ADVERTISEMENT

ಸುಳ್ಳು `ಪ್ರಮಾಣ ಪತ್ರ'ಕ್ಕೆ ಕ್ರಿಮಿನಲ್ ಕೇಸ್

ಎಂ.ಮಹೇಶ
Published 2 ಏಪ್ರಿಲ್ 2013, 19:59 IST
Last Updated 2 ಏಪ್ರಿಲ್ 2013, 19:59 IST
ಸುಳ್ಳು `ಪ್ರಮಾಣ ಪತ್ರ'ಕ್ಕೆ  ಕ್ರಿಮಿನಲ್ ಕೇಸ್
ಸುಳ್ಳು `ಪ್ರಮಾಣ ಪತ್ರ'ಕ್ಕೆ ಕ್ರಿಮಿನಲ್ ಕೇಸ್   

ದಾವಣಗೆರೆ: ಬೇಸಗೆ ರಜೆ ಆರಂಭವಾಗಿದೆ. ಮನೆಯವರು, ಮಕ್ಕಳೊಂದಿಗೆ ಒಂದಷ್ಟು ದಿನ ಎಲ್ಲಿಗಾದರೂ ಪ್ರವಾಸ ಹೋಗಿ ಬರೋಣ. ಚುನಾವಣೆ ಸಂದರ್ಭವಾದ್ದರಿಂದ ರಜೆ ಸಿಗುವುದಿಲ್ಲ ಎಂದಾದರೆ, ಅನಾರೋಗ್ಯ ಎಂದು ಮೇಲಧಿಕಾರಿಗೆ ವೈದ್ಯಕೀಯ ಪ್ರಮಾಣಪತ್ರ (ಮೆಡಿಕಲ್ ಸರ್ಟಿಫಿಕೆಟ್) ಕೊಟ್ಟರಾಯಿತು ಎಂದು `ಉಪಾಯ' ಮಾಡಲು ಯೋಚಿಸುತ್ತಿರುವ ಸರ್ಕಾರಿ ನೌಕರರೇ ಸ್ವಲ್ಪ ನಿಲ್ಲಿ. ನೀವು ಕೊಡುವ `ಪ್ರಮಾಣಪತ್ರ' ಕೆಲಸಕ್ಕೆ ಕುತ್ತು ತರಬಹುದು ಅಥವಾ ನಿಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಲು ಅವಕಾಶ ಮಾಡಿಕೊಡಬಹುದು!

ಏಕೆಂದರೆ, ಚೆನ್ನಾಗಿದ್ದರೂ `ಆರೋಗ್ಯ ಸರಿ ಇಲ್ಲ' ಎಂದು ವೈದ್ಯಕೀಯ ಪ್ರಮಾಣಪತ್ರ ಕೊಟ್ಟು ಚುನಾವಣಾ ಕರ್ತವ್ಯದಿಂದ ತಪ್ಪಿಸಿಕೊಳ್ಳುವವರ ಮೇಲೆ ಚುನಾವಣಾ ಆಯೋಗ ಕಣ್ಣಿಟ್ಟಿದೆ. ಇಂತಹ ನೌಕರರಿಗೆ ಶಿಸ್ತುಕ್ರಮದ `ಬಿಸಿ' ಮುಟ್ಟಿಸಲು ಸೂಚಿಸಿದೆ.

ನೆಪ ಹೇಳುವಂತಿಲ್ಲ: ರಜೆ ನಡುವೆಯೂ ಚುನಾವಣಾ ಕರ್ತವ್ಯಕ್ಕೆ ಹೋಗುವುದು ಏಕೆ? ಆರಾಮವಾಗಿ ಇರೋಣ ಎಂದುಕೊಳ್ಳುವ ಸರ್ಕಾರಿ ನೌಕರರು ಈ ಬಾರಿ ನೆಪ ಹೇಳುವಂತಿಲ್ಲ. ರಾಜ್ಯದಾದ್ಯಂತ ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಹುತೇಕ ಸರ್ಕಾರಿ ನೌಕರರನ್ನು ಚುನಾವಣಾ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ತಪ್ಪಿಸಿಕೊಳ್ಳಲು ವೈದ್ಯಕೀಯ ಪ್ರಮಾಣಪತ್ರ ಕೊಟ್ಟು ಕೈತೊಳೆದುಕೊಳ್ಳುವುದಕ್ಕೆ ಈ ಬಾರಿ ನಿಬರ್ಂಧ ವಿಧಿಸಲಾಗುತ್ತಿದೆ.

