ADVERTISEMENT

ಸ್ಪೀಕರ್‌ಗೆ ಹೈಕೋರ್ಟ್‌ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2018, 19:40 IST
Last Updated 20 ಮಾರ್ಚ್ 2018, 19:40 IST
ಸ್ಪೀಕರ್‌ಗೆ ಹೈಕೋರ್ಟ್‌ ಪ್ರಶ್ನೆ
ಸ್ಪೀಕರ್‌ಗೆ ಹೈಕೋರ್ಟ್‌ ಪ್ರಶ್ನೆ   

ಬೆಂಗಳೂರು: ಜೆಡಿಎಸ್‌ನ ಏಳು ಬಂಡಾಯ ಶಾಸಕರ ಅನರ್ಹತೆ ಸಂಬಂಧ ಕಾಯ್ದಿರಿಸಿರುವ ತೀರ್ಪನ್ನು ಇದೇ 22ರ ಮಧ್ಯಾಹ್ನದೊಳಗೆ ಪ್ರಕಟಿಸಲು ಸಾಧ್ಯವೇ ಅಥವಾ ಇಲ್ಲವೇ ಎಂಬುದನ್ನು ಬುಧವಾರದ (ಮಾ.21) ಒಳಗೆ ತಿಳಿಸುವಂತೆ ಸ್ಪೀಕರ್‌ ಕಚೇರಿಗೆ ಹೈಕೋರ್ಟ್‌ ಸೂಚಿಸಿದೆ.

ಈ ಸಂಬಂಧ ಜೆಡಿಎಸ್‌ ಶಾಸಕರಾದ ಮೂಡಿಗೆರೆಯ ಬಿ.ಬಿ.ನಿಂಗಯ್ಯ ಹಾಗೂ ಶ್ರವಣಬೆಳಗೊಳದ ಶಾಸಕ ಸಿ.ಎನ್‌. ಬಾಲಕೃಷ್ಣ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಆರ್‌.ಎಸ್. ಚೌಹಾಣ್‌ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

‘ಸ್ಪೀಕರ್ ತಮ್ಮ ಆದೇಶವನ್ನು ಕಾಯ್ದಿರಿಸಿ ಇಟ್ಟುಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ. ಅವರು ಏನು ಬೇಕಾದರೂ ತೀರ್ಮಾನ ಕೈಗೊಳ್ಳಲಿ. ಆದರೆ, ಅದನ್ನು ರಾಜ್ಯಸಭೆ ಚುನಾವಣೆಗೂ ಮುನ್ನವೇ ಪ್ರಕಟಿಸಲಿ’  ಎಂದು ನ್ಯಾಯಮೂರ್ತಿ ಚೌಹಾಣ್‌ ಹೇಳಿದರು.

ADVERTISEMENT

‘ಬೇಕಾದರೆ ಈ ನ್ಯಾಯಪೀಠದ ಆದೇಶವನ್ನು ನೀವು ಮೇಲಿನ ಕೋರ್ಟ್‌ನಲ್ಲಿ ಪ್ರಶ್ನಿಸಿಕೊಳ್ಳಿ’ ಎಂದು ಸರ್ಕಾರಕ್ಕೆ ಹೇಳಿದ ನ್ಯಾಯಮೂರ್ತಿಗಳು, ‘ವಿನಾಕಾರಣ ತೀರ್ಪನ್ನು ಕಾಯ್ದಿರಿಸಿ ಇಟ್ಟುಕೊಳ್ಳುವುದರಿಂದ ಯಾವ ಸಾರ್ಥಕತೆ ಉಂಟಾಗುತ್ತದೆ’ ಎಂದು ಪ್ರಶ್ನಿಸಿದರು.

ಅರ್ಜಿದಾರರ ಪರ ಹಿರಿಯ ವಕೀಲ ಉದಯ ಹೊಳ್ಳ, ‘ಇದೇ 23ರಂದು ರಾಜ್ಯಸಭೆಗೆ ಚುನಾವಣೆ ನಡೆಯಲಿದೆ. ಆದ್ದರಿಂದ ಸ್ಪೀಕರ್‌ ಕಾಯ್ದಿರಿಸಿರುವ ತೀರ್ಪನ್ನು ಪ್ರಕಟಿಸಲು ನಿರ್ದೇಶಿಸಬೇಕು’ ಎಂದು ಕೋರಿದರು.

ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್‌ ಜನರಲ್‌ ಎಂ.ಆರ್.ನಾಯಕ್‌, ‘ಸ್ಪೀಕರ್ ಅವರೇನೂ ಪೂರ್ಣ ಪ್ರಮಾಣದ ನ್ಯಾಯಾಧೀಶರಲ್ಲ. ಅರೆ ನ್ಯಾಯಿಕ ಅಧಿಕಾರಿ. ಆದಾಗ್ಯೂ ತಮ್ಮ ಜವಾಬ್ದಾರಿ ನಿಭಾಯಿಸುತ್ತಾರೆ. ಹೀಗಾಗಿ ತೀರ್ಪು ನೀಡುವ ಮುನ್ನ ವಿಸ್ತೃತ ಅಧ್ಯಯನಕ್ಕೆ ಅವರಿಗೊಂದಿಷ್ಟು ಕಾಲಾವಕಾಶ ನೀಡಿ’ ಎಂದು ಕೋರಿದರು.

ಇದಕ್ಕೆ ನ್ಯಾಯಮೂರ್ತಿ ಚೌಹಾಣ್‌, ‘ಈ ರಾಜಕೀಯ ಹಗ್ಗಜಗ್ಗಾಟ ಏಕೆ’ ಎಂದು ಪ್ರಶ್ನಿಸಿದರು. ಇದಕ್ಕೂ ಮುನ್ನ ಬೆಳಗಿನ ಕಲಾಪದಲ್ಲಿ ಪ್ರಕರಣ ವಿಚಾರಣೆಗೆ ಬಂದಾಗ ಸರ್ಕಾರದ ನಡೆಯನ್ನು ತಮ್ಮ ಮೊನಚು ಮಾತುಗಳಿಂದ ತಿವಿದ ಚೌಹಾಣ್‌, ‘ನಮ್ಮ ರಾಜ್ಯವನ್ನು ರಾಜ್ಯಸಭೆಯಲ್ಲಿ ಪ್ರತಿನಿಧಿಸುವ ವ್ಯಕ್ತಿಯನ್ನು ಶಾಸಕರು ಆಯ್ಕೆ ಮಾಡಬೇಕಿದೆ. ಇದು ಕನ್ನಡಿಗರ ಹಿತಾಸಕ್ತಿಯನ್ನು ಒಳಗೊಂಡ ವಿಚಾರ. ಇಲ್ಲಿಂದ ಆಯ್ಕೆಯಾಗಿ ಹೋಗುವವರು ಕನ್ನಡದ ಘನತೆಯನ್ನು ಎತ್ತಿ ಹಿಡಿಯುತ್ತಾರೆ ಎಂಬುದನ್ನು ಮರೆಯಬೇಡಿ’ ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್‌ ಎ.ಎಸ್. ಪೊನ್ನಣ್ಣ ಅವರಿಗೆ ಕಿವಿಮಾತು ಹೇಳಿದರು.

ಪ್ರತಿವಾದಿ ಇಕ್ಬಾಲ್‌ ಅನ್ಸಾರಿ ಮತ್ತು ಎಸ್‌.ಭೀಮಾನಾಯ್ಕ್‌ ಪರ ಹಾಜರಿದ್ದ ಹಿರಿಯ ವಕೀಲ ಬಿ.ವಿ.ಆಚಾರ್ಯ, ‘ಅರ್ಜಿದಾರರು ಒಂದು ವರ್ಷ ಒಂಬತ್ತು ತಿಂಗಳ ಕಾಲ ಸುಮ್ಮನಿದ್ದು ಈಗ ಇದ್ದಕ್ಕಿದ್ದಂತೆ, ಇದೇ 15ರಂದು ಅರ್ಜಿ ವಿಚಾರಣೆ ಪೂರೈಸಿ ಎಂದು ಸ್ಪೀಕರ್‌ಗೆ ಮನವಿ ಮಾಡಿದ್ದಾರೆ. ಹೀಗಾಗಿ ವಿಚಾರಣೆ ಪೂರೈಸಲಾಗಿದೆ’ ಎಂದರು.

ಇದಕ್ಕೆ ಉದಯ ಹೊಳ್ಳ, ‘ತಾಳಿದವನು ಬಾಳಿಯಾನು ಎಂಬ ಗಾದೆ ಮಾತಿನಂತೆ ಏನಾದರೂ ಒಳ್ಳೆಯದು ಆಗಬಹುದು ಎಂಬ ಆಶಾಭಾವನೆಯಿಂದ ನಾವು ಸುಮ್ಮನಿದ್ದೆವು’ ಎಂದು ಪ್ರತಿ ಉತ್ತರ ನೀಡಿದರು.

