ADVERTISEMENT

ಸಿ.ಎಂ. ಕೊಂದರೂ ಆಶ್ಚರ್ಯ ಇಲ್ಲ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2018, 13:18 IST
Last Updated 7 ಮಾರ್ಚ್ 2018, 13:18 IST
ಸಿ.ಎಂ. ಕೊಂದರೂ ಆಶ್ಚರ್ಯ ಇಲ್ಲ
ಸಿ.ಎಂ. ಕೊಂದರೂ ಆಶ್ಚರ್ಯ ಇಲ್ಲ   

ಹೊಸಪೇಟೆ: ‘ಹಾಡಹಗಲೇ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಅವರ ಕೊಲೆ ಯತ್ನ ನಡೆದಿದೆ. ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಯಾರಾದರೂ ಕೊಂದರೆ ಆಶ್ಚರ್ಯ ಪಡಬೇಕಿಲ್ಲ. ಹಾಗಾಗಿ ಸಿ.ಎಂ.ಗೆ ಸೂಕ್ತ ರಕ್ಷಣೆ ಕೊಡಬೇಕೆಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ಪತ್ರ ಬರೆದು ಒತ್ತಾಯಿಸುತ್ತೇನೆ’ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಬುಧವಾರ ಸಂಜೆ ಇಲ್ಲಿ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯದಲ್ಲಿ ಯಾರಿಗೂ ರಕ್ಷಣೆ ಇಲ್ಲ. ಸ್ವತಃ ಸಿ.ಎಂ.ಗೆ ಅವರ ರಕ್ಷಣೆ ಮಾಡಿಕೊಳ್ಳಲು ಆಗುತ್ತಿಲ್ಲ. ಜನರ ಪ್ರಾಣ ಉಳಿಯಬೇಕು. ಹೆಂಗಸರ ಶೀಲ ಉಳಿಯಬೇಕು. ಸಿ.ಎಂ. ಜೀವಕ್ಕೂ ಬೆಲೆ ಇದೆ. ಕೂಡಲೇ ರಕ್ಷಣೆ ಕಲ್ಪಿಸುವಂತೆ ಕೇಂದ್ರಕ್ಕೆ ಆಗ್ರಹಿಸುತ್ತೇನೆ. ಈ ಕುರಿತು ಸ್ವತಃ ಸಿ.ಎಂ. ಕೇಂದ್ರಕ್ಕೆ ಮನವಿ ಮಾಡಬೇಕು’ ಎಂದರು.

‘ಶಾಸಕ ಅಶೋಕ್‌ ಖೇಣಿ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡಿದ್ದು ಬಹಿರಂಗ ರಾಜಕೀಯ ವ್ಯಭಿಚಾರ. ನೇರವಾಗಿ ಭ್ರಷ್ಟಾಚಾರವನ್ನು ಅಪ್ಪಿಕೊಂಡಿದ್ದಾರೆ. ಖೇಣಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡದಕ್ಕೆ ಸ್ವತಃ ಕಾಂಗ್ರೆಸ್ಸಿಗರೇ ವಿರೋಧಿಸುತ್ತಿದ್ದಾರೆ. ಆದರೆ, ಖೇಣಿ ಜೈಲಿಗೆ ಹೋಗಿಲ್ಲ ಎಂದು ಸಿದ್ದರಾಮಯ್ಯ, ಕೆ.ಪಿ.ಸಿ.ಸಿ. ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಸಮರ್ಥಿಸಿಕೊಂಡಿದ್ದಾರೆ. ಇನ್ನೊಂದೆಡೆ ಜೈಲಿಗೆ ಹೋಗಿ ಬಂದಿರುವ ಆನಂದ್‌ ಸಿಂಗ್‌, ಬಿ. ನಾಗೇಂದ್ರ ಅವರನ್ನು ಸೇರಿಸಿಕೊಂಡು ಪಕ್ಕದಲ್ಲಿ ಕೂರಿಸಿಕೊಂಡಿದ್ದಾರೆ. ಕಾಂಗ್ರೆಸ್‌ ನೈತಿಕತೆ ಕಳೆದುಕೊಂಡಿರುವುದಕ್ಕೆ ಇದೇ ಸಾಕ್ಷಿ’ ಎಂದರು.

ADVERTISEMENT

10ರಂದು ಸಮಾವೇಶ:

‘ಕೂಡಲಸಂಗಮದಲ್ಲಿ ಇದೇ 10ರಂದು ಬಿಜೆಪಿ ಹಿಂದುಳಿದ ವರ್ಗಗಳ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಅಂದು ಬೆಳಿಗ್ಗೆ 11ಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಚಾಲನೆ ಕೊಡುವರು. ಉತ್ತರ ಕರ್ನಾಟಕದ ಹತ್ತು ಜಿಲ್ಲೆಗಳ ಜನ ಪಾಲ್ಗೊಳ್ಳುವರು. ಅದೇ ರೀತಿ ಎರಡನೆ ಸಮಾವೇಶ ಇದೇ 25ರಂದು ಕಾಗಿನೆಲೆಯಲ್ಲಿ ಆಯೋಜಿಸಲಾಗಿದೆ. ಅಲ್ಲಿ ದಕ್ಷಿಣ ಕರ್ನಾಟಕದ ಜಿಲ್ಲೆಗಳ ಜನರು ಭಾಗವಹಿಸುವರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.