚದಲ್ಲಿ ಈ ವರ್ಗಗಳಿಗೆ ಪಾಲು ನೀಡದ ಹೊರತು ಬಜೆಟ್‌ಗೆ ಆಯೋಗದ ಒಪ್ಪಿಗೆ ಪಡೆಯುವುದು ಅಸಾಧ್ಯ.

 

ಆರಂಭದಲ್ಲಿ ಈ ಎರಡೂ ವರ್ಗಗಳಿಗೆ ಬಜೆಟ್‌ನ ಒಟ್ಟು ಯೋಜನಾ ವೆಚ್ಚದ ಶೇಕಡ 18ರಷ್ಟು ಮೊತ್ತ ಮೀಸಲಾಗುತ್ತಿತ್ತು. 2001ರ ಜನಗಣತಿ ನಂತರ ಈ ಮೊತ್ತ ಶೇ 22.75ಕ್ಕೆ ಏರಿದೆ. ಪರಿಶಿಷ್ಟ ಜಾತಿ ಉಪ ಯೋಜನೆಗೆ ಶೇ 16.20ರಷ್ಟು ಯೋಜನಾ ವೆಚ್ಚ ಮೀಸಲಾದರೆ, ಪರಿಶಿಷ್ಟ ಜಾತಿಯ ಉಪ ಯೋಜನೆಗೆ ಶೇ 6.55ರಷ್ಟು ಅನುದಾನ ಒದಗಿಸಲಾಗುತ್ತಿದೆ.

ರಾಜ್ಯದಲ್ಲೂ ಪರಿಶಿಷ್ಟ ಜಾತಿ ಉಪ ಯೋಜನೆಗೆ (ಎಸ್‌ಸಿಎಸ್‌ಪಿ) ಶೇ 16.20 ಮತ್ತು ಪರಿಶಿಷ್ಟ ಪಂಗಡದ ಉಪ ಯೋಜನೆಗೆ (ಟಿಎಸ್‌ಪಿ) ಶೇ 6.55ರಷ್ಟು ಅನುದಾನ ಒದಗಿಸಲಾಗುತ್ತಿದೆ. ಕಳೆದ ಏಳು ವರ್ಷಗಳಲ್ಲಿ ಬಜೆಟ್‌ನ ಯೋಜನಾ ಅನುದಾನದಲ್ಲಿ ಈ ಎರಡೂ ಉಪ ಯೋಜನೆಗಳಿಗೆ 30,000 ಕೋಟಿ ರೂಪಾಯಿಗೂ ಹೆಚ್ಚು ಮೊತ್ತ ನಿಗದಿ ಮಾಡಲಾಗಿತ್ತು. ಈ ಪೈಕಿ 20,000 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚವಾಗಿದೆ.

ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುಷ್ಠಾನದ ನೋಡಲ್ ಇಲಾಖೆಯಾಗಿರುವ ಸಮಾಜ ಕಲ್ಯಾಣ ಇಲಾಖೆಯ ದಾಖಲೆಗಳ ಪ್ರಕಾರ ಎಲ್ಲ ವರ್ಷಗಳಲ್ಲೂ ಬಜೆಟ್‌ನ ಯೋಜನಾ ವೆಚ್ಚದಲ್ಲಿ ಶೇ 22.75ರಷ್ಟು ದಲಿತ ಕಲ್ಯಾಣ ಕಾರ್ಯಕ್ರಮಕ್ಕೆ ನಿಗದಿಯಾಗುತ್ತಿದೆ. ಬಹುತೇಕ ವರ್ಷಗಳಲ್ಲಿ ಘೋಷಣೆಯಾದ ಮೊತ್ತದಲ್ಲಿ ಶೇ 75ಕ್ಕಿಂತ ಹೆಚ್ಚು ಬಿಡುಗಡೆ ಆಗಿದೆ. ಅದು ಪೂರ್ಣ ಖರ್ಚಾಗಿದೆ. ಇಷ್ಟೆಲ್ಲ ಆದರೂ ಬಡತನ ರೇಖೆಗಿಂತ ಕೆಳಗಿರುವ ದಲಿತರ ಸಂಖ್ಯೆಯಲ್ಲೂ ಕೊಂಚ ಇಳಿಕೆ ಆಗಿಲ್ಲ!

