ADVERTISEMENT

ಸಾವಿರ ಕಂಬದ ಬಸದಿಗೆ ಭಾರಿ ಹಾನಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2011, 19:30 IST
Last Updated 1 ಮಾರ್ಚ್ 2011, 19:30 IST

ಮೂಡುಬಿದಿರೆ: ಇತಿಹಾಸ ಪ್ರಸಿದ್ಧ ಮೂಡುಬಿದಿರೆಯ ಸಾವಿರ ಕಂಬದ ಬಸದಿಗೆ ಹೊಂದಿಕೊಂಡಿರುವ ಬೈರಾದೇವಿ ಮಂಟಪದಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದು ಭಕ್ತರ ಆತಂಕಕ್ಕೆ ಕಾರಣವಾಗಿದೆ. ಬೈರಾದೇವಿ ಮಂಟಪದ ಮೇಲ್ಛಾವಣಿ, ಶಿಲಾ ಕಲ್ಲಿನಿಂದ ನಿರ್ಮಿಸಿದ ಪ್ರವೇಶ ಭಾಗದ ಮೇಲ್ಭಾಗ ಹಾಗೂ ಮಾನಸ್ತಂಭ, ಸಮೀಪದ ಗುರುಬಸದಿ ಮತ್ತು ವಿಕ್ರಮ ಶೆಟ್ಟಿ ಮುಂತಾದ ಬಸದಿಗಳಲ್ಲೂ ಬಿರುಕು ಕಾಣಿಸಿದೆ. ಶನಿವಾರ ಈ ಪ್ರಕರಣ ಮಠದ ಗಮನಕ್ಕೆ ಬಂದಿತ್ತು.

ಕಲ್ಲು ಗಣಿಗಾರಿಕೆ ಕಾರಣ: ಸಾವಿರ ಕಂಬದ ಬಸದಿ ಹಾಗೂ ಹತ್ತಿರದ ಇನ್ನೆರಡು ಬಸದಿಗಳಲ್ಲಿ ಬಿರುಕು ಕಾಣಿಸಿಕೊಂಡ ಬಗ್ಗೆ ಜೈನ ಮಠದ ಸ್ವಸ್ತಿ ಭಟ್ಟಾರಕ ಚಾರುಕೀರ್ತಿ ಶ್ರೀಗಳು ಸೋಮವಾರ ಮಾಧ್ಯಮಗಳ ಜತೆ ಮಾತನಾಡಿ,  ‘ಇತ್ತೀಚಿನ ದಿನಗಳಲ್ಲಿ ಮೂಡುಬಿದಿರೆ ಪರಿಸರದಲ್ಲಿ ಕಲ್ಲು ಗಣಿಗಾರಿಕೆ ಹೆಚ್ಚುತ್ತಿರುವುದರಿಂದ ಅಲ್ಲಿ ಬಳಸುವ ಸ್ಫೋಟಕ, ಜಾತ್ರೆ, ಉತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳ ವೇಳೆ ಭಾರೀ ಶಬ್ದ ಉಂಟುಮಾಡುವ ಕದೋನಿ ಬಳಕೆ, ಬಸದಿಗಳ ಸಮೀಪದಲ್ಲಿ ಹಾದುಹೋಗುವ ಹೆದ್ದಾರಿಯಲ್ಲಿ ಸಂಚರಿಸುವ ಭಾರಿ ವಾಹನಗಳಿಂದ ಭೂಮಿ ಕಂಪಿಸುವುದೇ ಬಸದಿಗಳ ಬಿರುಕಿಗೆ ಕಾರಣ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

‘ಬಸದಿ ಸುತ್ತ 10 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ಮತ್ತು ಒಂದು ಕಿ.ಮೀ. ವ್ಯಾಪ್ತಿಯ ರಸ್ತೆಗಳಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ, ಅವುಗಳ ಓಡಾಟಕ್ಕೆ ಬೈಪಾಸ್ ರಸ್ತೆ ನಿರ್ಮಿಸಬೇಕು. ಪರಿಸರದಲ್ಲಿ ನಡೆಯುವ ಜಾತ್ರೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳ ವೇಳೆ ಕದೋನಿ ಬಳಕೆ ನಿಲ್ಲಿಸಬೇಕು ಎಂದು ಅವರು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಭಕ್ತರ ಸಹಕಾರ ಪಡೆದು ತಜ್ಞ ಶಿಲ್ಪಿಗಳಿಂದ ಬಸದಿಯನ್ನು ಮರು ದುರಸ್ತಿಗೊಳಿಸಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.