ADVERTISEMENT

‘ಸುಪ್ರೀಂ’ ತೀರ್ಪು ಅನುಷ್ಠಾನ: ಮುಖ್ಯ ಕಾರ್ಯದರ್ಶಿ ಬಳಿ ‘ಎ’ ಶ್ರೇಣಿ 32 ಅಧಿಕಾರಿಗಳ ಹಿಂಬಡ್ತಿ ಕಡತ?

ರಾಜೇಶ್ ರೈ ಚಟ್ಲ
Published 23 ಏಪ್ರಿಲ್ 2018, 20:02 IST
Last Updated 23 ಏಪ್ರಿಲ್ 2018, 20:02 IST
‘ಸುಪ್ರೀಂ’ ತೀರ್ಪು ಅನುಷ್ಠಾನ: ಮುಖ್ಯ ಕಾರ್ಯದರ್ಶಿ ಬಳಿ ‘ಎ’ ಶ್ರೇಣಿ 32 ಅಧಿಕಾರಿಗಳ ಹಿಂಬಡ್ತಿ ಕಡತ?
‘ಸುಪ್ರೀಂ’ ತೀರ್ಪು ಅನುಷ್ಠಾನ: ಮುಖ್ಯ ಕಾರ್ಯದರ್ಶಿ ಬಳಿ ‘ಎ’ ಶ್ರೇಣಿ 32 ಅಧಿಕಾರಿಗಳ ಹಿಂಬಡ್ತಿ ಕಡತ?   

ಬೆಂಗಳೂರು: ‘ಬಡ್ತಿ ಮೀಸಲು ಕಾಯ್ದೆ–2002’ ಅನ್ನು ರದ್ದುಪಡಿಸಿ ಸುಪ್ರೀಂ ಕೋರ್ಟ್‌ 2017ರ ಫೆ. 9ರಂದು ನೀಡಿದ್ದ ತೀರ್ಪು ಅನ್ವಯ ರಾಜ್ಯ ಸಚಿವಾಲಯ (ವಿಧಾನಸಭೆ ಮತ್ತು ವಿಧಾನಪರಿಷತ್‌ ಹೊರತುಪಡಿಸಿ) ಸಿದ್ಧಪಡಿಸಿದ್ದ ಗ್ರೂಪ್‌ ‘ಎ’ ಶ್ರೇಣಿಯ 32 ಅಧಿಕಾರಿಗಳ ಹಿಂಬಡ್ತಿಗೆ ಸಂಬಂಧಿಸಿದ ಕಡತವನ್ನು ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ತಮ್ಮ ಬಳಿ ಇಟ್ಟುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

‘ಅಧಿಕಾರಿಗಳ ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಆಧರಿಸಿ ಹಿಂಬಡ್ತಿ ಪಡೆಯುವ ಅಧಿಕಾರಿಗಳ ಪಟ್ಟಿಯನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ನೇತೃತ್ವದ ಇಲಾಖಾ ಪದೋನ್ನತಿ ಸಮಿತಿ ಸಿದ್ಧಪಡಿಸಿ, ಸಹಿಗಾಗಿ ಮುಖ್ಯಮಂತ್ರಿಗೆ ಕಳುಹಿಸಿತ್ತು. ಆ ಕಡತವನ್ನು ಮೌಖಿಕ ಆದೇಶದ ಮೂಲಕ ಮುಖ್ಯಮಂತ್ರಿ ಸಚಿವಾಲಯದಿಂದ ಮುಖ್ಯ ಕಾರ್ಯದರ್ಶಿ ತರಿಸಿಕೊಂಡಿದ್ದಾರೆ’ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ದೂರಿದರು.

‘ಹಿಂಬಡ್ತಿಗೆ ಒಳಗಾದ 18ರಿಂದ 20 ಅಧಿಕಾರಿಗಳು ಮುಖ್ಯ ಕಾರ್ಯದರ್ಶಿ ಮೇಲೆ ಒತ್ತಡ ಹೇರಿದ್ದಾರೆ. ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಸಮರ್ಪಕವಾಗಿಲ್ಲ ಎಂಬ ಕಾರಣ ಮುಂದಿಟ್ಟು ನ್ಯಾಯಾಲಯದಿಂದ ತಡೆಯಾಜ್ಞೆ ತರಲು ಕಾಲಾವಕಾಶ ಮಾಡಿಕೊಡುವ ಉದ್ದೇಶದಿಂದ ಕಡತವನ್ನು ಮುಖ್ಯ ಕಾರ್ಯದರ್ಶಿ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ’ ಎಂದೂ ಅವರು ಆರೋಪಿಸಿದರು.

ADVERTISEMENT

ಆದರೆ, ಈ ಆರೋಪವನ್ನು ನಿರಾಕರಿಸಿರುವ ಮುಖ್ಯ ಕಾರ್ಯದರ್ಶಿ, ‘ಸಚಿವಾಲಯದಲ್ಲಿ ಕೆಲವರು ತಮಗೆ ಬೇಕಾದಂತೆ ಬಡ್ತಿ ನೀಡಿದ್ದಾರೆ. ಅದನ್ನು ಪರಿಶೀಲಿಸಿ, ಬದಲಿಸಿ ಕಡತವನ್ನು ಕಳುಹಿಸಿದ್ದೇನೆ’ ಎಂದರು.

ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ: ಈ ಮಧ್ಯೆ, 43 ಇಲಾಖೆಗಳಲ್ಲಿ ತೀರ್ಪು ಅನುಷ್ಠಾನಗೊಳಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರ ಸೋಮವಾರ ಪ್ರಮಾಣಪತ್ರ ಸಲ್ಲಿಸಿದೆ.

