ADVERTISEMENT

ಸಿದ್ದರಾಮಯ್ಯ ಕರ್ಣನಿದ್ದಂತೆ

​ಪ್ರಜಾವಾಣಿ ವಾರ್ತೆ
Published 25 ಮೇ 2018, 20:19 IST
Last Updated 25 ಮೇ 2018, 20:19 IST
ಸಿದ್ದರಾಮಯ್ಯ ಕರ್ಣನಿದ್ದಂತೆ
ಸಿದ್ದರಾಮಯ್ಯ ಕರ್ಣನಿದ್ದಂತೆ   

ಬೆಂಗಳೂರು: ‘ಅಪ್ಪ–ಮಕ್ಕಳು ಸಿದ್ದರಾಮಯ್ಯನ ವಿಷಯದಲ್ಲಿ ಅಂಗರಾಜ ಕರ್ಣನನ್ನು ನಡೆಸಿಕೊಂಡಂತೆ ನಡೆಸಿಕೊಂಡರು. ದುರ್ಯೋಧನ ಮಾಡಿದ ಪಿತ್ರಾರ್ಜಿತ ಪಿತೂರಿಯಿಂದ ಅಂಗರಾಜ ರಾಜ್ಯವನ್ನು ಕಳೆದುಕೊಂಡ. ಜನತಾದಳದಲ್ಲಿದ್ದ ಸಿದ್ದರಾಮಯ್ಯನ ಸ್ಥಿತಿ ಅದೇ ಆಯಿತು’ ಎಂದು ಬಿ.ಎಸ್‌.ಯಡಿಯೂರಪ್ಪ ಹೇಳಿದರು.

‘ಇಡೀ ರಾಜ್ಯವನ್ನು ಮೂರು ಬಾರಿ ಸುತ್ತಿದೆ. ಜನರ ಆಶೀರ್ವಾದ ನಮ್ಮ ಕಡೆಗೆ ಇತ್ತು. 122 ಸ್ಥಾನಗಳಿದ್ದ ಕಾಂಗ್ರೆಸ್‌ 78 ಸ್ಥಾನಗಳಿಗೆ ಕುಸಿಯಿತು. ಸಿದ್ದರಾಮಯ್ಯನವರೇ, ಎಲ್ಲಿಯವರೆಗೆ ರಾಜಕಾರಣ ನಡೆಯಿತು. ನಿಮ್ಮ ವಿರುದ್ಧ ಈಜಲು ಜಿ.ಟಿ.ದೇವೇಗೌಡರನ್ನು ಕಣಕ್ಕೆ ಇಳಿಸಿ, ಸೋಲಿಸಿ, ಅಪಮಾನ ಮಾಡಿದರು. ನೀವು ತಮಾಷೆ, ಅವಮಾನ ಮಾಡಿಕೊಂಡಿರಿ. ಜಮೀರ್ ಅಹಮದ್‌, ಬಾಲಕೃಷ್ಣ, ಚೆಲುವರಾಯಸ್ವಾಮಿ ಅವರಿಗೆ ಕುಮಾರಸ್ವಾಮಿ ಮೋಸ ಮಾಡಿದರು. ಕುರ್ಚಿಗಾಗಿ ಏನು ಬೇಕಾದರೂ ಮಾಡಲು ಜೆಡಿಎಸ್‌ನವರು ತಯಾರಿದ್ದಾರೆ’ ಎಂದು ಕಿಡಿಕಾರಿದರು.

‘ಪ್ರಮಾಣವಚನದ ದಿನ ಸಿದ್ದರಾಮಯ್ಯನವರು ಮೂಲೆಗೆ ಹೋಗಿ ಕುಳಿತು ಬಿಟ್ಟರು. ಯಾರ ಆಶೀರ್ವಾದ, ಬೆಂಬಲದಿಂದ ಕುಮಾರಸ್ವಾಮಿ ಮುಖ್ಯಮಂತ್ರಿಯಾದರೋ ಅವರನ್ನೇ ಕುಮಾರಸ್ವಾಮಿ ಮರೆತುಬಿಟ್ಟರು. ರಾಷ್ಟ್ರ ಮಟ್ಟದ ನಾಯಕರನ್ನು ಕೈಮುಗಿದು ಸ್ವಾಗತಿಸಿದ ಕುಮಾರಸ್ವಾಮಿ, ಸೌಜನ್ಯಕ್ಕಾದರೂ ಸಿದ್ದರಾಮಯ್ಯನವರನ್ನು ಗೌರವಿಸಲಿಲ್ಲ’ ಎಂದು ಚುಚ್ಚಿದರು.

ADVERTISEMENT

**

‘ಸಿದ್ದರಾಮಯ್ಯ ಮುಖ್ಯಮಂತ್ರಿ‘

‘ಮೊದಲ ಸುದ್ದಿಗೋಷ್ಠಿಯಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಠಾಧೀಶರನ್ನು ಅವಮಾನ ಮಾಡಿದ್ದಾರೆ’ ಎಂದು ಯಡಿಯೂರಪ್ಪ ಹೇಳಿದರು. ಆಗ ಕಾಂಗ್ರೆಸ್‌ ಸದಸ್ಯರು ‘ಹೋ’ ಎಂದು ಕೂಗಿದರು. ಸಿದ್ದರಾಮಯ್ಯ ಕೈ ತೋರಿಸಿ ಜೋರಾಗಿ ನಕ್ಕರು. ಆಗ ಯಡಿಯೂರಪ್ಪ ‘ತಪ್ಪಾಯಿತು’ ಎಂದು ಕೈಮುಗಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಹೇಳಿ ಹೇಳಿ ಅಭ್ಯಾಸ ಆಗಿದೆ. ಕುಮಾರಸ್ವಾಮಿ ಮುಖ್ಯಮಂತ್ರಿ ಎಂದು ಹೇಳಲು ಹೆಚ್ಚು ಅಭ್ಯಾಸ ಮಾಡುತ್ತೇನೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.