ಧಾರವಾಡ: ‘ಸಾಹಿತಿಯು ರಾಜಕೀಯಕ್ಕೆ ಹೋದರೆ, ಅವನೊಳಗಿನ ಲೇಖಕ ಸಾಯ್ತಾನೆ. ಹಾಗೆ ಸಾಯೋಕೆ ನನಗೆ ಇಷ್ಟವಿಲ್ಲ’
– ಇದು ಸಾಹಿತಿ ಎಸ್.ಎಲ್.ಭೈರಪ್ಪ ಅವರ ನೇರ ಮಾತು.
‘ಪ್ರಜಾವಾಣಿ’ ಸಹಯೋಗದಲ್ಲಿ ನಡೆದ ಧಾರವಾಡ ಸಾಹಿತ್ಯ ಸಂಭ್ರಮದ ಕೊನೆಯ ದಿನವಾದ ಭಾನುವಾರ ಸಂಜೆ ಸಭಿಕರು ಕೇಳಿದ ‘ನೀವೇಕೆ ರಾಜಕೀಯ ಪಕ್ಷಕ್ಕೆ ಸೇರಬಾರದು. ಅದರಲ್ಲೂ ಬಿಜೆಪಿ ನಿಮಗೆ ಹೆಚ್ಚು ಸೂಕ್ತವಾಗುತ್ತೆ...’ ಎಂಬ ಪ್ರಶ್ನೆ ಹಾಗೂ ಸಲಹೆಗೆ ಮೇಲಿನಂತೆ ಉತ್ತರಿಸಿದರು.
ನಾನು ಬಿಜೆಪಿಗೆ ಸೇರಿದವನಲ್ಲ. ಆದರೆ ಹಿಂದಿನ ಜನಸಂಘದ ಆಲೋಚನಾಕ್ರಮದ ಬಗ್ಗೆ ಹೆಚ್ಚು ಅಧ್ಯಯನ ಮಾಡಿದ್ದೇನೆ. ರಾಜಕೀಯ ಪಕ್ಷಕ್ಕೆ ಸೇರಿದವರು ಚುನಾವಣೆ ಎದುರಿಸಬೇಕಾಗಿರುವ ಕಾರಣ ಎಲ್ಲರಿಗೂ ಒಳ್ಳೆಯವರಂತೆ ಇರಬೇಕು. ನಾನು ಚುನಾವಣೆ ಎದುರಿಸಬೇಕಿಲ್ಲ. ಹೀಗಾಗಿ ನೇರಾನೇರ ಮಾತನಾಡುತ್ತೇನೆ ಎಂದು ತಮ್ಮ ಉತ್ತರವನ್ನು ವಿಸ್ತರಿಸಿದರು.
ಗೋಷ್ಠಿಯಲ್ಲಿ ನಡೆದ ಸವಾಲ್–ಜವಾಬ್ ಸಾರ ಸಂಗ್ರಹ ಇಲ್ಲಿದೆ...
ಕನ್ನಡಕ್ಕೆ ಕವಿಗಳೇ ಇರಲ್ಲ: ಇಂಗ್ಲಿಷ್ ಮಾಧ್ಯಮ ಹಾವಳಿಯಿಂದ ಮಕ್ಕಳ ಸಾಹಿತ್ಯ ಸೃಷ್ಟಿ ಶಕ್ತಿ ಕಡಿಮೆಯಾಗ್ತಿದೆ. ನಮ್ಮ ಅಭಿವ್ಯಕ್ತಿ ನಮ್ಮ ಭಾಷೆಯಲ್ಲೇ ಆಗಬೇಕು. ಮಾತೃಭಾಷೆಯಷ್ಟು ಸಹಜವಾಗಿ ಇಂಗ್ಲಿಷ್‌ನಲ್ಲಿ ಸೃಜನಶೀಲ ಅಭಿವ್ಯಕ್ತಿ ಸಾಧ್ಯವಿಲ್ಲ. ಇಂಗ್ಲಿಷನ್ನು ಬೇಕಿದ್ದರೆ ಒಂದು ಭಾಷೆಯಾಗಿ ಕಲಿಸಿ, ಆದರೆ ಕಲಿಕೆಯ ಮಾಧ್ಯಮವಾಗಿ ಬೇಡ. ಇಂಗ್ಲಿಷ್ ಮಾಧ್ಯಮದ ಹಾವಳಿ ಇಡಿ ದೇಶದ ಸಂಸ್ಕೃತಿಯನ್ನು