ADVERTISEMENT

ಸಿಇಟಿ ಕಚೇರಿ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2013, 19:59 IST
Last Updated 11 ಜುಲೈ 2013, 19:59 IST

ಬೆಂಗಳೂರು: ಇ- ಪಾವತಿ ಮೂಲಕ ಶುಲ್ಕ ಕಟ್ಟಲು ತೊಂದರೆಯಾಗಿದೆ. ಶುಲ್ಕ ಪಾವತಿಸಿದ್ದರೂ ಪ್ರವೇಶ ಪತ್ರ ಡೌನ್‌ಲೋಡ್ ಆಗುತ್ತಿಲ್ಲ ಎಂದು ಆರೋಪಿಸಿ ಸಾವಿರಾರು ವಿದ್ಯಾರ್ಥಿಗಳು, ಪೋಷಕರು ಗುರುವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಬುಧವಾರ ಮೊದಲ ಸುತ್ತಿನ ಸೀಟು ಹಂಚಿಕೆಯಾಗಿದ್ದು, ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್, ವಾಸ್ತುಶಿಲ್ಪ, ಬಿ.ಟೆಕ್, ಬಿವಿಎಸ್ಸಿ ಕೋರ್ಸ್‌ಗಳಿಗೆ ಒಟ್ಟು 69,641 ಮಂದಿ ಸೀಟು ಆಯ್ಕೆ ಮಾಡಿಕೊಂಡಿದ್ದಾರೆ. ಶುಲ್ಕ ಪಾವತಿಸಲು ಪ್ರಾಧಿಕಾರದ ಪೋರ್ಟಲ್‌ನಲ್ಲಿ ಚಲನ್ ಲಭ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶುಲ್ಕ ಪಾವತಿಸಿದ್ದರೂ ಪ್ರವೇಶ ಪತ್ರ ಡೌನ್‌ಲೋಡ್ ಆಗುತ್ತಿಲ್ಲ ಎಂದು ಸುಮಾರು ಎರಡು ಸಾವಿರ ವಿದ್ಯಾರ್ಥಿಗಳು ದೂರಿದರು.

ಏಕಕಾಲಕ್ಕೆ ಹೆಚ್ಚಿನ ವಿದ್ಯಾರ್ಥಿಗಳು ವೆಬ್‌ಪೋರ್ಟಲ್‌ಗೆ ಎಂಟ್ರಿ ಆದರೆ ಸರ್ವರ್ ಡೌನ್ ಆಗುತ್ತದೆ. ಈ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲಾಗಿದ್ದು, ಸಂಜೆ ವೇಳೆಗೆ ಸಮಸ್ಯೆ ನಿವಾರಣೆಯಾಗಿದೆ ಎಂದು ಎನ್‌ಐಸಿ ಅಧಿಕಾರಿಗಳು ತಿಳಿಸಿದರು.

ಇಂಡಿಯನ್ ಬ್ಯಾಂಕ್ ಶಾಖೆಗಳಲ್ಲಿ ಚಲನ್ ಮೂಲಕ ನೇರವಾಗಿ ಹಣ ಪಾವತಿಸಿದ್ದಾರೆ. ಆದರೆ, ಸಿಇಟಿ ಸಂಖ್ಯೆ ನಮೂದಿಸಿಲ್ಲ. ಇದರಿಂದಾಗಿ ಪಾವತಿಯಾಗಿರುವುದು ಯಾರ ಹಣ ಎಂದು ಗೊತ್ತಾಗುತ್ತಿರಲಿಲ್ಲ. ಅದನ್ನು ಪತ್ತೆ ಹಚ್ಚಲು ಸಾಕಷ್ಟು ಸಮಯ ಬೇಕಾಯಿತು. ಇದರಿಂದಾಗಿ ವಿಳಂಬ ಆಯಿತು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ ಎಸ್.ಪಿ.ಕುಲಕರ್ಣಿ ಅವರು ತಿಳಿಸಿದರು.

ಟೀಕೆ: `ಮೈಸೂರಿನ ವೈದ್ಯಕೀಯ ಕಾಲೇಜಿನಲ್ಲಿ ನನ್ನ ಮಗಳಿಗೆ ಎಂಬಿಬಿಎಸ್ ಸೀಟು ಹಂಚಿಕೆಯಾಗಿದೆ. ಶುಲ್ಕ ಪಾವತಿ ಬಗ್ಗೆ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಯಾವುದೇ ಮಾಹಿತಿ ಇಲ್ಲ. ಶುಲ್ಕ ಪಾವತಿಸಲು ಜುಲೈ 15 ಕೊನೆಯ ದಿನ. ಶನಿವಾರ, ಭಾನುವಾರ ರಜಾ ದಿನ. ಹೀಗಾಗಿ ಶುಲ್ಕ ಪಾವತಿಗೆ ಕೇವಲ ಎರಡು ದಿನ ಅಷ್ಟೇ ಲಭ್ಯವಾಗಲಿದೆ' ಎಂದು ಪೀಣ್ಯದ ಉದ್ಯಮಿ ಮಹಾಂತೇಶ್ ರೆಡ್ಡಿ ದೂರಿದರು.

ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಶುಲ್ಕ ಪಾವತಿ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಎರಡು ಸುತ್ತುಗಳಲ್ಲಿ ಮಾತ್ರ ಸೀಟು ಆಯ್ಕೆಗೆ ಅವಕಾಶ ಇದ್ದು, ಈಗ ಶುಲ್ಕ ಪಾವತಿ ಮಾಡದೆ ಇದ್ದರೆ ಎರಡನೇ ಸುತ್ತಿನಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ ಎಂದು ಬಿಇ ಸೀಟು ಆಯ್ಕೆ ಮಾಡಿಕೊಂಡಿರುವ ಸಿ ಮೇಘನಾ ದೂರಿದರು.

ಶುಲ್ಕ ಪಾವತಿ ವಿವರ: ನೆಟ್‌ಬ್ಯಾಂಕ್, ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಮೂಲಕ 3,500, ಇಂಡಿಯನ್ ಬ್ಯಾಂಕ್ ಕೌಂಟರ್‌ಗಳ ಮೂಲಕ 9000 ಹಾಗೂ ಇಂಡಿಯನ್ ಬ್ಯಾಂಕ್ ಹೊರತುಪಡಿಸಿ ಇತರ ಬ್ಯಾಂಕುಗಳಲ್ಲಿ ನೆಫ್ಟ್ ಹಾಗೂ ಆರ್‌ಟಿಜಿಎಸ್ ಮೂಲಕ 3000 ವಿದ್ಯಾರ್ಥಿಗಳು ಶುಲ್ಕ ಪಾವತಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.