ADVERTISEMENT

ಸಿನಿಮಾ ಮೂಲಕ ಸಾಂಸ್ಕೃತಿಕ ಸಾಮರಸ್ಯ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2018, 19:35 IST
Last Updated 26 ಫೆಬ್ರುವರಿ 2018, 19:35 IST
ಸಿನಿಮಾ ಮೂಲಕ ಸಾಂಸ್ಕೃತಿಕ ಸಾಮರಸ್ಯ
ಸಿನಿಮಾ ಮೂಲಕ ಸಾಂಸ್ಕೃತಿಕ ಸಾಮರಸ್ಯ   

ಬೆಂಗಳೂರು: ‘ಮನುಷ್ಯರನ್ನು ಭಾವನಾತ್ಮಕವಾಗಿ ಬೆಸೆಯಲು ಇರುವ ಪ್ರಭಾವಿ ಮಾರ್ಗಗಳಲ್ಲಿ ಸಾಂಸ್ಕೃತಿಕ ವಿನಿಮಯ ಮುಖ್ಯವಾದುದು. ಈ ವಿನಿಮಯದ ರೂಪವಾದ ಸಿನಿಮಾ ಭಿನ್ನ ದೇಶಗಳ ಸಂಸ್ಕೃತಿಯನ್ನು ಅರಿಯಲು ಪರಿಣಾಮಕಾರಿ ಮಾಧ್ಯಮವಾಗಿದೆ’ ಎಂದು ಇಸ್ರೇಲ್ ಕಾನ್ಸುಲ್‌ ಜನರಲ್‌ ಡಾನಾ ಖುರ್ಷ್‌ ಅಭಿಪ್ರಾಯಪಟ್ಟರು.

10ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಸೋಮವಾರ ನಡೆದ ‘ನಿರ್ದೇಶಕರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ‘ಇಸ್ರೇಲ್‌ ಮತ್ತು ಭಾರತ ದೇಶಗಳ ಸಹಭಾಗಿತ್ವದಲ್ಲಿ ಸಿನಿಮಾಗಳನ್ನು ತಯಾರಿಸಬೇಕು’ ಎಂದರು.

‘ಭಾರತ ಮತ್ತು ಇಸ್ರೇಲ್‌ ದೇಶಗಳ ಜನರಲ್ಲಿ ಸಾಕಷ್ಟು ಹೋಲಿಕೆಗಳಿವೆ. ಬಾಲಿವುಡ್‌ ಸಿನಿಮಾಗಳನ್ನು ಇಸ್ರೇಲ್‌ ಜನರು ತುಂಬಾ ಮೆಚ್ಚುತ್ತಾರೆ. ಎರಡೂ ದೇಶಗಳ ಸಿನಿಮಾರಂಗದಲ್ಲಿ ಪ್ರತಿಭಾವಂತರಿದ್ದಾರೆ. ಅವರು ಒಟ್ಟಾಗಿ ಕೆಲಸ ಮಾಡಬೇಕು. ಆ ಮೂಲಕ ಭಿನ್ನ ದೇಶಗಳ ಜನ ಪರಸ್ಪರ ಅರಿತುಕೊಳ್ಳಲು ಸಾಧ್ಯವಾಗುತ್ತದೆ. ನಾವು ಇಂಥ ಸಹಭಾಗಿತ್ವದ ಪ್ರಯತ್ನಗಳಿಗೆ ಬೆಂಬಲ ನೀಡುತ್ತೇವೆ’ ಎಂದರು.

ADVERTISEMENT

ಸಂವಾದದಲ್ಲಿ ಭಾಗವಹಿಸಿದ್ದ ಏಷ್ಯನ್‌ ಫಿಲ್ಮ್ ಸ್ಪರ್ಧಾ ವಿಭಾಗದಲ್ಲಿರುವ ‘ಪಡ್ಡಾಯಿ’ ಸಿನಿಮಾ ನಿರ್ದೇಶಕ ಅಭಯ ಸಿಂಹ, ಸಾಹಿತ್ಯಕೃತಿಯೊಂದನ್ನು ಸಿನಿಮಾ ಆಗಿಸುವಾಗ ನಿರ್ದೇಶಕ ಎದುರಿಸುವ ಸವಾಲುಗಳ ಕುರಿತು ಚಿರ್ಚಿಸಿದರು.