ಹಾಳು ಮಾಡ್ತಿದೆ. ಸರ್ಕಾರ ಮೊದಲು ಕನ್ನಡ ಮಾಧ್ಯಮ ಶಾಲೆಗಳಿಗೆ ಶಕ್ತಿ ತುಂಬಬೇಕು. ಮೇಷ್ಟ್ರುಗಳು ಬುದ್ಧಿವಂತರಾದರೆ, ಹಿಂದಿನಂತೆ ಶ್ರದ್ಧೆಯಿಂದ ಪಾಠ ಮಾಡಿದರೆ ಯಾವ ತಂದೆ ತಾಯಿಯೂ ಇಂಗ್ಲಿಷ್ ಮಾಧ್ಯಮ ಶಾಲೆಗೆ ಮಕ್ಕಳನ್ನು ಸೇರಿಸಲು ಹಣ ಹಾಳು ಮಾಡುವುದಿಲ್ಲ. ಬುದ್ಧಿವಂತಿಕೆ ಮತ್ತು ಇಂಗ್ಲಿಷ್ ಮಾಧ್ಯಮ ಎಂಬ ಪದಗಳನ್ನು ಸಂವಾದಿ ಬಳಸಿ ನಾವು ಗೊಂದಲ ಮಾಡಿಕೊಳ್ಳುತ್ತಿದ್ದೇವೆ.
ಏನೋ ತೋಚ್ತು ಅದ್ಕೆ ಬರ್ದೆ: ಲೇಖಕನೊಬ್ಬ ತುಂಬ ಸಲ ‘ನಾನೇಕೆ ಬರೆದೆ?’ ಅಂತ ಕೇಳಿಕೊಳ್ಳಬಾರದು. ಅವನು ಅದೊಂದೇ ಪ್ರಶ್ನೆಯನ್ನು ಕೇಳಿಕೊಳ್ಳುತ್ತಿದ್ದರೆ ಸೃಜನಶೀಲತೆ ಮುಂದೆ ಹೋಗಲ್ಲ. ಏನೋ ತೋಚ್ತು, ಅದ್ಕೆ ಬರ್ದೆ ಅಂತ ದೂರ ಇರೋದು ಒಳ್ಳೇದು. ತತ್ವಶಾಸ್ತ್ರದ ವಿದ್ವಾಂಸ ಆಗಬೇಕೆಂದು ಹೊರಟ ನಾನು, ಅದರಲ್ಲೇ ಪಿಎಚ್.ಡಿಯನ್ನೂ ಮಾಡಿದ್ದೆ. ಆದರೆ ನನಗೆ ಸಾಹಿತ್ಯವೇ ಇಷ್ಟವಾಯಿತು. ತತ್ವಶಾಸ್ತ್ರದ ಗುರಿಯೂ ಸತ್ಯಾನ್ವೇಷಣೆ, ಸಾಹಿತ್ಯ ಮಾಡುವುದೂ ಅದನ್ನೇ. ಆದರೆ ಅನ್ವೇಷಣೆ ಮತ್ತು ವ್ಯಾಖ್ಯಾನದ ವಿಧಾನ ಮಾತ್ರ ಭಿನ್ನ.
ನನ್ನ 28ನೇ ವಯಸ್ಸಿನಲ್ಲಿ ಕಾದಂಬರಿ ಪ್ರಕಾರ ಪ್ರೀತಿಸಲು ಶುರು ಮಾಡಿದೆ. ವಂಶವೃಕ್ಷ ನನ್ನ ಮೊದಲ ಮುಖ್ಯ ಕಾದಂಬರಿ. ನಾನು ಬರವಣಿಗೆಯನ್ನು ತುಂಬಾ ಗಂಭೀರವಾಗಿ ತಗೊಳ್ತೀನಿ. ಇತರ ಲೇಖಕರಿಗೂ ಅದನ್ನೇ ಹೇಳ್ತೀನಿ. ಯಾವ ಪ್ರಕಾರ ಸಾಧ್ಯ ಎಂದು ಕಂಡುಕೊಳ್ಳಿ, ಗಂಭೀರವಾಗಿ ಅಧ್ಯಯನ ನಡೆಸಿ, ಬರೆಯಿರಿ. ಭಾಷೆಯ ಬಗ್ಗೆ ಎಚ್ಚರದಿಂದಿರಿ.
