ADVERTISEMENT

ಸಿ.ಎಂ. ಚೀನಾ ಪ್ರವಾಸ: ಎಚ್‌ಡಿಕೆ ಟೀಕೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 19:59 IST
Last Updated 3 ಸೆಪ್ಟೆಂಬರ್ 2013, 19:59 IST

ಮಂಗಳೂರು: ತಮ್ಮನ್ನು ದೇವರಾಜು ಅರಸು ಅವರಿಗೆ ಹೋಲಿಸಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಸಮಸ್ಯೆ ಉಂಟಾದ ಪ್ರದೇಶಗಳಿಗೆ ಒಮ್ಮೆಯೂ ಭೇಟಿ ಕೊಟ್ಟಿಲ್ಲ. ರಾಜ್ಯದಲ್ಲಿರುವ ದುಃಸ್ಥಿತಿಯನ್ನು ಮರೆತು ಅವರು ಚೀನಾ ಪ್ರವಾಸಕ್ಕೆ ಹೊರಟಿರುವುದು ಅಚ್ಚರಿ ಮೂಡಿಸಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದರು.

ಇಲ್ಲಿನ ಸರ್ಕಿಟ್‌ಹೌಸ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, `ಬಿಜೆಪಿ ಸರ್ಕಾರ ಹಮ್ಮಿಕೊಂಡಿದ್ದ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಟೀಕಿಸಿದ್ದ ಸಿದ್ದರಾಮಯ್ಯ ಈಗ ಅದೇ ದಾರಿಯಲ್ಲಿ ಸಾಗುತ್ತಿದ್ದಾರೆ' ಎಂದು ಆರೋಪಿಸಿದರು.

`ಹೂಡಿಕೆದಾರರ ಸಮಾವೇಶದಿಂದ ರಾಜ್ಯದಲ್ಲಿ ಎಷ್ಟು ಕೋಟಿ ಬಂಡವಾಳ ಹೂಡಿಕೆ ಆಗಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಕೇಂದ್ರ ಸರ್ಕಾರದ ಆರ್ಥಿಕ ನೀತಿಯಿಂದಾಗಿ ದೇಶದಲ್ಲಿ ಬಂಡವಾಳ ಹೂಡಲು ಯಾರೂ ಮುಂದೆ ಬರುತ್ತಿಲ್ಲ. ನಮ್ಮ ಜನರ ತೆರಿಗೆ ಹಣವನ್ನೇ ಬಂಡವಾಳ ಹೂಡಿಕೆಗೆ ಬಳಸಿಕೊಳ್ಳಬಹುದು. ಬ್ಯಾಂಕುಗಳಲ್ಲಿ ಠೇವಣಿ ಇರುವ ಸರ್ಕಾರದ ಹಣವನ್ನು ಖಜಾನೆಗೆ ವರ್ಗಾವಣೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದರೂ ಮುಖ್ಯಮಂತ್ರಿ ಗಮನವನ್ನೇ ಕೊಟ್ಟಿಲ್ಲ' ಎಂದು ಅವರು ದೂರಿದರು.

ಇಂದು ಜೆಡಿಎಸ್ ಸಭೆ
`ಜೆಡಿಎಸ್‌ನಲ್ಲಿ ಕೋರ್ ಕಮಿಟಿ ರಚಿಸುವಂತೆ ಹಿರಿಯ ನಾಯಕ ಎಂ.ಸಿ. ನಾಣಯ್ಯ ಅವರು ಸಲಹೆ ನೀಡಿದ್ದರು. ಪಿ.ಜಿ.ಆರ್.ಸಿಂಧ್ಯಾ ಅವರು 50 ಸದಸ್ಯರ ಪಟ್ಟಿಯನ್ನೂ ಸಿದ್ಧ ಪಡಿಸಿದ್ದಾರೆ. ಇಷ್ಟೊಂದು ಮಂದಿ ಸಮಿತಿಯಲ್ಲಿದ್ದರೆ ಮತ್ತೆ ಗೊಂದಲ ಸೃಷ್ಟಿಯಾಗಬಹುದು ಎಂಬ ಕಾರಣಕ್ಕೆ ಸದಸ್ಯರ ಸಂಖ್ಯೆಯನ್ನು 15ಕ್ಕೆ ಸೀಮಿತಗೊಳಿಸುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಸಲಹೆ ನೀಡಿದ್ದೇನೆ. ಈ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲು ಬುಧವಾರ ವರಿಷ್ಠರ ಸಭೆ ಕರೆಯಲಾಗಿದೆ' ಎಂದು ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.