‘ಕಲಾಪ್ರಕಾರವೊಂದು ತನ್ನದೇ ಆದ ವಿಭಿನ್ನ ರೂಪಕಗಳ ಮೂಲಕ ಅಭಿವ್ಯಕ್ತಿಗೊಳ್ಳುತ್ತಿರುತ್ತದೆ. ಈ ರೂಪಕಗಳ ಸ್ವರೂಪ ಒಂದು ಕಲೆಯಿಂದ ಇನ್ನೊಂದು ಕಲೆಗೆ ಭಿನ್ನಾಗಿರುತ್ತದೆ. ಒಂದು ಸಾಹಿತ್ಯಕೃತಿಯನ್ನು ಸಿನಿಮಾ ಮಾಡುವಾಗ ಸಾಹಿತ್ಯದಲ್ಲಿನ ರೂಪಕಗಳನ್ನು ವಾಚ್ಯವಾಗಿಸದೆ, ಸಿನಿಮಾ ವ್ಯಾಕರಣದ ಒಳಗಡೆ ಹೇಗೆ ಮರುರೂಪಿಸಿಕೊಳ್ಳುವುದು ಎನ್ನುವುದೇ ನಿರ್ದೇಶಕನಿಗೆ ಇರುವ ದೊಡ್ಡ ಸವಾಲು. ಇದೇ ಮಿತಿಯೂ ಆಗಿರುತ್ತದೆ. ಸಾಹಿತ್ಯದ ಕ್ಲಾಸಿಕ್‌ಗಳನ್ನು ಸಿನಿಮಾ ಆಗಿಸುವಾಗ ನಮಗಿಂತ ಭಿನ್ನ ಕಾಲದಲ್ಲಿ, ಭಿನ್ನ ಪ್ರದೇಶದಲ್ಲಿ ನಡೆಯುವ ಕಥೆಯನ್ನು ಇಂದಿನ ಅನುಭವವನ್ನಾಗಿಸುವುದು ಹೇಗೆ ಎನ್ನುವುದೂ ನಿರ್ದೇಶಕನಿಗೆ ಇರುವ ಮತ್ತೊಂದು ಸವಾಲು’ ಎನ್ನುವುದು ಅವರ ಅಭಿಮತ.

‘ರಿಸರ್ವೇಶನ್‌’ ಚಿತ್ರದ ಸಹನಿರ್ದೇಶಕ ಪ್ರದೀಪ್‌ ಶೆಟ್ಟಿ ಮಾತನಾಡಿ, ‘ಜಾತಿ ಮತ್ತು ಮೀಸಲಾತಿಯ ಸಂದರ್ಭದಲ್ಲಿ ಸಾಕಷ್ಟು ಚರ್ಚೆ ನಡೆದಿವೆ. ಮೀಸಲಾತಿ ಬೇಕೆ ಬೇಡವೇ ಎಂಬುದರಲ್ಲಿ ಯಾವುದೇ ಒಂದು ನಿಲುವನ್ನು ತೆಗೆದುಕೊಳ್ಳದೆ, ಮೀಸಲಾತಿಯ ವಿಮರ್ಶೆ ಸಾಧ್ಯವಾಗುತ್ತದೆಯೇ ಎಂಬ ಪ್ರಯತ್ನವನ್ನು ಈ ಚಿತ್ರದ ಮೂಲಕ ಮಾಡಿದ್ದೇವೆ’ ಎಂದು ಹೇಳಿದರು.

ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ವಿದ್ಯಾಶಂಕರ್‌ ಈ ಸಂವಾದವನ್ನು ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.