ADVERTISEMENT

ಸಿಂಡಿಕೇಟ್‌ ಸದಸ್ಯನ ಅಂಕಪಟ್ಟಿ ನಕಲಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2017, 19:44 IST
Last Updated 24 ಅಕ್ಟೋಬರ್ 2017, 19:44 IST

ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯ ಅಬ್ದುಲ್‌ ಹಕೀಂ ಅವರ ಪದವಿ ಅಂಕಪಟ್ಟಿಗಳು ನಕಲಿ ಎಂಬುದು ಸಾಬೀತಾಗಿದೆ.

ಈ ವಿಷಯವನ್ನು ಸ್ವತಃ ವಿ.ವಿ. ಕುಲಸಚಿವ ಡಿ.ಪಾಂಡುರಂಗಬಾಬು ತಿಳಿಸಿದ್ದಾರೆ.

ಅಂಕಪಟ್ಟಿಯ ನೈಜತೆಗೆ ಸಂಬಂಧಿಸಿದಂತೆ ತಾಲ್ಲೂಕಿನ ಕಂಪ್ಲಿ ಪೊಲೀಸ್‌ ಠಾಣೆಯಲ್ಲಿ ಎಚ್‌.ಎಂ. ಸೋಮನಾಥ ಎಂಬುವವರು ದೂರು ದಾಖಲಿಸಿದ್ದರು. ದೂರು ಆಧರಿಸಿ ಅಲ್ಲಿನ ಠಾಣೆಯ ಸಿಪಿಐ, ಕುಲಸಚಿವರಿಗೆ ಪತ್ರ ಬರೆದು ಮಾಹಿತಿ ಕೇಳಿದ್ದರು. ಹೀಗಾಗಿ ಕುಲಸಚಿವರು, ಬುಂದೇಲ್‌ಖಂಡ ವಿಶ್ವವಿದ್ಯಾಲಯಕ್ಕೆ ಸೆ. 22ರಂದು ಪತ್ರ ಬರೆದು ಮಾಹಿತಿ ಕೇಳಿದ್ದರು. ಹಕೀಂ ಅವರ ಪದವಿ ಅಂಕಪಟ್ಟಿಗಳು ನಕಲಿ ಎಂದು ಅಲ್ಲಿಯ ವಿ.ವಿ. ಮಾಹಿತಿ ನೀಡಿದೆ.

ADVERTISEMENT

ಬುಂದೇಲ್‌ಖಂಡ ವಿ.ವಿ. ಪದವಿ ಅಂಕಪಟ್ಟಿ ಆಧರಿಸಿ ಹಕೀಂ ಅವರು 2008ರಲ್ಲಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಎಂ.ಎ.ಪತ್ರಿಕೋದ್ಯಮ ಹಾಗೂ ಕುವೆಂಪು ವಿ.ವಿ.ಯಲ್ಲಿ ಎಂ.ಎ. ರಾಜ್ಯಶಾಸ್ತ್ರ ಪೂರ್ಣಗೊಳಿಸಿದ್ದಾರೆ. ಅವರು 2014ರಲ್ಲಿಯೂ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯರಾಗಿದ್ದರು.

‘ಶೀಘ್ರದಲ್ಲೇ ಕುವೆಂಪು ವಿಶ್ವವಿದ್ಯಾಲಯದ ಪ್ರಮಾಣ ಪತ್ರಗಳನ್ನೂ ಪರಿಶೀಲಿಸಿ ಮುಂದುವರಿಯಲಾಗುವುದು’ ಎಂದು ಹಂಪಿ ಕನ್ನಡ ವಿ.ವಿ. ಕುಲಪತಿ ಪ್ರೊ. ಮಲ್ಲಿಕಾ ಎಸ್‌. ಘಂಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.