ADVERTISEMENT

ಸಿಇಟಿ: ಇಂದು ಸಿಎಂ ಸಭೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 19:30 IST
Last Updated 19 ಡಿಸೆಂಬರ್ 2013, 19:30 IST

ಬೆಂಗಳೂರು: 2006ರ ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ಕಾಯ್ದೆ ಜಾರಿಗೆ ಸಂಪುಟದಲ್ಲಿ ಅಸಮಾಧಾನ ವ್ಯಕ್ತವಾದ ಬೆನ್ನಿಗೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದಾರೆ.

ಉನ್ನತ ಶಿಕ್ಷಣ ಸಚಿವ ಆರ್‌.ವಿ.­ದೇಶಪಾಂಡೆ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಹಾಗೂ ಹಿರಿಯ ಅಧಿಕಾರಿ­ಗಳ ಸಭೆಯನ್ನು ಶುಕ್ರವಾರ ಕರೆದಿ­ರುವ ಸಿದ್ದರಾಮಯ್ಯ ಅವರು ವಿವಾ­ದಕ್ಕೆ ಇತಿಶ್ರೀ ಹಾಡುವ ನಿರೀಕ್ಷೆ ಇದೆ.

ಗುರುವಾರ ಬೆಳಿಗ್ಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಿಇಟಿ ವಿಷಯ ಪ್ರಸ್ತಾಪಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ.ಪಾಟೀಲ, 2006ರ ಕಾಯ್ದೆ ಜಾರಿಯ ವಿರುದ್ಧ ವಿದ್ಯಾರ್ಥಿ ಸಂಘಟನೆಗಳು ಹೋರಾಟದ ಸಿದ್ಧತೆ ನಡೆಸುತ್ತಿರುವುದರಿಂದ ಲೋಕಸಭಾ ಚುನಾವಣೆ ವೇಳೆ ಪಕ್ಷದ ಹಿನ್ನಡೆಗೆ ಇದು ಕಾರಣ ಆಗಬಹುದು ಎಂಬ ಆತಂಕ ವ್ಯಕ್ತಪಡಿಸಿದರು.

ಇದಕ್ಕೆ ದನಿಗೂಡಿಸಿದ ಇನ್ನೂ ಕೆಲ ಸಚಿವರು, ಸರ್ಕಾರ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ಪರವಾಗಿದೆ ಎಂಬ ಅಭಿಪ್ರಾಯ ಮೂಡುವ ಸಾಧ್ಯತೆ ಇದೆ. ವಾಸ್ತವ ಸ್ಥಿತಿಯನ್ನು ಜನತೆಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಬೇಕು ಎಂದು ಸಲಹೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ವರ್ಷದ ಮಟ್ಟಿಗೆ ಕಾಯ್ದೆಯನ್ನು ತಡೆಹಿಡಿದು ಮೊದಲಿನ ಹಾಗೆ ಪರಸ್ಪರ ಮಾತುಕತೆ ಮೂಲಕ ಶುಲ್ಕ ನಿಗದಿ, ಸೀಟು ಹಂಚಿಕೆ ಮಾಡುವ ಕುರಿತು ಕೆಲ ಸಚಿವರು ಪ್ರಸ್ತಾಪಿಸಿದರು ಎನ್ನಲಾಗಿದೆ.

ಈ ವಿಷಯ ಸಂಪುಟದಲ್ಲಿ ಪ್ರಸ್ತಾಪ ಆದಾಗ ಸಚಿವರಾದ ದೇಶಪಾಂಡೆ ಮತ್ತು ಶರಣಪ್ರಕಾಶ  ಹಾಜರಿರಲಿಲ್ಲ. ಹೀಗಾಗಿ ಅವರೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ. ಇದಾದ ಕೆಲ ಗಂಟೆಗಳ ನಂತರ ‘ಕೃಷ್ಣಾ’ದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಸಿದ್ದರಾಮಯ್ಯ, ‘ಈ ವಿಚಾರದಲ್ಲಿ ಕೆಲವರು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಅನ್ಯಾಯ ಆಗಲು ರಾಜ್ಯ ಸರ್ಕಾರ ಅವಕಾಶ ನೀಡುವುದಿಲ್ಲ’ ಎಂದರು.

‘ಜೆಡಿಎಸ್‌–ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ 2006ರಲ್ಲಿ ಈ ಕಾಯ್ದೆಯನ್ನು ರೂಪಿಸಲಾಗಿತ್ತು. ಬಿಜೆಪಿ ಕೂಡ ಈ ಕಾಯ್ದೆ ಸಿದ್ಧಪಡಿಸುವಲ್ಲಿ ಭಾಗಿಯಾಗಿದೆ. ಈಗ ಅನಗತ್ಯ ಗೊಂದಲ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ’ ಎಂದು ಪ್ರತಿಕ್ರಿಯಿಸಿದರು. ತಡೆಹಿಡಿಯುವ ಸಾಧ್ಯತೆ: 2006ರ ಕಾಯ್ದೆ ಅನುಷ್ಠಾನದಿಂದ ಆಗುವ ಸಾಧಕ – ಬಾಧಕಗಳ ಬಗ್ಗೆ ಚರ್ಚೆ ನಡೆಸಿದ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

ಉನ್ನತ ಶಿಕ್ಷಣ ಇಲಾಖೆಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಕಾಯ್ದೆ ಅನುಷ್ಠಾನ ಕುರಿತು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಿದ್ದಾರೆ. ಇದಾದ ನಂತರ ಇದನ್ನು ತಡೆಹಿಡಿಯಬೇಕೇ ಅಥವಾ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಸೂಕ್ತ ಬದಲಾವಣೆ ಮಾಡಬೇಕೇ ಎಂಬ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎನ್ನಲಾಗಿದೆ.

ಬಿಜೆಪಿ ಮತ್ತು ವಿದ್ಯಾರ್ಥಿ ಸಂಘಟನೆಗಳು ಕಾಯ್ದೆ ಜಾರಿಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡಲಿದೆ. ಅಗತ್ಯ ಬಿದ್ದರೆ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳೊಂದಿಗೆ ಚರ್ಚೆ ನಡೆಸಲಾಗುತ್ತದೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.