ಬರೆಯೋಕೆ ಮುಂಚೆ ‘ಅಧ್ಯಯನ’ (ಕ್ಷೇತ್ರಕಾರ್ಯ) ಮಾಡಬೇಕು. ‘ಕಲ್ಪನೆ’ಯಲ್ಲಿ ‘ವಸ್ತು’ ಬೆಳೆಯಬೇಕು. ‘ಪ್ರತಿಭೆ’ಯಿಂದ ‘ಸ’ದ ಹದ ಮುಟ್ಟಬೇಕು. ಆಗ ಒಂದು ಸೃಜನಶೀಲ ಕೃತಿ ಹುಟ್ಟುತ್ತೆ. ನನ್ನ ದಾಟು ಕಾದಂಬರಿ ಭಾರತದ 14 ಭಾಷೆಗೆ ಅನುವಾದವಾಗಿದೆ. ಎಲ್ಲರಿಗೂ ಅದು ‘ಸತ್ಯ’ ಎನಿಸಿದೆ– ಇಷ್ಟವಾಗಿದೆ. ಮಾತ್ರವಲ್ಲ, ನಮ್ಮೂರಿನ ಕಥೆ ಅನ್ನಿಸಿದೆ. ಅದಕ್ಕೆ ಮುಖ್ಯ ಕಾರಣ ಸತ್ಯ, ಅದಿಲ್ಲದೆ ಕೃತಿಗೆ ಶಕ್ತಿ ಬರಲ್ಲ.
ಸತ್ಯ ಬಿಟ್ಟು ದೇಶ ಕಟ್ಟೋಕೆ ಆಗಲ್ಲ: ಆವರಣ ಐತಿಹಾಸಿಕ ಕಾದಂಬರಿ. ಇತಿಹಾಸದಲ್ಲಿ ಏನು ನಡೀತು ಅನ್ನೋದ್ನ ಹೇಳುತ್ತೆ. ಅದನ್ನು ಓದಿದವರು ಇಂಥ ಕೃತಿಯನ್ನು ಈಗ ಏಕೆ ಬರೆಯಬೇಕಿತ್ತು? ಇದು ದೇಶ ಒಡೆಯೋ ಯತ್ನವಲ್ಲವೇ? ಅಂತ ಕೇಳ್ತಾರೆ. ಸತ್ಯ ಬಿಟ್ಟು ದೇಶ ಕಟ್ಟೋಕೆ ಆಗಲ್ಲ. ಆವರಣವನ್ನು ಮೆಚ್ಚಿ 3, ವಿರೋಧಿಸಿ 2 ಪುಸ್ತಕಗಳು ಬಂದವು. ಮೆಚ್ಚಿದವರು– ವಿರೋಧಿಸಿದವರು ಅದರಲ್ಲಿರುವ ಕಥೆ ಹೇಳುವ ಹೊಸ ರೀತಿಯ ‘ತಂತ್ರ’ದ ಬಗ್ಗೆ ಬರೆಯಲಿಲ್ಲ. ಸಿದ್ಧಾಂತಗಳಿಂದಾಚೆಗೆ ಒಂದು ಸಾಹಿತ್ಯ ಕೃತಿಯಾಗಿ ಅದನ್ನು ಗಮನಿಸಲಿಲ್ಲ.
ಕನಸಿನ ಭಾರತ: ಭ್ರಷ್ಟಾಚಾರ ಇಲ್ಲದ– ಜಾತಿ ಭಾವನೆ ಇಲ್ಲದ ಭಾರತ ನನ್ನ ಕನಸು. ಭ್ರಷ್ಟಾಚಾರಕ್ಕೂ ಜಾತಿ ಪದ್ಧತಿಯೇ ಮೂಲಕ ಕಾರಣ. ಚುನಾವಣೆಯಲ್ಲಿ ಜಾತಿ ಲೆಕ್ಕಾಚಾರ ಹೋದರೆ ಒಂದು ಹಂತದ ಸುಧಾರಣೆ ಆರಂಭವಾದಂತೆಯೇ ಸರಿ.