ಪರಿಶೀಲನಾ ಸಮಿತಿ:  ಪ್ರಮಾಣಪತ್ರ ಪರಿಶೀಲಿಸಲು `ಸ್ಕ್ರೀನಿಂಗ್ ಕಮಿಟಿ'  ರಚಿಸಬೇಕು. ತಾಲ್ಲೂಕು ಮಟ್ಟದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ಒಬ್ಬ ಸರ್ಜನ್ ಒಳಗೊಂಡಂತೆ ಈ ಸಮಿತಿ ರಚನೆಯಾಗಬೇಕು. ಸಮಿತಿಯಲ್ಲಿ ಒಬ್ಬ ಖಾಸಗಿ ವೈದ್ಯರನ್ನು ಸೇರಿಸಿಕೊಳ್ಳಲು ಅವಕಾಶವಿದೆ. ಅವರನ್ನು ಲಾಟರಿ ಮೂಲಕ ಆಯ್ಕೆ ಮಾಡಿಕೊಳ್ಳಬೇಕು. ಚುನಾವಣೆ ವೇಳೆ, ರಜೆ ಕೋರಿ ಸರ್ಕಾರಿ ನೌಕರರು ನೀಡುವ `ವೈದ್ಯಕೀಯ ಪ್ರಮಾಣಪತ್ರ'ವನ್ನು ಸಮಿತಿ ಮುಂದಿಡಬೇಕು. ಸಮಿತಿ ಅರ್ಜಿ ಪರಿಶೀಲಿಸಿ, ವೈದ್ಯರು ಅರ್ಜಿದಾರರನ್ನು ತಪಾಸಣೆಗೆ ಒಳಪಡಿಸಬೇಕು. ಅರ್ಜಿದಾರರಿಗೆ ನಿಜವಾಗಿಯೂ ಅನಾರೋಗ್ಯವಿದ್ದಲ್ಲಿ ಮಾತ್ರ ರಜೆ ಮಂಜೂರು ಮಾಡಲು ಶಿಫಾರಸು ಮಾಡಬೇಕು ಎಂದು  ಆಯೋಗ ಚುನಾವಣಾಧಿಕಾರಿಗಳಿಗೆ ಸೂಚಿಸಿದೆ.

ನೆಪ ಹೇಳಿದರೆ...: ಒಂದು ವೇಳೆ, ಕೆಲಸದಿಂದ ತಪ್ಪಿಸಿಕೊಳ್ಳಲು ವೈದ್ಯಕೀಯ ಪ್ರಮಾಣಪತ್ರ ಕೊಟ್ಟಿದ್ದೇ ಆದಲ್ಲಿ, ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಕೇವಲ ನೌಕರರು ಮಾತ್ರವಲ್ಲದೇ ಪ್ರಮಾಣಪತ್ರ ನೀಡಿ ರಜೆ ನೀಡುವಂತೆ ಶಿಫಾರಸು ಮಾಡಿದ ವೈದ್ಯರ (ಖಾಸಗಿ/ಸರ್ಕಾರಿ) ವಿರುದ್ಧವೂ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಚುನಾವಣೆ ಸಂದರ್ಭ  ಸಕಾರಣವಿಲ್ಲದೇ, ರಜೆ ಪಡೆಯುವುದು ಕಾನೂನು ಉಲ್ಲಂಘನೆಯಾಗುತ್ತದೆ. ಹೀಗೆ ಸುಳ್ಳು ಹೇಳಿದ ನೌಕರರಿಗೆ ಗರಿಷ್ಠ ಶಿಕ್ಷೆ ಎಂದರೆ, ಜೈಲಿಗೆ ಕಳುಹಿಸುವುದಕ್ಕೂ ಅವಕಾಶವಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ಚುನಾವಣೆಯ ಕೆಲಸ, ಮತದಾನ, ಮತ ಎಣಿಕೆ, ನೀತಿಸಂಹಿತೆ ಅನುಷ್ಠಾನ, ಮತಗಟ್ಟೆಗಳಲ್ಲಿನ ಕಾರ್ಯ ಚಟುವಟಿಕೆ, ತರಬೇತಿ ಮೊದಲಾದ ಕೆಲಸಕ್ಕೆ ತರಬೇತಿ ಆರಂಭಿಸಲಾಗಿದೆ.  `ನೆಪ' ಹೇಳಿ ಕೆಲಸದಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಹೀಗಾಗಿ, ಆಯೋಗದ ನಿರ್ದೇಶನದಂತೆ ಪರಿಶೀಲನಾ ಸಮಿತಿ ರಚಿಸಲಾಗುವುದು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.