ADVERTISEMENT

ಸಿಎಂ ವಿರುದ್ಧ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 19:30 IST
Last Updated 14 ಡಿಸೆಂಬರ್ 2013, 19:30 IST

ಬೆಂಗಳೂರು: ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗ ಆರೋಪ ಎದುರಿಸುತ್ತಿರುವ ಟಿ.ಎನ್‌.ಚಿಕ್ಕ ರಾಯಪ್ಪ ಅವರನ್ನು ಲೋಕೋಪ­ಯೋಗಿ ಇಲಾಖೆ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಿರುವ ಮುಖ್ಯ­ಮಂತ್ರಿಯವರ ಕ್ರಮವನ್ನು ವಿರೋಧಿಸಿ ಕಾಂಗ್ರೆಸ್‌ನ ಕೆಲ ಶಾಸಕರು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ ಸಿಂಗ್‌ ಬಳಿ ದೂರಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್‌ ಸಮನ್ವಯ ಸಮಿತಿ ಮತ್ತು ಕೆಪಿಸಿಸಿ ಚುನಾವಣಾ ಸಮಿತಿ ಸಭೆಗಾಗಿ ನಗರಕ್ಕೆ ಬಂದಿದ್ದ ದಿಗ್ವಿಜಯ್‌ ಸಿಂಗ್‌ ಅವರು, ಕುಮಾರಕೃಪಾ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದರು. ಶನಿವಾರ ಬೆಳಿಗ್ಗೆ ಅಲ್ಲಿ ದಿಗ್ವಿಜಯ್‌ ಅವರನ್ನು ಭೇಟಿಮಾಡಿದ ಕೆಲವು ಶಾಸಕರು, ‘ಸಿಎಂ ಅವರು ಚಿಕ್ಕ­ರಾಯಪ್ಪ ಅವರನ್ನು ಲೋಕೋಪ­ಯೋಗಿ ಇಲಾಖೆ ಕಾರ್ಯದರ್ಶಿ ಹುದ್ದೆಗೆ ನೇಮಿಸುವ ಮೂಲಕ ಭ್ರಷ್ಟಾ­ಚಾರ­ದ ವಿಚಾರದಲ್ಲಿ ತಪ್ಪು ಸಂದೇಶ ರವಾನಿಸಿದ್ದಾರೆ’ ಎಂಬುದಾಗಿ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ವಿಧಾನಸಭಾ ಚುನಾವಣೆಯ ವೇಳೆ ಪಕ್ಷದ ಪ್ರಣಾಳಿಕೆಯಲ್ಲಿ ಜನರಿಗೆ ಭರವಸೆ ನೀಡಲಾಗಿತ್ತು.

ಆದರೆ, ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕವೂ ವಿವಿಧ ಇಲಾಖೆಗಳ ಆಯಕಟ್ಟಿನ ಹುದ್ದೆಗಳಿಗೆ ಭ್ರಷ್ಟ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಇದರಿಂದಾಗಿ ಪಕ್ಷದ ಪ್ರಣಾಳಿಕೆ ವಿರುದ್ಧ ನಡೆದುಕೊಂಡಂತಾಗಿದೆ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿ­ದ್ದಾರೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.