ಕೂಡಲಸಂಗಮ: ‘ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಅಭ್ಯಾಸ ಮಾಡುತ್ತಿರುವ ಎಂಟು ಸಾವಿರ ವಿದ್ಯಾರ್ಥಿಗಳಿಗೆ ಸಾಮೂಹಿಕ ಕೇಶ ಮುಂಡನ ಮಾಡುತ್ತಿರುವುದು ಬಹುದೊಡ್ಡ ಮೂರ್ಖತನ’ ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಹೇಳಿದ್ದಾರೆ.
ಲಿಂಗಾಯತ ಧರ್ಮದ ಪ್ರಕಾರ ಯಾರಾದರೂ ಲಿಂಗೈಕ್ಯರಾದರೆ ಅವರ ಹೆಸರಿನಲ್ಲಿ ತಲೆ ಬೋಳಿಸಿಕೊಳ್ಳುವುದು ಇಲ್ಲವೇ ಇಲ್ಲ. ಹಾಗಾಗಿ ಅಂತಹ ಮೂಢಾಚರಣೆಯನ್ನು ಸಿದ್ಧಗಂಗಾ ಮಠದ ಕಿರಿಯ ಶ್ರೀಗಳು ಮಾಡಬಾರದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಅವರು ಒತ್ತಾಯಿಸಿದ್ದಾರೆ.
ಬಸವ ತತ್ವ ಎಂದು ಹೇಳುತ್ತ ಅದಕ್ಕೆ ವಿರುದ್ಧವಾದ ಕೆಲಸ ಮಾಡುತ್ತ ಹೋದರೆ ಹಿರಿಯರಿಗೆ ಮಾಡಿದ ಅಪಚಾರವಾಗುವುದು. ಮಹಾನ ವ್ಯಕ್ತಿಗಳಾದ ಸಿದ್ಧಗಂಗಶ್ರೀಗಳ ಲಿಂಗೈಕ್ಯ ಸಂಸ್ಮರಣೆ ಸಮಾರಂಭದಲ್ಲಿ ಪ್ರಾರ್ಥನೆ, ಸಾಮೂಹಿಕ ಇಷ್ಟಲಿಂಗ ಪೂಜೆ, ದಾಸೋಹ ಮಾಡಿ ಆದರೆ ಮೌಢ್ಯಾಚರಣೆ, ಮನುವಾದ ಹಾಗೂ ವೈಧಿಕ ಧರ್ಮಕ್ಕೆ ಸಂಬಂಧಿಸಿದ ತಲೆ ಬೆಳಿಸಿಕೊಳ್ಳುವ ಸಂಪ್ರದಾಯ ಸರಿಯಲ್ಲ ಎಂದಿದ್ದಾರೆ.
‘ವಿದ್ಯಾರ್ಥಿಗಳು ಮಠದ ಕೈಯಲ್ಲಿ ಇರುತ್ತಾರೆ, ನಾವು ಹೇಳಿದ ಹಾಗೆ ಕೇಳುತ್ತಾರೆ ಎಂದು ತಿಳಿದು ಸಾಮೂಹಿಕ ಕೇಶ ಮುಂಡಕ್ಕೆ ಒಪ್ಪಿಕೊಂಡಿದ್ದಾರೆ ಎನ್ನುವುದು ಸರಿಯಲ್ಲ. ಶ್ರೀಗಳು ಅನೇಕ ವರ್ಷಗಳಿಂದ ಅನಾರೋಗ್ಯದ ನಿಮಿತ್ಯ ಹಾಸಿಗೆ ಹಿಡಿದಿದ್ದರು, ಕಿರಿಯ ಶ್ರೀಗಳು ಮಠದ ಎಲ್ಲ ಕಾರ್ಯವನ್ನು ನಡೆಸಿಕೊಂಡು ಬಂದಿದ್ದಾರೆ. ಈಗ ಆತಂಕ ಪಡುವ ಅಗತ್ಯ ಇಲ್ಲ. ಮಕ್ಕಳಿಗೆ ಅನಾಥ ಭಾವ ಬೆಳೆಯಲು ಅವಕಾಶವೇ ಇಲ್ಲ. ಆದ್ದರಿಂದ ಈ ಆಚರಣೆಯನ್ನು ಸಿದ್ಧಗಂಗಾಮಠದ ಕಿರಿಯ ಶ್ರೀಗಳು ಮಾಡಕೂಡದು’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.