ಬೆಂಗಳೂರು: ‘ಸಿನಿಮಾದ ಸೋಲನ್ನು ನಿಭಾಯಿಸುವುದು ಹೇಗೆ?’. ಯುವ ಸಿನಿಮಾ ತಂತ್ರಜ್ಞೆಯೊಬ್ಬರಿಂದ ಈ ಪ್ರಶ್ನೆ ಎದುರಾದಾಗ ಮಂದಹಾಸ ಬೀರಿದರು ಖ್ಯಾತ ನಿರ್ದೇಶಕ ಮಣಿರತ್ನಂ. ‘ಏನೂ ಮಾಡಬೇಡಿ. ಸೋಲೇ ನಿಮಗೆ ಎಲ್ಲವನ್ನು ಕಲಿಸುತ್ತದೆ. ಎಲ್ಲಿ ಸೋತಿದ್ದೇವೆ ಎನ್ನುವುದರ ಬಗ್ಗೆ ಗಮನ ನೀಡಿ’ ಎಂದು ತಟ್ಟನೆ ಉತ್ತರಿಸಿದರು.
ನಗರದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಶನಿವಾರ ಮಣಿ ರತ್ನಂ ಅವರೊಂದಿಗೆ ನಡೆದ ಸಂವಾದ, ಯುವ ಸಿನಿಮಾ ತಂತ್ರಜ್ಞರಿಗೆ ನುರಿತ ಶಿಕ್ಷಕರೊಬ್ಬರ ಪಾಠದಂತಿತ್ತು. ಸಿನಿ ಉತ್ಸಾಹಿಗಳಿಂದ ಒಂದರ ಹಿಂದೆ ಒಂದು ಪ್ರಶ್ನೆಗಳು ತೂರಿ ಬರುತ್ತಿದ್ದರೆ, ಸಾವಧಾನವಾಗಿ ತಣ್ಣಗೆ, ಲವಲವಿಕೆಯಿಂದ ಉತ್ತರಿಸಿದರು ಮಣಿರತ್ನಂ.
1983ರಲ್ಲಿ ಅವರು ನಿರ್ದೇಶಿಸಿದ್ದ ಕನ್ನಡ ಚಿತ್ರ ‘ಪಲ್ಲವಿ ಅನುಪಲ್ಲವಿ’ ನೆನಪಿನೊಂದಿಗೆ ಆರಂಭವಾದ ಸಂವಾದ ಕಳೆಗಟ್ಟಿದ್ದು ಈ ಪ್ರಶ್ನೋತ್ತರದಿಂದ. ಸೆನ್ಸಾರ್ ಮಂಡಳಿಯಲ್ಲಿ ರಾಜಕೀಯ ಹಸ್ತಕ್ಷೇಪದ ಕುರಿತು ಸಭಿಕರ ಸಾಲಿನಲ್ಲಿದ್ದ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರಸಿಂಗ್ ಬಾಬು ಪ್ರಶ್ನೆಗೆ ಉತ್ತರಿಸಿದ ಮಣಿರತ್ನಂ, ‘ಸೆನ್ಸಾರ್ ಮಂಡಳಿ ಸ್ವತಂತ್ರ ಸಂಸ್ಥೆ. ಇದು ಕೆಲವು ವೇಳೆ ಆಡಳಿತಾರೂಢ ಸರ್ಕಾರಗಳ ಧೋರಣೆಗೆ ಅನುಗುಣವಾಗಿ ಕೆಲಸ ಮಾಡುತ್ತದೆ. ಇದು ಬೇಸರದ ಸಂಗತಿ. ರಾಜಕಾರಣಿಗಳು ಸೆನ್ಸಾರ್ ಮಂಡಳಿಯಲ್ಲಿ ಹಸ್ತಕ್ಷೇಪ ಮಾಡಬಾರದು’ ಎಂದರು. ‘ಬಾಂಬೆ’ ಮತ್ತು ‘ಇರುವರ್’ ಚಿತ್ರಗಳ ಸಮಯದಲ್ಲಿ ಅವರು ಎದುರಿಸಿದ ಪರಿಸ್ಥಿತಿಗಳೂ ಮಾತಿನಲ್ಲಿ ಇಣುಕಿದ್ದವು.
*
ಕನ್ನಡ ಚಿತ್ರಕ್ಕೆ ಮಣಿ?
ಸಂವಾದದ ಆರಂಭದಲ್ಲಿ ರಾಜೇಂದ್ರಸಿಂಗ್ ಬಾಬು, ‘ಮಣಿ, ಕನ್ನಡ ಚಿತ್ರವನ್ನು ನಿರ್ದೇಶಿಸುವುದಾದರೆ ನಾನು ನಿರ್ಮಾಣ ಮಾಡುತ್ತೇನೆ’ ಎಂದರು. ಸಂವಾದದಲ್ಲೂ ಪ್ರೇಕ್ಷಕರಿಂದ ಈ ಒತ್ತಾಯ ಕೇಳಿ ಬಂದಿತು. ಆಗ ಮಣಿರತ್ನಂ ‘ಬಾಬು ಬಂಡವಾಳ ಹೂಡುತ್ತೇನೆ ಎಂದಿದ್ದಾರೆ. ಖಂಡಿತಾ ನಾನು ಕನ್ನಡ ಚಿತ್ರ ನಿರ್ದೇಶಿಸುವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.