ತೀರ್ಪು ಅನುಷ್ಠಾನಗೊಂಡಿಲ್ಲ ಎಂದು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿ ಇದೇ 25ರಂದು ವಿಚಾರಣೆಗೆ ಬರಲಿದೆ.

ಪ್ರಮಾಣ ಪತ್ರದಲ್ಲಿ ಏನಿದೆ: ರಾಜ್ಯ ಸರ್ಕಾರದ ಪರವಾಗಿ ಮುಖ್ಯ ಕಾರ್ಯದರ್ಶಿ ಸಲ್ಲಿಸಿದ ಪ್ರಮಾಣ ಪತ್ರದ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಕೋರ್ಟ್‌ ತೀರ್ಪಿನಂತೆ, ತತ್ಪರಿಣಾಮ ಕ್ರಮ (ಹಿಂಬಡ್ತಿ– ಮುಂಬಡ್ತಿಯೂ ಸೇರಿ) ತೆಗೆದುಕೊಂಡು ಏ. 16ರ ಒಳಗೆ ವರದಿ ನೀಡುವಂತೆ ಏ. 4ರಂದು ಎಲ್ಲ ಇಲಾಖೆಗಳಿಗೆ ಹೊರಡಿಸಿರುವ ಸುತ್ತೋಲೆಯನ್ನು ಪ್ರಮಾಣ ಪತ್ರದ ಜೊತೆ ಸಲ್ಲಿಸಿರುವ ಮುಖ್ಯ ಕಾರ್ಯದರ್ಶಿ, ‘ಬಿ.ಕೆ. ಪವಿತ್ರ ಮತ್ತು ಇತರರ ಪ್ರಕರಣದಲ್ಲಿ ಸುಪ್ರೀ ಕೋರ್ಟ್ ನೀಡಿರುವ ತೀರ್ಪನ್ನು ಇಲಾಖೆಗಳು, ನಿಗಮ ಮಂಡಳಿಗಳು, ಸ್ವಾಯತ್ತ ಸಂಸ್ಥೆಗಳು ಅನುಷ್ಠಾನಗೊಳಿಸಿವೆ’ ಎಂದು ತಿಳಿಸಿದ್ದಾರೆ.

‘ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳು ತೀರ್ಪು ಅನುಷ್ಠಾನ ಮಾಡಿರುವ ಕುರಿತು ನೀಡಿರುವ ದಾಖಲೆಗಳನ್ನು ಆಧರಿಸಿ ಈ ಪ್ರಮಾಣ ಪತ್ರ ಸಲ್ಲಿಸುತ್ತಿದ್ದೇನೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ಲೋಕೋಪಯೋಗಿ, ಇಂಧನ, ಗೃಹ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಆರ್ಥಿಕ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌, ನಗರಾಭಿವೃದ್ಧಿ, ಶಿಕ್ಷಣ, ಸಮಾಜ ಕಲ್ಯಾಣ ಸೇರಿ 43 ಇಲಾಖೆಗಳ ಪಟ್ಟಿಯನ್ನೂ ಅವರು ನೀಡಿದ್ದಾರೆ. ಇದೇ 25ರಂದು ಖುದ್ದು ಹಾಜರಿರುವಂತೆ ಮಾರ್ಚ್‌ 20ರಂದು ನೀಡಿರುವ ಆದೇಶವನ್ನು ವಿಲೇವಾರಿ ಮಾಡಬೇಕು’ ಎಂದೂ ಅವರು ಕೋರಿದ್ದಾರೆ.‌

ಕೆಎಟಿ ಆದೇಶದಿಂದ ಗೊಂದಲ’

‘63 ಇಲಾಖೆಗಳು ಮತ್ತು 133 ನಿಗಮ ಮಂಡಳಿಗಳಿವೆ. ಸರ್ಕಾರ ಕೆಲವು ಇಲಾಖೆಗಳಲ್ಲಿ ಮಾತ್ರ ಕೋರ್ಟ್‌ ತೀರ್ಪು ಪ್ರಕಾರ ಕ್ರಮ (ಹಿಂಬಡ್ತಿ– ಮುಂಬಡ್ತಿ) ತೆಗೆದುಕೊಂಡಿದೆ. ಜ್ಯೇಷ್ಠತಾ ಪಟ್ಟಿಯಲ್ಲಿ ಲೋಪವಿದೆ ಎಂದು ಕಂದಾಯ, ಪಶು ಸಂಗೋಪನೆ, ವಾಣಿಜ್ಯ ತೆರಿಗೆ ಸೇರಿದಂತೆ 20ಕ್ಕೂ ಹೆಚ್ಚು ಇಲಾಖೆಗಳಲ್ಲಿ ಹಿಂಬಡ್ತಿ ಪಡೆದವರು ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಮೆಟ್ಟಿಲೇರಿದ್ದು, ಯಥಾಸ್ಥಿತಿ ಕಾಪಾಡುವಂತೆ ಕೆಎಟಿ ಆದೇಶ ನೀಡಿರುವುದರಿಂದ ಗೊಂದಲ ಸೃಷ್ಟಿಯಾಗಿದೆ’ ಎಂದು ಅಹಿಂಸಾ (ಅಲ್ಪಸಂಖ್ಯಾತ, ಹಿಂದುಳಿದ, ಸಾಮಾನ್ಯ ವರ್ಗದ ನೌಕರರು) ಒಕ್ಕೂಟದ ಅಧ್ಯಕ್ಷ ಎಂ. ನಾಗರಾಜ್ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.