ADVERTISEMENT

ಸಿಬಿಐ ಜತೆ ಆನಂದ್‌ ಕಣ್ಣಾಮುಚ್ಚಾಲೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 19:59 IST
Last Updated 23 ಸೆಪ್ಟೆಂಬರ್ 2013, 19:59 IST
ಆನಂದ್‌ ಸಿಂಗ್‌
ಆನಂದ್‌ ಸಿಂಗ್‌   

ಬೆಂಗಳೂರು: ಬೇಲೆಕೇರಿ ಬಂದರಿನ ಮೂಲಕ ಕಳ್ಳತನ­ದಿಂದ ಅದಿರು ಸಾಗಿಸಿದ  ಆರೋಪ ಎದುರಿ­ಸುತ್ತಿರುವ ಬಳ್ಳಾರಿ ಜಿಲ್ಲೆ ವಿಜಯ­ನಗರ ಕ್ಷೇತ್ರದ ಬಿಜೆಪಿ ಶಾಸಕ ಆನಂದ್‌ ಸಿಂಗ್‌,  ವಿಚಾರಣೆಗೆ ಹಾಜ­ರಾ­ಗದೇ ಸಿಬಿಐ ಅಧಿಕಾರಿಗಳನ್ನೇ ಸತಾಯಿ ಸುತ್ತಿದ್ದಾರೆ.

ಇದನ್ನು ಸಿಬಿಐ ಗಂಭಿರವಾಗಿ ಪರಿಗಣಿಸಿದ್ದು, ಅವರ ಚಲನವಲನಗಳ ಮೇಲೆ ತೀವ್ರ ನಿಗಾ ಇರಿಸಿದೆ.

‘ಸಿಂಗ್‌ ವಿದೇಶಕ್ಕೆ ಹೋಗಲು ಪ್ರಯತ್ನಿಸಿದರೆ ತಡೆಯಬೇಕು ಮತ್ತು ತಕ್ಷಣವೇ ಈ ಕುರಿತು ಮಾಹಿತಿ ನೀಡಬೇಕು’ ಎಂದು ವಿಮಾನ ನಿಲ್ದಾಣ ಅಧಿಕಾರಿಗಳಿಗೆ ಮೌಖಿಕ ಸೂಚನೆ ರವಾನಿಸಿದೆ ಎಂದು ಮೂಲಗಳು ತಿಳಿಸಿವೆ.

ಹಿನ್ನೆಲೆ: ಆನಂದ್‌ ಸಿಂಗ್‌ ಒಡೆತನದ ಎಸ್‌ಬಿ ಮಿನರಲ್ಸ್‌ ಮತ್ತು ವೈಷ್ಣವಿ ಮಿನರಲ್ಸ್‌ ನಡೆಸಿರುವ ಅದಿರು ಕಳ್ಳಸಾಗಣೆ ಕುರಿತು ಸುಪ್ರೀಂಕೋರ್ಟ್‌ ಆದೇಶ­ದಂತೆ ಸಿಬಿಐ ತನಿಖೆ ನಡೆಸುತ್ತಿದೆ. ಇದಕ್ಕೆ ಸಿಂಗ್‌ ದೀರ್ಘಕಾಲ ಪೂರ್ಣ ಸಹಕಾರ ನೀಡಿದ್ದರು. ಆದರೆ, ಶಾಸಕರಾದ ಟಿ.ಎಚ್‌.ಸುರೇಶ್‌ಬಾಬು  ಮತ್ತು ಸತೀಶ್‌ ಸೈಲ್‌ ಬಂಧನವಾಗುತ್ತಿದ್ದಂತೆ ವಿಚಾರಣೆ­ಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ.

ಸುಪ್ರೀಂಕೋರ್ಟ್‌ನ ಆದೇಶದಂತೆ 2012ರ ಸೆಪ್ಟೆಂಬರ್‌ನಲ್ಲಿ ಐದು ಪ್ರತ್ಯೇಕ ಪ್ರಥಮ ಮಾಹಿತಿ ವರದಿಗಳನ್ನು (ಎಫ್‌ಐಆರ್‌) ದಾಖಲಿಸಿದ್ದ ಸಿಬಿಐ, ತನಿಖೆ ಆರಂಭಿಸಿತ್ತು. ಸಿಂಗ್‌ ಅವರ ಎಸ್‌ಬಿ ಮತ್ತು ವೈಷ್ಣವಿ ಮಿನರಲ್ಸ್‌ ಕಂಪೆನಿಗಳನ್ನು ಆರೋಪಿಗಳ ಪಟ್ಟಿಯಲ್ಲಿ ಹೆಸರಿಸಲಾಗಿತ್ತು.

ಒಂದು ವರ್ಷದ ಅವಧಿಯಲ್ಲಿ 20ಕ್ಕೂ ಹೆಚ್ಚು ಬಾರಿ ಅವರನ್ನು ವಿಚಾರಣೆಗೆ  ಕರೆಸಿಕೊಂಡಿತ್ತು.