ಕಾದಂಬರಿ ಬರೆಯೋರು ಯಾರು?: ಎಸ್.ಆರ್.ಹಿರೇಮಠರು ಒಳ್ಳೇ ಕೆಲಸ ಮಾಡ್ತಿದ್ದಾರೆ. ಅವರನ್ನು ನಾವೆಲ್ಲಾ ಬೆಂಬಲಿಸಬೇಕು. ಅವರಂತೆ ನಾನೂ 24 ಗಂಟೆ ಭ್ರಷ್ಟಾಚಾರದ ಬಗ್ಗೆಯೇ ಅಧ್ಯಯನ ಆರಂಭಿಸಿದರೆ ಕಾದಂಬರಿ ಬರೆಯೋರು ಯಾರು? ಎಲ್ಲರೂ ಎಲ್ಲ ಕೆಲಸ ಮಾಡಲು ಸಾಧ್ಯವಿಲ್ಲ.
ಮಡೆಸ್ನಾನ ಹೋದ್ರೆ ಇನ್ನೊಂದು ಬರುತ್ತೆ: ಸಮಾಜದಲ್ಲಿ ಎಷ್ಟೋ ಸ್ತರದ ಮಾನಸಿಕ ಸಮಸ್ಯೆಗಳಿರುತ್ತವೆ. ಅಸಹಾಯಕರಾಗಿ ಹರಕೆ ಹೊರುವುದು, ಶಕ್ತಿಶಾಲಿ ದೇವರನ್ನು ಹುಡುಕುವುದು ಮಾಡ್ತಾರೆ. ವೈಚಾರಿಕವಾಗಿ ನೋಡಿದರೆ ಇಂಥವರಿಗೆ ಮನಃಶಾಸ್ತ್ರಜ್ಞರಿಂದ ಚಿಕಿತ್ಸೆ ಕೊಡಿಸಬೇಕು. ವಾಸ್ತವವನ್ನು ಅರ್ಥ ಮಾಡಿಕೊಳ್ಳುವ ಮನಸ್ಥಿತಿ ಬಂದರೆ ನಮಗೆ ದೇವರೇ ಬೇಕಿಲ್ಲ. ಒತ್ತಾಯದಿಂದ ಮಡೆಸ್ನಾನ ಹೋಗಿಸ್ತೀನಿ ಅಂದ್ರೆ ಇನ್ನೊಂದು ಸ್ನಾನ ಬರುತ್ತೆ.
ಪುಸ್ತಕ ಹಂಚೋದು ಕ್ರೈಂ ಅಲ್ಲ: ನಿನ್ನೆ ಗೋಷ್ಠಿಯಲ್ಲಿ ಮಾತನಾಡಿದ ಕೆಲವರು ‘ಆವರಣ’ದ ಪ್ರತಿಗಳನ್ನು ಕೆಲವರು ಉಚಿತವಾಗಿ ಹಂಚಿದರು ಅಂತ ದೂರಿದರು. ಪುಸ್ತಕ ಹಂಚೋದು ಕ್ರೈಂ ಅಲ್ಲವಲ್ಲ. ಕರ್ನಾಟಕದಲ್ಲಿ ಮಾತ್ರವಲ್ಲ ಮಹಾರಾಷ್ಟ್ರದಲ್ಲಿಯೂ ಮದುವೆಯಂಥ ಸಮಾರಂಭಗಳಲ್ಲಿ ನನ್ನ ಪುಸ್ತಕಗಳನ್ನು ಗಿಫ್ಟ್ ಕೊಡ್ತಾರೆ. ಮಂದ್ರ ಕಾದಂಬರಿಯನ್ನೂ ಎಷ್ಟೋ ಜನ ಐದಾರು ಕಾಪಿ ಖರೀದಿಸಿ ಗೆಳೆಯರಿಗೆ ಕೊಟ್ಟರು. ‘ಮಂದ್ರ’ವೇನು ಆವರಣ ಅಲ್ಲವಲ್ಲ. ನಾನು ಯಾವುದನ್ನೂ ವಿವಾದವಾಗಲಿ ಅಂತ ಬರೆಯಲ್ಲ. ಕೆಲವರ ಮನದಲ್ಲಿ ವಿವಾದ ಹುಟ್ಟುತ್ತೆ..., ಸಂತೋಷ.
