ADVERTISEMENT

ಸುಳ್ಳು ದಾಖಲೆ: ಎಚ್‌ಡಿಕೆ ಆರೋಪ

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 19:30 IST
Last Updated 3 ಜನವರಿ 2012, 19:30 IST

ಬೆಂಗಳೂರು: `ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದ್ದಕ್ಕೆ ದೊರೆತ ಫಲ ಇದು. ಈ ಕೊಳಕು ರಾಜಕೀಯ ನನಗೆ ಬೇಸರ ತರಿಸಿದೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಬಿ.ಜೆ. ಪುಟ್ಟಸ್ವಾಮಿ ಅವರ ಸೂಚನೆಯ ಮೇರೆಗೆ ನನ್ನ ವಿರುದ್ಧ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ. ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಯಾವುದೇ ಅಕ್ರಮ ಎಸಗಿಲ್ಲ.~

-ಥಣಿಸಂದ್ರದಲ್ಲಿ 3.08 ಎಕರೆ ಭೂಮಿಯನ್ನು ಸ್ವಾಧೀನ ಪ್ರಕ್ರಿಯೆಯಿಂದ ಅಕ್ರಮವಾಗಿ ಕೈಬಿಟ್ಟಿರುವುದಾಗಿ ತಮ್ಮ ಮೇಲೆ ದಾಖಲಾಗಿರುವ ಖಾಸಗಿ ದೂರಿನ ಕುರಿತು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಮಾತು ಇದು. `ಸರ್ಕಾರದ ಭ್ರಷ್ಟಾಚಾರಗಳ ವಿರುದ್ಧ ಹೋರಾಟ ನಡೆಸಿದ ಕಾರಣಕ್ಕೆ ಬಿಜೆಪಿಯಲ್ಲಿನ ನನ್ನ ರಾಜಕೀಯ ವಿರೋಧಿಗಳು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ನನ್ನನ್ನು ನ್ಯಾಯಾಲಯಕ್ಕೆ ಎಳೆಯುತ್ತಿದ್ದಾರೆ~ ಎಂದು ದೂರಿದರು.

`ಈ ಕೃತ್ಯದಲ್ಲಿ ಮುಖ್ಯಮಂತ್ರಿಗಳ ಸಚಿವಾಲಯ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕೆಲವು ಅಧಿಕಾರಿಗಳು ಶಾಮೀಲಾಗಿದ್ದಾರೆ. ಬಿ.ಎಸ್. ಯಡಿಯೂರಪ್ಪ ಆಡಳಿತಾವಧಿಯಲ್ಲಿ ನೇಮಕವಾಗಿದ್ದ ಕೆಲವು ಅಧಿಕಾರಿಗಳನ್ನು ಡಿ.ವಿ. ಸದಾನಂದ ಗೌಡರು ಯಾವ ಕಾರಣಕ್ಕೆ ತಮ್ಮ ಸಚಿವಾಲಯದಲ್ಲಿ ಮುಂದುವರಿಸಿದ್ದಾರೆ~ ಎಂದು ಪ್ರಶ್ನಿಸಿದರು.

ಥಣಿಸಂದ್ರದಲ್ಲಿ ರವಿಪ್ರಕಾಶ್ ಮತ್ತು ಶ್ರೀನಿವಾಸ್ ಅವರ ಭೂಮಿಯ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಬಿದ್ದಿರಲಿಲ್ಲ. ಹಾಗಾಗಿ ಅವರ ಭೂಮಿಯನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲು ಆದೇಶಿಸಲಾಗಿತ್ತು, ಅಂಥ ನಿರ್ಧಾರ ಕೈಗೊಳ್ಳುವ ಅಧಿಕಾರ ಮುಖ್ಯಮಂತ್ರಿಗೆ ಇದೆ. ಇದರಲ್ಲಿ ಯಾವುದೇ ಅಕ್ರಮ ಎಸಗಿಲ್ಲ ಎಂದರು.

`ಹಜಾರೆ ಚರ್ಚೆಗೆ ಬರಲಿ~: `ಲೋಕಾಯುಕ್ತ ಸಂಸ್ಥೆಯಲ್ಲಿ ಖಾಸಗಿ ದೂರು ದಾಖಲಿಸುವುದು ಇತ್ತೀಚೆಗೆ ದುರುಪಯೋಗ ಆಗುತ್ತಿದೆ. ಲೋಕಾಯುಕ್ತ ಸಂಸ್ಥೆಯಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯವೇ ಎಂಬ ಕುರಿತು ಬಹಿರಂಗ ಚರ್ಚೆಗೆ ಸಿದ್ಧ. ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮತ್ತು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ತಂಡದ ಸದಸ್ಯರು ಚರ್ಚೆಗೆ ಬರಲಿ~ ಎಂದರು.

`ಯಡಿಯೂರಪ್ಪ ಅವರು ನನ್ನನ್ನು ಅನಗತ್ಯವಾಗಿ ಕೆಣಕುತ್ತಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್ ಮುಖಂಡರೊಬ್ಬರಿಗೆ ಸಹಾಯವಾಗುವಂತೆ ಭೂಮಿಯನ್ನು ಸ್ವಾಧೀನ ಪ್ರಕ್ರಿಯೆಯಿಂದ ಅಕ್ರಮವಾಗಿ ಕೈಬಿಟ್ಟಿರುವ ಹಗರಣವನ್ನು ಬಯಲಿಗೆಳೆದರೆ ಅವರ ಸಮೀಪವರ್ತಿಗಳು ಎಷ್ಟು ಹಣ ಪಡೆದುಕೊಂಡಿದ್ದಾರೆ ಎಂಬುದು ಬಯಲಾಗುತ್ತದೆ~ ಎಂದು ಎಚ್ಚರಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.