ಮತ್ತೊಬ್ಬ ಪ್ರತಿವಾದಿ ಎ.ಬಿ.ಬಂಡಿಸಿದ್ದೇಗೌಡ ಪರ ಹಿರಿಯ ವಕೀಲ ಧ್ಯಾನ್‌ ಚಿನ್ನಪ್ಪ, ‘ಸ್ಪೀಕರ್ ತೀರ್ಪು ಪ್ರಕಟಿಸಲು ಯಥೋಚಿತ ಸಮಯಾವಕಾಶ ನೀಡಬೇಕು’ ಎಂದು ಕೋರಿದರು. ಆದರೆ, ಈ ಮಾತಿಗೆ ನ್ಯಾಯಮೂರ್ತಿಗಳು ಸಮ್ಮತಿ ಸೂಚಿಸಲಿಲ್ಲ.

‘ಪ್ರತಿವಾದಿಗಳೂ ಆದ ಅನರ್ಹಗೊಂಡಿರುವ ಶಾಸಕರಾದ ಬಿ.ಝಡ್‌.ಜಮೀರ್‌ ಅಹಮದ್ ಖಾನ್‌, ಚೆಲುವರಾಯ ಸ್ವಾಮಿ, ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಎಚ್‌.ಸಿ.ಬಾಲಕೃಷ್ಣ, ಆರ್.ಅಖಂಡ ಶ್ರೀನಿವಾಸ ಮೂರ್ತಿ, ಇಕ್ಬಾಲ್‌ ಅನ್ಸಾರಿ ಹಾಗೂ ಎಸ್.ಭೀಮಾನಾಯ್ಕ್‌ 2016ರ ಜೂನ್‌ 11ರಂದು ನಡೆದಿದ್ದ ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ವಿಪ್‌ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದ್ದಾರೆ. ಆದ್ದರಿಂದ ಇವರನ್ನು ಪಕ್ಷಾಂತರ ನಿಷೇಧ ಕಾಯ್ದೆ–1986ರ ಅನ್ವಯ ಅನರ್ಹಗೊಳಿಸಿ’ ಎಂಬುದು ನಿಂಗಯ್ಯ ಹಾಗೂ ಬಾಲಕೃಷ್ಣ ಅವರ ಆರೋಪ.

ಈ ಕುರಿತ ದೂರಿನ ವಿಚಾರಣೆಯನ್ನು ಇದೇ 19ರಂದು ಪೂರ್ಣಗೊಳಿಸಿರುವ ಸ್ಪೀಕರ್ ಕೆ.ಬಿ. ಕೋಳಿವಾಡ ತೀರ್ಪನ್ನು ಕಾಯ್ದಿರಿಸಿದ್ದಾರೆ.

‘ಬೇಕಾದ್ರೆ ರಾತ್ರಿ ಒಂಬತ್ತು ಗಂಟೆತನಕ ಕಾಯ್ತೀನಿ’

‘ಸ್ಪೀಕರ್‌ ಇದೇ 22ರಂದು ತಮ್ಮ ತೀರ್ಪು ಪ್ರಕಟಿಸಲಿ. ಅದನ್ನು ನೋಡಿಕೊಂಡು ಕೋರ್ಟ್‌ ತನ್ನ ಆದೇಶ ಪ್ರಕಟಿಸಲಿದೆ. ಬೇಕಾದರೆ ಇದಕ್ಕಾಗಿ ನಾನು ರಾತ್ರಿ 9 ಗಂಟೆಯವರೆಗೂ ನ್ಯಾಯಪೀಠದಲ್ಲಿ ಕಾಯಲು ಸಿದ್ಧ’ ಎಂದು ಚೌಹಾಣ್‌ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಂ.ಆರ್.ನಾಯಕ್, ‘ಈ ಕುರಿತಂತೆ ನಾನು ಸ್ಪೀಕರ್‌ ಜೊತೆ ಈಗಷ್ಟೇ ಮಾತನಾಡಿ ಬಂದಿದ್ದೇನೆ. ಅವರಿಗೆ ತಮ್ಮ ಜವಾಬ್ದಾರಿಯ ಅರಿವಿದೆ. ಖಂಡಿತಾ ಅಷ್ಟರೊಳಗೆ ತೀರ್ಪು ಪ್ರಕಟಿಸುತ್ತಾರೆ’ ಎಂದು ಭರವಸೆ ನೀಡಿದರು.

* ಕನ್ನಡ ನಾಡಿನಲ್ಲಿರುವ ನಾನೂ ಕನ್ನಡಿಗ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಎನಿಸುತ್ತದೆ.

–ಆರ್.ಎಸ್‌.ಚೌಹಾಣ್, ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.