ADVERTISEMENT

ಸಿಬಿಐ ತನಿಖೆ ರದ್ದತಿಗೆ ಜನಾರ್ದನ ರೆಡ್ಡಿ ಕೋರಿಕೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2012, 10:10 IST
Last Updated 6 ಮಾರ್ಚ್ 2012, 10:10 IST

ಬೆಂಗಳೂರು, (ಪಿಟಿಐ): ತಮ್ಮ ಮತ್ತು ತಮ್ಮ ಪತ್ನಿ ಹೆಸರಿನಲ್ಲಿರುವ ಎಎಂಸಿ (ಅಸೋಸಿಯೇಟೆಡ್ ಮೈನಿಂಗ್ ಕಂಪೆನಿ)ಯು ಅಕ್ರಮ ಗಣಿಗಾರಿಕೆ ನಡೆಸಿದೆ ಎಂಬ ಆರೋಪದ ಮೇಲೆ ಆರಂಭವಾಗಿರುವ ಸಿಬಿಐ ತನಿಖೆಯನ್ನು ಕೈ ಬಿಡುವಂತೆ ಕೋರಿ ಗಣಿ ಧಣಿ, ಕರ್ನಾಟಕದ ಮಾಜಿ ಪ್ರವಾಸೋದ್ಯಮ ಖಾತೆ ಸಚಿವ ಜಿ ಜಿನಾರ್ದನ ರೆಡ್ಡಿ ಅವರು ಮಂಗಳವಾರ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರು ಕರ್ನಾಟಕದ ಲೋಕಾಯುಕ್ತರಾಗಿದ್ದಾಗ ಸರ್ಕಾರಕ್ಕೆ ಅಕ್ರಮ ಗಣಿಗಾರಿಕೆಯ ಕುರಿತು ಸಲ್ಲಿಸಿದ್ದ ವರದಿಯಲ್ಲಿ ಆರೋಪಿತರಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅರ್ಜಿಯ ವಿಚಾರಣೆ ಇತ್ಯರ್ಥ ಆಗುವವರೆಗೆ ತಮ್ಮ ವಿರುದ್ಧದ ಸಿಬಿಐ ತನಿಖೆಗೆ ಮಧ್ಯಂತರ ತಡೆಯಾಜ್ಞೆ  ನೀಡುವಂತೆಯೂ ಅವರು ತಮ್ಮ ಅರ್ಜಿಯಲ್ಲಿ ಕೋರಿಕೊಂಡಿದ್ದಾರೆ.

ನ್ಯಾಯಮೂರ್ತಿ ಎನ್. ಆನಂದರೆಡ್ಡಿ ಅವರ ಪೀಠದ ಮುಂದೆ ಜನಾರ್ದನ ರೆಡ್ಡಿ ಅವರ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆದಿತ್ತು. ಅರ್ಜಿಯ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ.

ADVERTISEMENT

ಇದೇ ತಿಂಗಳು ಮಾರ್ಚ್ 2 ರಂದು ಜನಾರ್ದನ ರೆಡ್ಡಿ ಅವರನ್ನು ಸಿಬಿಐ ನ್ಯಾಯಾಲಯದ ಮುಂದೆ ಹಾಜಪಡಿಸಲಾಗಿತ್ತು. ಅವರನ್ನು ಮಾರ್ಚ್ 12ರ ವರೆಗೆ ನ್ಯಾಯಾಂಗದ ವಶಕ್ಕೆ ಒಪ್ಪಿಸಲಾಗಿದೆ.

ಆಂಧ್ರದಲ್ಲಿ ಓಎಂಸಿ ( ಓಬಳಾಪುರಂ ಮೈನಿಂಗ್ ಕಂಪೆನಿ)ಯು ನಡೆಸಿದ ಅಕ್ರಮ ಗಣಿಗಾರಿಕೆಯ ಕುರಿತ ತನಿಖೆಗೆ ಮುಂದಾದ ಸಿಬಿಐಯು ಜನಾರ್ದನ ರೆಡ್ಡಿ ಮತ್ತು ಅವರ ಭಾವ ಬಿ.ವಿ.ಶ್ರೀನಿವಾಸ ರೆಡ್ಡಿ ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡು ವಿಚಾರಣೆ ಆರಂಭಿಸಿದ ಹಿನ್ನೆಲೆಯಲ್ಲಿ ಅವರಿಬ್ಬರೂ ಕಳೆದ ಸೆಪ್ಟೆಂಬರ್ ತಿಂಗಳಿನಿಂದ  ಹೈದ್ರಾಬಾದಿನ ಚಂಚಲಗುಡಾ ಜೈಲಿನಲ್ಲಿದ್ದಾರೆ.

ಅಧಿಕಾರಿಗಳನ್ನು ಭ್ರಷ್ಟರನ್ನಾಗಿಸಿ, ದಾಖಲೆಗಳನ್ನು ತಿದ್ದಿ, ಗಣಿಗಾರಿಕೆಯ ಗುತ್ತಿಗೆ ಒಪ್ಪಂದಗಳನ್ನು ಉಲ್ಲಂಘಿಸಿದ ಓಎಂಸಿಯು, ಆಂಧ್ರದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದೆ ಎಂದು ಆರೋಪಿಸಿದ ಸಿಬಿಐ ಜನಾರ್ದನ ರೆಡ್ಡಿ , ಶ್ರೀನಿವಾಸ ರೆಡ್ಡಿ ಹಾಗೂ ಇತರ ಮೂವರ ವಿರುದ್ಧ ಕಳೆದ ಡಿಸೆಂಬರ್ ತಿಂಗಳಲ್ಲಿ ಆರೋಪ ಪಟ್ಟಿ ದಾಖಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.