20 ಸಾವಿರ ಕೋಟಿ: 2005-06ರಿಂದ 2011-12ರವರೆಗೆ ರಾಜ್ಯ ಬಜೆಟ್‌ನಲ್ಲಿ ಎಸ್‌ಸಿಎಸ್‌ಪಿ ಯೋಜನೆಗೆ 19,051 ಕೋಟಿ ರೂಪಾಯಿ ಮೀಸಲಿಡಲಾಗಿತ್ತು. ಈ ಪೈಕಿ ರೂ 14,947 ಕೋಟಿ ಬಿಡುಗಡೆ ಆಗಿದ್ದು, ವೆಚ್ಚವನ್ನೂ ಮಾಡಲಾಗಿದೆ. ಇದೇ ಅವಧಿಯಲ್ಲಿ ಟಿಎಸ್‌ಪಿ ಅಡಿಯಲ್ಲಿ ಏಳು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ವೆಚ್ಚವಾಗಿದೆ.


ರಾಜ್ಯದ ಯೋಜನಾ ಗಾತ್ರದಲ್ಲಿ ಹೆಚ್ಚಳವಾದಂತೆಲ್ಲ ಉಪ ಯೋಜನೆಗಳ ಅನುದಾನದ ಮೊತ್ತವೂ ಏರುತ್ತಿದೆ. 2005-06ರಲ್ಲಿ ರಾಜ್ಯ ಬಜೆಟ್‌ನಲ್ಲಿ ಎಸ್‌ಸಿಎಸ್‌ಪಿಗೆ ನಿಗದಿ ಮಾಡಿದ್ದ ಅನುದಾನದ ಮೊತ್ತ 628.80 ಕೋಟಿ ರೂಪಾಯಿ ಇತ್ತು. 2012-13ರ ಬಜೆಟ್‌ನಲ್ಲಿ ಈ ಬಾಬ್ತು ರೂ 5,125 ಕೋಟಿ ಮೀಸಲಿಡಲಾಗಿದೆ. 
 
ಕೃಷಿ, ಶಿಕ್ಷಣ, ಕಂದಾಯ, ಸಾರಿಗೆ, ನಗರಾಭಿವೃದ್ಧಿ, ತೋಟಗಾರಿಕೆ, ಅರಣ್ಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ವಸತಿ, ಲೋಕೋಪಯೋಗಿ, ನೀರಾವರಿ, ಆರೋಗ್ಯ, ಪ್ರವಾಸೋದ್ಯಮ ಸೇರಿದಂತೆ 28ರಿಂದ 35 ಇಲಾಖೆಗಳಿಗೆ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನ ಹಂಚಿಕೆ ಮಾಡಲಾಗುತ್ತದೆ.

ಹೆಚ್ಚಿನ ಮೊತ್ತ ಆಯಾ ಇಲಾಖೆಗಳ ಮೂಲಕವೇ ವೆಚ್ಚವಾಗುತ್ತದೆ. ಒಂದಷ್ಟು ಮೊತ್ತ `ಕ್ರೋಢೀಕೃತ ಅನುದಾನ~ದ ರೂಪದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಕೈಸೇರುತ್ತದೆ. ಸಮಾಜ ಕಲ್ಯಾಣ ಇಲಾಖೆಯ ಕೈಸೇರುವ ಹೆಚ್ಚಿನ ಮೊತ್ತ, ಅದರ ಅಧೀನದಲ್ಲಿರುವ 270 ಶಾಲೆಗಳು, ವಸತಿ ಶಾಲೆಗಳ ನಿರ್ವಹಣೆಗಾಗಿಯೇ ವೆಚ್ಚವಾಗುತ್ತದೆ. ಒಂದಷ್ಟು ಮೊತ್ತ `ಅಂಬೇಡ್ಕರ್ ಅಭಿವೃದ್ಧಿ ನಿಗಮ~ಕ್ಕೆ ವರ್ಗಾವಣೆಯಾಗುತ್ತದೆ.

