ADVERTISEMENT

ಸೆನ್ಸಾರ್ ಮಂಡಳಿಗೆ ಕೋರ್ಟ್ ನೋಟಿಸ್

​ಪ್ರಜಾವಾಣಿ ವಾರ್ತೆ
Published 29 ಮೇ 2012, 19:30 IST
Last Updated 29 ಮೇ 2012, 19:30 IST

ಬೆಂಗಳೂರು: ಅಂಬರೀಷ್, ಉಪೇಂದ್ರ ನಟಿಸಿರುವ `ಕಠಾರಿವೀರ ಸುರಸುಂದರಾಂಗಿ~ ಚಿತ್ರ ವಿವಾದ ಹೈಕೋರ್ಟ್ ಮೆಟ್ಟಿಲೇರಿದೆ.

ಹಿಂದೂ ದೇವತೆಗಳಿಗೆ ಚಿತ್ರದಲ್ಲಿ ಅಪಮಾನ ಮಾಡಲಾಗಿದೆ, ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಿದೆ. ಈ ಹಿನ್ನೆಲೆಯಲ್ಲಿ ಚಲನಚಿತ್ರ ಪ್ರದರ್ಶನವನ್ನು ರದ್ದು ಮಾಡಲು ಸರ್ಕಾರಕ್ಕೆ ಆದೇಶಿಸಬೇಕು ಎಂದು ನಾಗಾರ್ಜುನ ನಾಯ್ಡು ಹಾಗೂ ಇತರರು ನ್ಯಾಯಾಲಯವನ್ನು ಕೋರಿದ್ದಾರೆ.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೋಹನ ಶಾಂತನಗೌಡರ್, ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸೆನ್ಸಾರ್ ಮಂಡಳಿಗೆ ಮಂಗಳವಾರ ನೋಟಿಸ್ ಜಾರಿಗೆ ಆದೇಶಿಸಿದರು.

`ಈ ಚಿತ್ರದಲ್ಲಿ ಹಲವು ಆಕ್ಷೇಪಾರ್ಹ ಅಂಶಗಳಿವೆ. ದೇವತೆಗಳ ವಿರುದ್ಧ ಕೆಟ್ಟ ಪದಗಳನ್ನು ಬಳಸಲಾಗಿದೆ. `ಕೃಷ್ಣ ಹಾಗೂ ರಾಮ ಹಲವು  ಬಾರಿ ತಪ್ಪೆಸಗಿದ್ದರೂ ಅವರನ್ನು ನೀನು ಏಕೆ ಶಿಕ್ಷಿಸಿಲ್ಲ~ ಎಂದು ಚಿತ್ರದ ನಾಯಕ ಯಮನನ್ನು ಕೇಳುವುದು, ಚಿತ್ರಗುಪ್ತನನ್ನು ಬ್ಲ್ಯಾಕ್‌ಮೇಲ್ ಮಾಡುವಂತಹ ಸನ್ನಿವೇಶಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಿವೆ.

ಇಂದ್ರನ ಮಗಳು ಇಂದ್ರಜಾಳ ಜೊತೆ ಚಿತ್ರದ ನಾಯಕ ಮಾತನಾಡುವಾಗ ಕೆಲವು ಅಸಾಂವಿಧಾನಿಕ ಪದಗಳನ್ನು ಬಳಕೆ ಮಾಡಲಾಗಿದೆ. ಆಕೆಯನ್ನು ನಾಯಕನ ಪ್ರೇಯಸಿಯಂತೆ ಬಿಂಬಿಸಲಾಗಿದೆ. ಪೂಜ್ಯ ಭಾವನೆಯಿಂದ ಪೂಜಿಸಲ್ಪಡುವ ಸಪ್ತ ಋಷಿಗಳಿಗೆ ಬೆದರಿಕೆ ಹಾಕುವಂತಹ ಸನ್ನಿವೇಶಗಳು ಚಿತ್ರದಲ್ಲಿ ಇವೆ~ ಎನ್ನುವುದು ಅರ್ಜಿದಾರರ ದೂರು. ಚಿತ್ರ ನಿರ್ಮಾಪಕ ಮುನಿರತ್ನ ಅವರನ್ನೂ ಅರ್ಜಿಯಲ್ಲಿ ಪ್ರತಿವಾದಿಯನ್ನಾಗಿಸಲಾಗಿದೆ. ವಿಚಾರಣೆ ಮುಂದೂಡಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.