ADVERTISEMENT

ಸೇವೆಯಿಂದ ಶಿಕ್ಷಕಿ ವಜಾ

ಬೆಂಕಿ ಹಚ್ಚಿಕೊಂಡ ಬಾಲಕ ಚೇತರಿಕೆ

ಅಕ್ಷತಾ ಎಂ.
Published 29 ನವೆಂಬರ್ 2012, 20:28 IST
Last Updated 29 ನವೆಂಬರ್ 2012, 20:28 IST

ವಿಜಾಪುರ: ಶಾಲೆಯಲ್ಲಿಯೇ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ತೀವ್ರ ಸುಟ್ಟ ಗಾಯಗಳಾಗಿರುವ ಇಲ್ಲಿನ ನೀಲಕಂಠೇಶ್ವರ ವಿದ್ಯಾಮಂದಿರದ ವಿದ್ಯಾರ್ಥಿ ಅಜಯ್ ಪ್ರಮೋದ ಜಾಧವ (10) ಸೋಲಾಪುರದ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ ಎಂದು ಆತನ ತಂದೆ ಪ್ರಮೋದ ಜಾಧವ ಹೇಳಿದರು.

ಈ ಮಧ್ಯೆ, ಶಿಕ್ಷಕಿ ರಾಧಿಕಾ ರಜಪೂತ ಅವರನ್ನು ಸೇವೆಯಿಂದ ವಜಾ ಮಾಡಲಾಗಿದೆ ಎಂದು ಶಾಲೆಯ ಆಡಳಿತ ಮಂಡಳಿ ತಿಳಿಸಿದೆ.
`ಅಜಯ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ. ನಮ್ಮಂದಿಗೆ ಮಾತನಾಡಿದ್ದಾನೆ. ಬೆಳಿಗ್ಗೆ ಕಾಫಿ-ಬಿಸ್ಕತ್, ಎಳೆನೀರು, ಹಣ್ಣಿನ ರಸ ಕೊಟ್ಟಿದ್ದೇವೆ' ಎಂದು ಸೋಲಾಪುರದಿಂದ ದೂರವಾಣಿ ಮೂಲಕ ಪ್ರಮೋದ ಜಾಧವ `ಪ್ರಜಾವಾಣಿ'ಗೆ ತಿಳಿಸಿದರು.

`ಸೋಲಾಪುರಕ್ಕೆ ತೆರಳಿ ದೂರು ನೀಡುವಂತೆ ಬಾಲಕನ ತಂದೆಗೆ ಕೋರಲಾಯಿತು. ಬೆಳಿಗ್ಗೆ ಶಾಲೆಗೆ ಹೋಗುವುದಿಲ್ಲ ಎಂದು ಅಜಯ್ ಹಠ ಮಾಡುತ್ತಿದ್ದ. ಶಾಲೆ ಬಿಡುವುದು ಬೇಡ. ನೀನು ಹೋಗು ಎಂದು ತಾಯಿ ಬುದ್ಧಿವಾದ ಹೇಳಿ ಶಾಲೆಗೆ ಕಳಿಸಿದ್ದಳು. ನಮ್ಮ ಹುಡುಗನದೇ ತಪ್ಪಿದೆ. ಇನ್ನೊಬ್ಬರ ಮೇಲೆ ಏಕೆ ದೂರು ಕೊಡುವುದು ಎಂದು ದೂರು ನೀಡಲು ಪ್ರಮೋದ ನಿರಾಕರಿಸಿದರು. ಹೀಗಾಗಿ ಅವರ ಹೇಳಿಕೆ ಪಡೆದು ನಮ್ಮ ಪೊಲೀಸರು ವಾಪಸ್ ಬಂದಿದ್ದಾರೆ. ಈ ಘಟನೆ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ' ಎಂದು ಇಲ್ಲಿಯ ಎಪಿಎಂಸಿ ಠಾಣೆಯ ಪಿಎಸ್‌ಐ ಮಹಾಂತೇಶ ಧಾಮಣ್ಣವರ ತಿಳಿಸಿದರು.

`ಅಜಯ್‌ಗೆ  ಶೇ 60ರಷ್ಟು ಸುಟ್ಟಗಾಯಗಳಾಗಿವೆ. ಮರ್ಮಾಂಗ, ಗಂಟಲು ಹತ್ತಿರ ತೀವ್ರ ತರದ ಗಾಯವಾಗಿದೆ' ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ನಾವೂ ಅತ್ತೆವು: `ಆಸ್ಪತ್ರೆಗೆ ಹೋದಾಗ ಅಜಯ್ ನಮ್ಮಂದಿಗೆ ಮಾತನಾಡಲು ಯತ್ನಿಸಿದ. ಆದರೆ, ಆತನಿಂದ ಮಾತು ಹೊರಡಲಿಲ್ಲ. ನಾನು ಆತನ ಕೈ ಹಿಡಿದಾಗ ಆತ ಪ್ರಯಾಸಪಟ್ಟು ತನ್ನ ಇನ್ನೊಂದು ಕೈಯಿಂದ ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡ. ಆತನ ಮುಖದಲ್ಲಿ ವೇದನೆ ಪ್ರತಿಫಲಿಸುತ್ತಿತ್ತು. ಬಾಲಕನ ಯಾತನೆ  ಕಂಡು ದುಃಖ ತಡೆಯಲಾಗದೆ ನಾನೂ ಅತ್ತುಬಿಟ್ಟೆ. ಪ್ರಭಾರ ಡಿಡಿಪಿಐ ಟಿ.ಎಚ್. ಮೇಲಿನಕೇರಿ ಸೇರಿದಂತೆ ಅಲ್ಲಿದ್ದವರೆಲ್ಲರೂ ಕಣ್ಣೀರಿಟ್ಟರು' ಎಂದು ಆಸ್ಪತ್ರೆಗೆ ಭೇಟಿ ನೀಡಿದ್ದ ಇಲ್ಲಿಯ ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷಕ ಡಾ.ಅಶೋಕ ಲಿಮಕರ ಹಳಹಳಿಸಿದರು.

`ಪ್ರಮೋದ ಕಡುಬಡವ. ಶಾಲಾ ಆಡಳಿತ ಮಂಡಳಿ ನಿರ್ದೇಶಕರೇ ಬಾಲಕನನ್ನು ಸೋಲಾಪುರಕ್ಕೆ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆ ಖರ್ಚು ವೆಚ್ಚ ಭರಿಸಿದ್ದಾರೆ. ಸರ್ಕಾರದಿಂದ ಸಾಧ್ಯವಿರುವಷ್ಟು ಹಾಗೂ ಅಧಿಕಾರಿಗಳು ಸೇರಿ ವೈಯಕ್ತಿಕವಾಗಿ ನೆರವು ನೀಡುತ್ತೇವೆ. ಎಷ್ಟೇ ಖರ್ಚಾದರೂ ಚಿಕಿತ್ಸೆ ನೀಡಿ ಎಂದು ಆಸ್ಪತ್ರೆಯವರಿಗೆ ಮನವಿ ಮಾಡಿದ್ದೇವೆ' ಎಂದು ಮೇಲಿನಕೇರಿ ಹಾಗೂ ಡಾ.ಲಿಮಕರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.