ADVERTISEMENT

ಸುರೇಶ್‌ಬಾಬು 7 ದಿನ ಸಿಬಿಐ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 19:58 IST
Last Updated 20 ಸೆಪ್ಟೆಂಬರ್ 2013, 19:58 IST

ಬೆಂಗಳೂರು: ಬಳ್ಳಾರಿಯ ವಿವಿಧೆಡೆ ಏಳು ಲಕ್ಷ ಟನ್‌ ಅದಿರು ಕಳ್ಳತನ ಮಾಡಿರುವ ಆರೋಪ ಎದುರಿಸುತ್ತಿರುವ ಕಂಪ್ಲಿ ಶಾಸಕ ಟಿ.ಎಚ್‌. ಸುರೇಶ್‌ ಬಾಬು ಅವರನ್ನು ಹೆಚ್ಚಿನ ವಿಚಾರಣೆಗಾಗಿ ಇದೇ 27 ರವರೆಗೆ ಸಿಬಿಐ ವಶಕ್ಕೆ ಒಪ್ಪಿಸಲಾಗಿದೆ.

ಬೇಲೆಕೇರಿ ಬಂದರಿನ ಮೂಲಕ ಅದಿರು ಕಳ್ಳಸಾಗಣೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಬಿಐ ಬೆಂಗಳೂರು ಭ್ರಷ್ಟಾಚಾರ ನಿಯಂತ್ರಣ ಘಟಕದ ಪೊಲೀಸರು, ಗುರುವಾರ ಸಂಜೆ ಸುರೇಶ್‌ ಬಾಬು ಅವರನ್ನು ಬಂಧಿಸಿದ್ದರು.
ನಗರ ಸಿವಿಲ್‌ ನ್ಯಾಯಾಲಯದ ಆವರಣದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಶುಕ್ರವಾರ ಬೆಳಿಗ್ಗೆ ಆರೋಪಿಯನ್ನು ಹಾಜರು ಪಡಿಸಲಾಯಿತು.

ಈ ಸಂದರ್ಭದಲ್ಲಿ ಮನವಿ­ಯೊಂದನ್ನು ನ್ಯಾಯಾಲಯದ ಮುಂದಿಟ್ಟ ತನಿಖಾ ತಂಡ, ಹೆಚ್ಚಿನ ವಿಚಾರಣೆಗಾಗಿ ಆರೋಪಿ ಶಾಸಕರನ್ನು ತನ್ನ ವಶಕ್ಕೆ ನೀಡುವಂತೆ ಕೋರಿತು. ಆರೋಪಿಯ ವಿರುದ್ಧ ಗಂಭೀರ ಸ್ವರೂಪದ ಆರೋಪಗಳಿವೆ. ಬಳ್ಳಾರಿಯ ವಿವಿಧ ಸ್ಥಳಗಳಲ್ಲಿ ಅದಿರು ಕಳ್ಳತನ ಮಾಡಿರುವುದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಪಡೆಯಬೇಕಿದೆ.

ಆದ್ದರಿಂದ ಸಿಬಿಐ ವಶಕ್ಕೆ ನೀಡಬೇಕು ಎಂದು ತನಿಖಾ ಸಂಸ್ಥೆಯ ಪರ ಪಬ್ಲಿಕ್‌ ಪ್ರಾಸಿಕ್ಯೂಟರ್‌ ನ್ಯಾಯಾಲಯಕ್ಕೆ ಮನವಿ ಮಾಡಿದರು.

ಅಷ್ಟರಲ್ಲೇ ಸುರೇಶ್‌ಬಾಬು ಪರ ವಕೀಲರು ನ್ಯಾಯಾಲಯಕ್ಕೆ ಹಾಜರಾಗಿ, ಆರೋಪಿಗೆ ಜಾಮೀನು ಮಂಜೂರು ಮಾಡುವಂತೆ ಕೋರಿ ಅರ್ಜಿ ಸಲ್ಲಿಸಿದರು. ಸುರೇಶ್‌ ಬಾಬು ಅವರನ್ನು ಸಿಬಿಐ ವಶಕ್ಕೆ ಒಪ್ಪಿಸದಂತೆ ಮನವಿಯನ್ನೂ ಮಾಡಿದರು.
ಸಿಬಿಐ ಮನವಿಯನ್ನು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿ. ಶ್ರೀಶಾನಂದ ಮಾನ್ಯ ಮಾಡಿದರು.

ಆರೋಪಿ ಪರ ವಕೀಲರು ಸಲ್ಲಿಸಿರುವ ಜಾಮೀನು ಅರ್ಜಿಗೆ ಸೆ.27ರಂದು ಆಕ್ಷೇಪಣೆ ಸಲ್ಲಿಸುವಂತೆ ಸಿಬಿಐ ಪಬ್ಲಿಕ್‌ ಪ್ರಾಸಿಕ್ಯೂಟರ್‌ಗೆ ಸೂಚಿಸಿ ಅಲ್ಲಿಯವರೆಗೂ ಜಾಮೀನು ಅರ್ಜಿಯ ವಿಚಾರಣೆ ಮುಂದೂಡಿದರು.

ದಿನವಿಡೀ ವಿಚಾರಣೆ: ಬಂಧನದ ಬಳಿಕ ಸುರೇಶ್‌ಬಾಬು ಅವರನ್ನು ಗಂಗಾನಗರ ದಲ್ಲಿರುವ ಸಿಬಿಐ ಕಚೇರಿಯಲ್ಲಿ ಇರಿಸಲಾಗಿತ್ತು.
  ಶುಕ್ರವಾರ ಬೆಳಿಗ್ಗೆ ಅಲ್ಲಿಂದ ನೇರವಾಗಿ

ಸಿವಿಲ್‌ ಕೋರ್ಟ್‌ ಆವರಣದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಕರೆತರಲಾಗಿತ್ತು.ಸಿಬಿಐ ವಶಕ್ಕೊಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದ ಬಳಿಕ ಮತ್ತೆ ಸಿಬಿಐ ಕಚೇರಿಗೆ ಕರೆದೊಯ್ಯಲಾಯಿತು.

ಡಿಐಜಿ ಆರ್‌. ಹಿತೇಂದ್ರ ನೇತೃತ್ವದಲ್ಲಿ ಹಲವು ಅಧಿಕಾರಿಗಳು ಇಡೀ ದಿನ ಸುರೇಶ್‌ಬಾಬು ವಿಚಾರಣೆ ನಡೆಸಿದ್ದಾರೆ.

ಜಿ.ಜನಾರ್ದನ ರೆಡ್ಡಿ ಅವರು ಸಚಿವರಾಗಿದ್ದ ಅವಧಿಯಲ್ಲಿ ನಡೆಸುತ್ತಿದ್ದ ಅಕ್ರಮ ಗಣಿಗಾರಿಕೆ, ಅರಣ್ಯ ಪ್ರದೇಶದಲ್ಲಿ ಕಬ್ಬಿಣದ ಅದಿರು ಕಳ್ಳತನ, ಬೇಲೆಕೇರಿ ಬಂದರಿನ ಮೂಲಕ ಆ ಅದಿರನ್ನು ರಫ್ತು ಮಾಡಿರುವುದು ಮತ್ತಿತರ ವಿಷಯಗಳ ಕುರಿತು ತನಿಖಾ ತಂಡವು ಆರೋಪಿಯನ್ನು ಪ್ರಶ್ನಿಸಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.