ADVERTISEMENT

ಸಿಎಂ, ಈಶ್ವರಪ್ಪ ವಿರುದ್ಧ ಕೋರ್ಟ್ ಅತೃಪ್ತಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 16:30 IST
Last Updated 21 ಫೆಬ್ರುವರಿ 2011, 16:30 IST

ಬೆಂಗಳೂರು:  ಕಳೆದ ತಿಂಗಳು ರಾಜ್ಯದಲ್ಲಿ ನಡೆದ ಬಂದ್‌ಗೆ ಸಂಬಂಧಿಸಿದಂತೆ ಕೋರ್ಟ್‌ನ ನೋಟಿಸ್‌ಗೆ ಪ್ರತಿಕ್ರಿಯೆ ನೀಡದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರ ಬಗ್ಗೆ ಹೈಕೋರ್ಟ್ ಸೋಮವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಈ ಹಿನ್ನೆಲೆಯಲ್ಲಿ ಬಂದ್‌ಗೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯ ತೀರ್ಪನ್ನು ಇವರಿಬ್ಬರ ವಕೀಲರ ಅನುಪಸ್ಥಿತಿಯಲ್ಲಿಯೇ ನೀಡುವುದಾಗಿ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಹಾಗೂ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ಎಚ್ಚರಿಸಿದೆ.

ರಾಜಕೀಯ ಪಕ್ಷಗಳು ಬಂದ್‌ಗೆ ಕರೆ ನೀಡಬಾರದು ಎಂಬ ಸುಪ್ರೀಂಕೋರ್ಟ್‌ನ ತೀರ್ಪಿನ ನಡುವೆಯೂ ಕಳೆದ ಜ.22ರಂದು ನಿಯಮ ಉಲ್ಲಂಘಿಸಿ ಬಂದ್ ನಡೆದಿರುವುದಾಗಿ ದೂರಿ ವಕೀಲ ಬಿ.ಬೋಪಣ್ಣ ಅವರು ಸಲ್ಲಿಸಿರುವ ಅರ್ಜಿ ಇದಾಗಿದೆ. ಈ ರೀತಿಯ ಬಂದ್ ಇನ್ನು ಮುಂದೆ ನಡೆಯದಂತೆ ಹಾಗೂ ಅಂದು ನಡೆದ ಬಂದ್‌ನಿಂದ ಉಂಟಾದ ಸುಮಾರು 5ಸಾವಿರ ಕೋಟಿ ರೂಪಾಯಿಗಳನ್ನು ಪರಿಹಾರದ ರೂಪದಲ್ಲಿ ಸರ್ಕಾರದ ಬೊಕ್ಕಸಕ್ಕೆ ಭರಿಸಲು ಈಶ್ವರಪ್ಪನವರಿಗೆ ಆದೇಶಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ. ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ಯಡಿಯೂರಪ್ಪ ಹಾಗೂ ಈಶ್ವರಪ್ಪನವರಿಗೆ ಕಳೆದ ಬಾರಿ ಪ್ರಕರಣದ ವಿಚಾರಣೆ ವೇಳೆ ನೋಟಿಸ್ ಜಾರಿಗೆ ಪೀಠ ಆದೇಶಿಸಿತ್ತು. ಈ ನೋಟಿಸ್ ಅವರ ಕೈ ತಲುಪಿರುವ ಬಗ್ಗೆ ಸೋಮವಾರ ವಿಚಾರಣೆ ವೇಳೆ ವಕೀಲರು ತಿಳಿಸಿದರು.

ಆದರೆ ವಿಚಾರಣೆ ನಡೆಯುವ ದಿನಾಂಕ ಗೊತ್ತು ಮಾಡಿದ್ದರೂ (ಸೋಮವಾರ) ಅವರು ತಮ್ಮ ಪರ ವಾದ ಮಂಡನೆಗೆ ವಕೀಲರನ್ನು ಕಳಿಸದೇ ಇದ್ದುದು ನ್ಯಾಯಮೂರ್ತಿಗಳಿಗೆ ಸರಿಕಾಣಲಿಲ್ಲ. ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣಾ ಹೇಳಿಕೆ ಸಲ್ಲಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಆದೇಶಿಸಿದ ಪೀಠ ವಿಚಾರಣೆಯನ್ನು ಮುಂದೂಡಿತು.

ಮುತ್ತಪ್ಪ ರೈ ಅರ್ಜಿ
ತಮಗೆ ಸೂಕ್ತ ಪೊಲೀಸ್ ರಕ್ಷಣೆ ನೀಡಲು ಸಂಬಂಧಿತ ಅಧಿಕಾರಿಗಳು ವಿಫಲವಾಗಿರುವುದಾಗಿ ದೂರಿ ಹಿಂದೆ ಭೂಗತ ಚಟುವಟಿಕೆಯಲ್ಲಿ ತೊಡಗಿದ್ದ ಮುತ್ತಪ್ಪ ರೈ ಅವರು ಹೈಕೋರ್ಟ್ ಮೊರೆ ಹೋಗಿದ್ದಾರೆ. 2008ರಿಂದ ತಾವು ಗೃಹ ಇಲಾಖೆ ಹಾಗೂ ಇತರ ಅಧಿಕಾರಿಗಳಿಗೆ ಸಲ್ಲಿಸಿರುವ ಮನವಿಗೆ ಅವರು ಸರಿಯಾಗಿ ಸ್ಪಂದಿಸಿಲ್ಲ ಎಂದಿರುವ ರೈ, ತಮಗೆ ರಕ್ಷಣೆ ಒದಗಿಸಲು ಪೊಲೀಸರಿಗೆ ಆದೇಶಿಸುವಂತೆ ಕೋರಿದ್ದಾರೆ.

ಭೂಗತ ಜಗತ್ತನ್ನು ತೊರೆದು ಹಲವು ವರ್ಷ ಕಳೆದಿದ್ದರೂ ತಮಗೆ ಇನ್ನೂ ಜೀವ ಬೆದರಿಕೆ ಒಡ್ಡಲಾಗುತ್ತಿದೆ. ಈಗ ಇರುವ ಖಾಸಗಿ ರಕ್ಷಣಾ ಸಿಬ್ಬಂದಿ ಸೌಕರ್ಯ ತಮಗೆ ಸಾಕಾಗುತ್ತಿಲ್ಲ. ಸರ್ಕಾರದಿಂದ ಪೊಲೀಸ್ ರಕ್ಷಣೆ ನೀಡಿದರೆ ಅದಕ್ಕೆ ತಗಲುವ ವೆಚ್ಚವನ್ನು ತಾವೇ ಭರಿಸಲು ಸಿದ್ಧವಿರುವುದಾಗಿ ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.

ವಿವಾದಕ್ಕೆ ಸಂಬಂಧಿಸಿದಂತೆ ಗೃಹ ಇಲಾಖೆ, ರಾಜ್ಯ ಪೊಲೀಸ್ ಮಹಾನಿರ್ದೇಶಕ, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೇರಿದಂತೆ ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೆ ಸೋಮವಾರ ಆದೇಶಿಸಿರುವ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ವಿಚಾರಣೆಯನ್ನು ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.