ಆರೇ ವರ್ಷಗಳ ಅವಧಿಯಲ್ಲಿ ಬಿಡುಗಡೆ ಆದ 20 ಸಾವಿರ ಕೋಟಿ ರೂಪಾಯಿ ಸಂಪೂರ್ಣವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ನೇರವಾಗಿ ತಲುಪಿದೆಯೇ? ಎಂಬ ಪ್ರಶ್ನೆಯನ್ನು ಸಮಾಜ ಕಲ್ಯಾಣ ಇಲಾಖೆಯ ಮುಂದಿಟ್ಟರೆ ನಿಖರವಾದ ಉತ್ತರ ದೊರೆಯದು. ಇಲಾಖೆಯ ಬೆರಳು ನಿಧಾನಕ್ಕೆ ಈ ಯೋಜನೆಯ ವ್ಯಾಪ್ತಿಯಲ್ಲಿರುವ ಬೇರೆ ಇಲಾಖೆಗಳತ್ತ ಹೊರಳುತ್ತದೆ.

ಆಯಾ ಇಲಾಖೆಗಳೇ ತಮ್ಮ ವ್ಯಾಪ್ತಿಯಲ್ಲಿ ನಿಗದಿತ ಮೊತ್ತವನ್ನು ವೆಚ್ಚ ಮಾಡುತ್ತವೆ ಎಂಬ ಉತ್ತರ ದೊರೆಯುತ್ತದೆ.

ಆದರೆ, ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಯ ಅನುದಾನ ಎಲ್ಲಿಗೆ ಹರಿಯುತ್ತಿದೆ ಎಂಬ ನಿಖರ ಮಾಹಿತಿ ಆ ಸಮುದಾಯದ ಬಹುತೇಕ ಚುನಾಯಿತ ಜನಪ್ರತಿನಿಧಿಗಳು, ದಲಿತ ಸಂಘಟನೆಗಳಿಗೂ ಗೊತ್ತಿಲ್ಲ. ಕೆಲವರಿಗಷ್ಟೇ ಇದರ ಸಣ್ಣ ಸುಳಿವು ಇದೆಯಾದರೂ, ಇನ್ನೂ ಎಲ್ಲವನ್ನೂ ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗುತ್ತಿಲ್ಲ.

`ಬರಿ ಮಾತು; ಕೃತಿಯಲ್ಲ: ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುಷ್ಠಾನದ ಕುರಿತು ಹೆಚ್ಚು ಆಸಕ್ತಿ ತಳೆದಿರುವವರಲ್ಲಿ ಚಾಮರಾಜನಗರ ಸಂಸದ ಆರ್.ಧ್ರುವನಾರಾಯಣ್ ಒಬ್ಬರು. ಅವರ ಪ್ರಕಾರ, ಈ ಉಪ ಯೋಜನೆಗಳ ಅಡಿ ನಿಗದಿತ ಅನುದಾನ ಪಡೆದ ಇಲಾಖೆಗಳು ತಮ್ಮ ಮುಖ್ಯ ಯೋಜನೆಗಳಿಗೆ ಅದನ್ನು ಬಳಸಿಕೊಂಡಿದ್ದೇ ಹೆಚ್ಚು. ದಲಿತರೂ ಆ ಯೋಜನೆಗಳ ಅನುಕೂಲ ಪಡೆಯುತ್ತಾರೆ ಎಂಬ ಕಾರಣ ನೀಡಿ ಉಸ್ತುವಾರಿ ಸಮಿತಿಯ ಒಪ್ಪಿಗೆ ಪಡೆಯಲಾಗುತ್ತದೆ. ಇದರಿಂದಾಗಿ ಜನಸಂಖ್ಯೆ ಆಧಾರಿತ ಅನುದಾನ ನಿಗದಿ ಕೇವಲ ದಾಖಲೆಗಳಲ್ಲಷ್ಟೇ ಉಳಿದಿದೆ.