ಕರೆ ಸ್ವೀಕರಿಸಲಿಲ್ಲ: ಈಗ ತನಿಖೆ ಅಂತಿಮ ಹಂತ ತಲುಪಿರುವುದರಿಂದ ಮತ್ತೊಮ್ಮೆ ಸಿಂಗ್‌ ಅವರ ವಿಚಾರಣೆ ನಡೆಸಲು ನಿರ್ಧರಿಸಿದ ಸಿಬಿಐ ಅಧಿಕಾರಿ ಗಳು, ಶನಿವಾರ ಬೆಳಿಗ್ಗೆ 10 ಗಂಟೆಗೆ ಸಮಯ ನಿಗದಿ ಮಾಡಿದ್ದರು. ಶಾಸಕರು ಮತ್ತು ಅವರ ಆಪ್ತರ ಮೊಬೈಲ್‌ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ವಿಚಾರಣೆಗೆ ಹಾಜರಾ ಗುವಂತೆ ಸೂಚಿಸಲು ಪ್ರಯತ್ನಿಸಿದ್ದರು.

ಆದರೆ, ಹಲವು ಬಾರಿ ಕರೆ ಮಾಡಿದರೂ ಆನಂದ್‌ ಸಿಂಗ್‌ ಅವರಾಗಲೀ, ಅವರ ಆಪ್ತರಾಗಲೀ ಕರೆ ಸ್ವೀಕರಿಸಿರಲಿಲ್ಲ. ಬಳಿಕ ಶಾಸಕರ ನಿವಾಸಕ್ಕೆ ಲಿಖಿತ ನೋಟಿಸ್‌ ಕಳುಹಿಸಿ ಶನಿವಾರ ಬೆಳಿಗ್ಗೆ 10 ಗಂಟೆಗೆ ಕಡ್ಡಾಯವಾಗಿ ಸಿಬಿಐ ಕಚೇರಿಗೆ ಬರುವಂತೆ ನಿರ್ದೇಶನ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

ಶನಿವಾರ ಮಧ್ಯಾಹ್ನದ ಬಳಿಕವೂ ಆನಂದ್‌ ಸಿಂಗ್‌ ವಿಚಾರಣೆಗೆ ಹಾಜರಾಗದೇ ಇದ್ದಾಗ ಮತ್ತೆ ಅವರನ್ನು ಸಂಪರ್ಕಿಸಲು ಯತ್ನಿಸಲಾಯಿತು. ಆದರೆ, ಅಷ್ಟರಲ್ಲಿ ಅವರ ಮೊಬೈಲ್‌ ‘ಸ್ವಿಚ್‌ ಆಫ್‌’ ಆಗಿತ್ತು. ಅವರ ಕೆಲ ಆಪ್ತರೂ ಕರೆ ಸ್ವೀಕರಿಸಿಲ್ಲ. ಬಳಿಕ ತನಿಖಾ ತಂಡದ ಜೊತೆಗಿನ ಸಂಪರ್ಕ ಬಹುತೇಕ ಕಡಿತಗೊಂಡಿದೆ.

ನಿರೀಕ್ಷಣಾ ಜಾಮೀನಿಗೆ ಅರ್ಜಿ: ಬೆಂಗಳೂರು: ಶಾಸಕ ಆನಂದ್‌ ಸಿಂಗ್‌, ನಿರೀಕ್ಷಣಾ ಜಾಮೀನು ಕೋರಿ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸೋಮವಾರ ಅರ್ಜಿ ಸಲ್ಲಿಸಿದ್ದಾರೆ.

‘ಅದಿರು ನಾಪತ್ತೆ ಪ್ರಕರಣದಲ್ಲಿ ನನ್ನಿಂದ ಯಾವುದೇ ತಪ್ಪು ಆಗಿಲ್ಲ. ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ. ಆದರೆ ಸಿಬಿಐ ಅಧಿಕಾರಿಗಳು ಈ ಪ್ರಕರಣದಲ್ಲಿ ನನ್ನನ್ನು ಸಿಲುಕಿಸುವ ಪ್ರಯತ್ನ ನಡೆಸಿದ್ದಾರೆ. ವಿಚಾರಣೆಗೆ ಹಾಜರಾದರೆ ಬಂಧಿಸುವ ಅನುಮಾನ ಇದೆ. ಈ ಕಾರಣಕ್ಕೆ ಜಾಮೀನು ನೀಡಬೇಕು’ ಎಂದು ಸಿಂಗ್‌ ಅರ್ಜಿಯಲ್ಲಿ ಕೋರಿದ್ದಾರೆ.

ಪ್ರಕರಣದ ಬಗ್ಗೆ ವಿವರಣೆ ನೀಡುವಂತೆ ಸಿಬಿಐಗೆ ನ್ಯಾಯಾಲಯ ನೋಟಿಸ್‌ ಜಾರಿ ಮಾಡಿದೆ.

ಮುಂದುವರಿದ ವಿಚಾರಣೆ
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಶದಲ್ಲಿರುವ ಶಾಸಕರಾದ ಟಿ.ಎಚ್‌.ಸುರೇಶ್‌ ಬಾಬು ಮತ್ತು ಸತೀಶ್‌ ಸೈಲ್‌ ಅವರ ವಿಚಾರಣೆ ಮುಂದುವರಿದಿದೆ. ಈ ಇಬ್ಬರ ಜೊತೆಗಿನ ವ್ಯಾವ­ಹಾರಿಕ ನಂಟು ಕುರಿತಂತೆ ಕೆಲ ಅದಿರು ವ್ಯಾಪಾರಿ­ಗಳನ್ನೂ ಸಿಬಿಐ ಅಧಿಕಾರಿಗಳು ಸೋಮವಾರ ಪ್ರಶ್ನಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.