ಜೀವನ ಇಷ್ಟೇನೆ: ನನ್ನ ಕಾದಂಬರಿಗಳಲ್ಲಿ ಪಾತ್ರಗಳು ‘ಜೀವನ ಇಷ್ಟೇ’ ಎಂಬ ಭಾವ ತಳೆಯುವ ಬಗ್ಗೆ ಕೆಲವರು ಪ್ರಸ್ತಾಪಿಸುತ್ತಾರೆ. ಜೀವನದ ಬಗ್ಗೆ ತುಂಬ ಗಂಭೀರವಾಗಿ ಆಲೋಚನೆ ಮಾಡಿದರೆ ‘ಜೀವನ ಅಂದ್ರೆ ಇಷ್ಟೆ’ ಅನ್ನೋ ಭಾವ ಬರುತ್ತೆ. ಅದರಿಂದ ತಪ್ಪಿಸಿಕೊಳ್ಳೋಕೆ ಆಗಲ್ಲ. ಎಲ್ಲ ಇದ್ರೂ ಆಯಸ್ಸು ಕಾಯಲ್ಲ. ಬುದ್ಧ ಯಾಕೆ ಅರಮನೆ ಬಿಟ್ಟು ಹೋದ. ಮಹಾಭಾರತದ ಸ್ಥಾಯಿ ಭಾವ ಯಾವುದು?
ಸಸ್ಯಾಹಾರ– ಮಾಂಸಾಹಾರ: ಮಾಂಸಾಹಾರಿ ಆದ್ರೆ ಮಾತ್ರ ಪ್ರಗತಿಪರ; ಇಲ್ಲದಿದ್ದರೆ ಪ್ರಗತಿ ವಿರೋಧಿ ಎಂದು ಹೇಳೋಕೆ ಆಗಲ್ಲ. ಬೇರೆ ಪ್ರಾಣಿಗಳು ಕಡಿದು ತಿನ್ನೋಕೆ ಮಾತ್ರ ಇದೆಯೇ? ನಮಗೂ ಪ್ರಾಣಿಗಳಿಗೂ ಇರೋ ಸಂಬಂಧವೇನು? ಬೌದ್ಧರ ಕಥೆಗಳ ಪ್ರಕಾರ ಜನ್ಮಜನ್ಮಾಂತರಗಳಲ್ಲಿ ನಮ್ಮ ಆತ್ಮ ಏನೇನೋ ಆಗಿರತ್ತೆ. ಸಸ್ಯಾಹಾರಕ್ಕೆ ಇದೇ ಮೂಲ ತತ್ವ. ಜೈನರು ಸಸ್ಯಾಹಾರ ಪ್ರತಿಪಾದಿಸುವ ಮೂಲಕ ಅಹಿಂಸೆಯನ್ನು ತಾತ್ವಿಕ ಅಂತ್ಯಕ್ಕೆ ತಂದರು. ಕ್ರಮೇಣ ಬ್ರಾಹ್ಮಣರೂ ಇದನ್ನು ಅನುಸರಿಸಿದರು.
ಮನುಷ್ಯನಿಗೆ ದನಗಳ ಜೊತೆಗೆ ಭಾವನಾತ್ಮಕ ಸಂಬಂಧವಿದೆ. ಕೇವಲ ಹಾಲು ಮಾತ್ರವಲ್ಲ; ಈಚೆಗೆ ಪ್ರಚಲಿತಕ್ಕೆ ಬರುತ್ತಿರುವ ಸಾವಯವ ಕೃಷಿಗೂ ದನಗಳೇ ಮೂಲ ತತ್ವ. ದನ ಹಾಲು ಕೊಡೋದು ನಿಲ್ಲಿಸಿದ್ರೂ ಗೊಬ್ಬರ ಕೊಡುತ್ತಲೇ ಇರುತ್ತೆ, ಅದು ಸತ್ತ ಮೇಲೂ ಭೂಮಿಗೆ ಉಪಯೋಗಿ. ಈ ಹಿನ್ನೆಲೆಯಲ್ಲಿ ನನ್ನ ತಬ್ಬಲಿಯು ನೀನಾದೆ ಮಗನೆ ಕಾದಂಬರಿ ಹುಟ್ಟಿತು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.