`ಪ್ರಜಾವಾಣಿ~ ಜೊತೆ ಮಾತನಾಡಿದ ಅವರು, `ಕೆಲವು ಇಲಾಖೆಗಳಿಗೆ ಉಪ ಯೋಜನೆಗಳಿಗೆ ಮೀಸಲಾದ ಅನುದಾನದ ಬಳಕೆಯ ಬಗ್ಗೆಯೇ ಆಸಕ್ತಿ ಇಲ್ಲ. ನಾನು ಶಾಸಕನಾಗಿದ್ದ ಅವಧಿಯಲ್ಲಿ ವಿಧಾನಸಭೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮಿತಿ ಇದೇ ವಿಷಯದ ಬಗ್ಗೆ ಪರಿಶೀಲನೆ ನಡೆಸಿತ್ತು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ 340 ಕೋಟಿ ರೂಪಾಯಿ ಎಸ್‌ಸಿಎಸ್‌ಪಿ ಅನುದಾನ ಬಳಕೆಯಾಗದೇ ಉಳಿದಿತ್ತು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ರೂ 560 ಕೋಟಿ ಹಾಗೆಯೇ ಇತ್ತು. ಈ ಮೊತ್ತವನ್ನು ಹೇಗೆ ಬಳಕೆ ಮಾಡಬೇಕು ಎಂಬುದು ಗೊತ್ತಾಗದೇ ಬಾಕಿ ಇರಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಆದರೆ, ಎರಡೂ ಸಂಸ್ಥೆಗಳ ವ್ಯಾಪ್ತಿಯಲ್ಲಿ ದಲಿತರಿಗಾಗಿ ಮಾಡಬಹುದಾದ ಕೆಲಸಗಳು ಸಾಕಷ್ಟು ಇದ್ದವು~ ಎಂದು ವಿವರಿಸಿದರು.

ಲೋಕೋಪಯೋಗಿ ಇಲಾಖೆ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನವನ್ನು ಮುಖ್ಯ ರಸ್ತೆಗಳ ಅಭಿವೃದ್ಧಿಗಾಗಿಯೇ ಬಳಸಿಕೊಳ್ಳುತ್ತಿತ್ತು. 2009ರಲ್ಲಿ ವಿಧಾನಸಭೆಯ ಸಮಿತಿಯ ಪರಿಶೀಲನೆ ವೇಳೆ ಆಕ್ಷೇಪ ಎತ್ತಿದ ಬಳಿಕ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನವಸತಿ ಪ್ರದೇಶಗಳನ್ನು ನೇರವಾಗಿ ಸಂಪರ್ಕಿಸುವ ರಸ್ತೆಗಳ ಅಭಿವೃದ್ಧಿಗೆ ಅನುದಾನ ನೀಡಲಾಗುತ್ತಿದೆ. ಇಂತಹ ಬದಲಾವಣೆಗಳು ಆಗದ ಹೊರತೂ `ಜನಸಂಖ್ಯೆಯ ಪ್ರಮಾಣಕ್ಕೆ ಸಮನಾದ ಅನುದಾನ~ ಎಂಬ ಘೋಷಣೆಗೆ ಅರ್ಥವೇ ಬರುವುದಿಲ್ಲ ಎನ್ನುತ್ತಾರೆ ಅವರು.

ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಪ್ರಕಾರ, `ಎರಡೂ ಉಪ ಯೋಜನೆಗಳಿಗೆ ಒದಗಿಸಿದ ಪೂರ್ಣ ಮೊತ್ತ ಸದ್ಬಳಕೆ ಆಗಿದ್ದರೆ ದಲಿತರಲ್ಲಿ ಬಡತನ ನಿವಾರಣೆ ಆಗಿರುತ್ತಿತ್ತು. ಆದರೆ, ದಲಿತರ ಕಲ್ಯಾಣಕ್ಕೆ ಹಣ ವೆಚ್ಚ ಮಾಡಬೇಕಾದ ಹೊಣೆ ಇರುವ ಇಲಾಖೆಗಳು ಏನು ಮಾಡುತ್ತವೆ ಎಂಬುದು ಯಾರಿಗೂ ತಿಳಿಯುವುದಿಲ್ಲ. ಉಪ ಯೋಜನೆಗಳ ಅನುಷ್ಠಾನದಲ್ಲಿ ಪಾರದರ್ಶಕತೆ ಬರುವವರೆಗೂ ಈ ಸಮಸ್ಯೆಗಳಿಗೆ ಪರಿಹಾರ ದೊರೆಯದು~ ಎನ್ನುತ್ತಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.