ADVERTISEMENT

ಸಿಎಂ ತವರಲ್ಲಿ ಕಾಂಗ್ರೆಸ್‌ಗೆ ಮುಖಭಂಗ

ಜೆಡಿಎಸ್‌ನ ರಾಜೇಶ್ವರ್ ಮೇಯರ್, ಶೈಲೇಂದ್ರ ಉಪಮೇಯರ್

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 19:59 IST
Last Updated 5 ಸೆಪ್ಟೆಂಬರ್ 2013, 19:59 IST

ಮೈಸೂರು:  ಐದು ವರ್ಷಗಳಿಂದ ಮಹಾನಗರಪಾಲಿಕೆಯಲ್ಲಿ ಅಧಿಕಾರ ಹಿಡಿದಿದ್ದ ಕಾಂಗ್ರೆಸ್‌ಗೆ ಈ ಬಾರಿ ಮೇಯರ್, ಉಪ ಮೇಯರ್ ಎರಡೂ ಸ್ಥಾನಗಳು ಕೈತಪ್ಪಿವೆ. ಹಾಗಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಆಡಳಿತ ಪಕ್ಷಕ್ಕೆ ಮುಖಭಂಗವಾಗಿದೆ.

ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಪಾಲಿಕೆಯ ನೂತನ ಮೇಯರ್ ಆಗಿ ಜೆಡಿಎಸ್‌ಗೆ ಸೇರಿದ ಎನ್.ಎಂ. ರಾಜೇಶ್ವರಿ, ಉಪ ಮೇಯರ್ ಆಗಿ ವಿ. ಶೈಲೇಂದ್ರ ಗುರುವಾರ ಆಯ್ಕೆಯಾದರು.

ಕಳೆದ ಬಾರಿ ಕಾಂಗ್ರೆಸ್‌ನ ಎಂ.ಸಿ. ರಾಜೇಶ್ವರಿ, ಜೆಡಿಎಸ್‌ನ ಮಹದೇವಪ್ಪ ಕ್ರಮವಾಗಿ ಮೇಯರ್, ಉಪ ಮೇಯರ್ ಆಗಿ ಆಯ್ಕೆಯಾಗಿದ್ದರು. ಮಾರ್ಚ್‌ನಲ್ಲೇ ಚುನಾವಣೆ ಮುಗಿದಿದ್ದರೂ ಮೀಸಲಾತಿ ಪ್ರಕಟ, ವಿಧಾನಸಭಾ ಸಾರ್ವತ್ರಿಕ ಚುನಾವಣೆ ಬಂದ ಕಾರಣ ಮೇಯರ್ ಮತ್ತು ಉಪ ಮೇಯರ್ ಆಯ್ಕೆ ನನೆಗುದಿಗೆ ಬಿದ್ದಿತ್ತು.

ಪಾಲಿಕೆಯಲ್ಲಿ ಕಾಂಗ್ರೆಸ್‌ನ 22, ಜೆಡಿಎಸ್ 20, ಬಿಜೆಪಿ 12, ಕೆಜೆಪಿ, ಬಿಎಸ್‌ಆರ್ ತಲಾ 1, ಎಸ್‌ಡಿಪಿಐ 2, ಪಕ್ಷೇತರ 7 ಸದಸ್ಯರು ಸೇರಿದಂತೆ ಒಟ್ಟು 65 ಸದಸ್ಯರಿದ್ದಾರೆ. ಕಾಂಗ್ರೆಸ್‌ಗೆ ಅಧಿಕಾರ ತಪ್ಪಿಸುವ ನಿಟ್ಟಿನಲ್ಲಿಯೇ ಜೆಡಿಎಸ್-ಬಿಜೆಪಿ ಈ ಬಾರಿ ಮೈತ್ರಿ ಮಾಡಿಕೊಂಡಿವೆ.

ಮೇಯರ್ ಮತ್ತು ಉಪ ಮೇಯರ್ ಎರಡೂ ಸ್ಥಾನಗಳನ್ನು ಬಿಟ್ಟುಕೊಟ್ಟ ಬಿಜೆಪಿ ನಾಲ್ಕು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳನ್ನು ಕೊಡುವಂತೆ ಜೆಡಿಎಸ್‌ನೊಂದಿಗೆ ರಾಜೀಸೂತ್ರ ಮಾಡಿಕೊಂಡಿದೆ.

ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ 33ನೇ ವಾರ್ಡ್‌ನ ರಾಜೇಶ್ವರಿ ಮತ್ತು 9ನೇ ವಾರ್ಡ್‌ನ  ಶೈಲೇಂದ್ರ ಅವರು ತಲಾ 39 ಮತಗಳನ್ನು ಪಡೆದು ಕ್ರಮವಾಗಿ ಮೇಯರ್, ಉಪ ಮೇಯರ್ ಆಗಿ ಆಯ್ಕೆಯಾದರು. ಈ ಬಾರಿ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೂ, ಉಪ ಮೇಯರ್ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು.

ಕಾಂಗ್ರೆಸ್‌ನಿಂದ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಮಂಜುಳಾ ಮಾನಸ 29 ಮತಗಳನ್ನು ಪಡೆದು ಸೋಲನುಭವಿಸಿದರು. ಉಪ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್‌ನ ಭಾಗ್ಯವತಿ, ಎಸ್‌ಡಿಪಿಐನ ಎಸ್. ಸ್ವಾಮಿ ಕ್ರಮವಾಗಿ 32 ಮತ್ತು 2 ಮತಗಳನ್ನು ಪಡೆದು ಪರಾಭವಗೊಂಡರು.

ಪ್ರಾದೇಶಿಕ ಆಯುಕ್ತರಾದ ಎಂ.ವಿ. ಜಯಂತಿ, ಹೆಚ್ಚುವರಿ ಆಯುಕ್ತ (ಆಡಳಿತ) ಬಿ. ರಾಮು, ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಪಾಲಿಕೆ ಆಯುಕ್ತ ಡಾ.ಎಂ.ಆರ್. ರವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.