ADVERTISEMENT

ಸಿಎಂ ಮಧ್ಯಪ್ರವೇಶ: ವಸ್ತ್ರಸಂಹಿತೆ ರದ್ದು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 19:59 IST
Last Updated 16 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ಸರ್ಕಾರಿ ನೌಕರರಿಗೆ ವಸ್ತ್ರಸಂಹಿತೆ ಜಾರಿಗೊಳಿಸಿ ಇದೇ 12ರಂದು ಹೊರಡಿಸಿದ್ದ ಆದೇಶವನ್ನು ಬಹುತೇಕ ಕೈಬಿಡಲಾಗಿದೆ. ವಸ್ತ್ರಸಂಹಿತೆ ಜಾರಿಗೆ ತೀವ್ರ ವಿರೋಧ ಮತ್ತು ಮುಖ್ಯಮಂತ್ರಿಗಳ ಮಧ್ಯ­ಪ್ರವೇಶದ ಕಾರಣ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸೋಮ­ವಾರ ಪರಿಷ್ಕೃತ ಆದೇಶ ಹೊರಡಿಸಿದೆ.

ನಿರ್ದಿಷ್ಟವಾಗಿ ಇಂಥ ಉಡುಪು­ಗಳನ್ನು ಧರಿಸಬಾರದು ಎಂಬುದನ್ನು ಕೈಬಿಡಲಾಗಿದೆ. ಸಭ್ಯ ಉಡುಗೆ ಧರಿಸ­ಬೇಕು ಎಂಬುದು ಸರ್ಕಾರದ ಆಶಯ­ವಾಗಿದೆ ಎಂದು ಪರಿಷ್ಕೃತ ಆದೇಶದಲ್ಲಿ ತಿಳಿಸಿರುವುದಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ ಶಾಲಿನಿ ರಜನೀಶ್ ‘ಪ್ರಜಾವಾಣಿ’ಗೆ ವಿವರಿಸಿದರು.

ಹೀಗಾಗಿ, ಪುರುಷರು ಟಿಶರ್ಟ್‌, ಮಹಿಳೆಯರು ಸ್ಕರ್ಟ್‌, ಪ್ಯಾಂಟು ಧರಿಸಬಾರದು ಎಂಬ ನಿರ್ಬಂಧ ಇನ್ನು ಇರುವುದಿಲ್ಲ.
ಆದರೆ, ವಾಹನ ಚಾಲಕರು ಹಾಗೂ ಡಿ ಗ್ರೂಪ್ ನೌಕರರು ಸಮವಸ್ತ್ರ ಧರಿಸುವುದು ಕಡ್ಡಾಯ. ಪುರುಷ ನೌಕರರು ಪ್ಯಾಂಟು, ಶರ್ಟ್‌, ಜುಬ್ಬಾ, ಪೈಜಾಮ ಹಾಗೂ ಮಹಿಳಾ ನೌಕರರು ಸೀರೆ, ಚೂಡಿದಾರ್‌ ಧರಿಸಬೇಕು ಎಂದು ಇದೇ 12ರಂದು ಹೊರಡಿಸಿದ್ದ ಆದೇಶದಲ್ಲಿ ತಿಳಿಸಲಾಗಿತ್ತು.

ಪ್ರತಿಭಟನೆ: ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಸೋಮವಾರ ವಿಧಾನ ಸೌಧದ ಆವರಣದಲ್ಲಿ ಕಂಬಳಿ ಸುತ್ತಿಕೊಂಡು ಪ್ರತಿಭಟನೆ ನಡೆಸುವ ಮೂಲಕ ವಸ್ತ್ರಸಂಹಿತೆಯನ್ನು ವಿರೋಧಿಸಿದರು. ವಸ್ತ್ರಸಂಹಿತೆ  ತಾಲಿಬಾನ್‌ ಸಂಸ್ಕೃತಿಯ ಪ್ರತೀಕ. ಕೂಡಲೇ ಈ ಆದೇಶವನ್ನು ಕೈಬಿಡಬೇಕು ಎಂದು ಮುಖ್ಯಕಾರ್ಯದರ್ಶಿ ಎಸ್‌.ವಿ. ರಂಗನಾಥ್‌ ಅವರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.