ಬೆಂಗಳೂರು: ವಸತಿ ಉದ್ದೇಶಕ್ಕಾಗಿ ಮೀಸಲಿಟ್ಟಿದ್ದ ನಿವೇಶನಗಳನ್ನು ಚಿಕ್ಕಮಗಳೂರಿನ ಆಂಜನೇಯ ಶಿಕ್ಷಣ ಸಂಸ್ಥೆ ಬಳಸಿಕೊಂಡಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಸಿ.ಟಿ. ರವಿ ಅವರನ್ನು ನಿರ್ದೋಷಿ ಎಂದು ಈ ಕುರಿತು ತನಿಖೆ ನಡೆಸಿರುವ ಲೋಕಾಯುಕ್ತ ಪೊಲೀಸರು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಮಂಗಳವಾರ ವರದಿ ಸಲ್ಲಿಸಿದ್ದಾರೆ.
ಆದರೆ ರವಿ ಅವರ ಪತ್ನಿ ಪಲ್ಲವಿ ರವಿ, ಸುದರ್ಶನ್ ಮತ್ತು ತೇಜಸ್ವಿನಿ ಸುದರ್ಶನ್ ಅವರು ಕರ್ನಾಟಕ ಗೃಹ ಮಂಡಳಿಯ ನಿವೇಶನಗಳನ್ನು ಅರ್ಧ ಬೆಲೆಗೆ ಪಡೆದುಕೊಳ್ಳುವ ಉದ್ದೇಶದಿಂದ ತಾವು ಆಂಜನೇಯ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು ಎಂದು ಸುಳ್ಳು ಪ್ರಮಾಣ ಪತ್ರಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಿದ್ದರು ಎಂದು ಲೋಕಾಯುಕ್ತ ಪೊಲೀಸರು ವರದಿಯಲ್ಲಿ ಹೇಳಿದ್ದಾರೆ.
ಈ ಮೂಲಕ ಮೂರು ನಿವೇಶನಗಳನ್ನು ಪಲ್ಲವಿ ರವಿ ಅವರ ಹೆಸರಿಗೆ 2007ರ ಅಕ್ಟೋಬರ್ 24ರಂದು ನೋಂದಾಯಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಈ ನಿವೇಶನಗಳನ್ನು ಪಲ್ಲವಿ ಅವರ ಹೆಸರಿಗೆ ನೋಂದಾಯಿಸಿರುವುದನ್ನು ರದ್ದುಗೊಳಿಸಬೇಕು ಎಂದು ಕೋರಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಅವರಿಗೆ ಪತ್ರ ಬರೆಯಲು ಪೊಲೀಸರು ನಿರ್ಧರಿಸಿದ್ದಾರೆ.
ಶಾಸಕ ರವಿ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದರು ಎಂಬ ಆರೋಪ ಸಾಬೀತು ಮಾಡುವಂಥ ದಾಖಲೆಗಳು ದೊರೆತಿಲ್ಲ, ಅಂತೆಯೇ ಗೃಹ ಮಂಡಳಿಯ ಮಾಜಿ ಆಯುಕ್ತ ಲಕ್ಷ್ಮೀನಾರಾಯಣ ಅವರ ವಿರುದ್ಧದ ಆರೋಪ ಸಾಬೀತು ಮಾಡುವ ಸಾಕ್ಷ್ಯಗಳೂ ದೊರೆತಿಲ್ಲ. ಪಲ್ಲವಿ ರವಿ ಅವರು 2004ರ ಡಿಸೆಂಬರ್ 14ರಂದು ಎರಡು ವಸತಿ ನಿವೇಶನಗಳಿಗೆ (ಸಂಖ್ಯೆ 113 ಮತ್ತು 114) ಅರ್ಜಿ ಸಲ್ಲಿಸಿರುವುದು, ಪಲ್ಲವಿಗೆ ಆ ನಿವೇಶನ ನೀಡಿರುವುದೂ ಕಾನೂನುಬಾಹಿರ ಎಂದು ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.