ADVERTISEMENT

ಸ್ವತಂತ್ರ ಲಿಂಗಾಯತ ಧರ್ಮ: ಪ್ರಧಾನಿ ಬಳಿಗೆ ನಿಯೋಗ

​ಪ್ರಜಾವಾಣಿ ವಾರ್ತೆ
Published 15 ಜೂನ್ 2018, 19:30 IST
Last Updated 15 ಜೂನ್ 2018, 19:30 IST
ಸಿದ್ಧರಾಮ ಸ್ವಾಮೀಜಿ
ಸಿದ್ಧರಾಮ ಸ್ವಾಮೀಜಿ   

ಬೆಳಗಾವಿ: ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಆಗ್ರಹಿಸಿ, ಪ್ರಧಾನಿ ನರೇಂದ್ರ ಮೋದಿ ಅವರ ಬಳಿಗೆ ನಿಯೋಗ ಒಯ್ಯಲಾಗುವುದು ಎಂದು ಇಲ್ಲಿನ ನಾಗನೂರ ರುದ್ರಾಕ್ಷಿ ಮಠದ ಸಿದ್ಧರಾಮ ಸ್ವಾಮೀಜಿ ತಿಳಿಸಿದರು.

‘ಈ ವಿಚಾರದಲ್ಲಿ, ಕೇಂದ್ರ ಸರ್ಕಾರ ಬಹಳ ಎಚ್ಚರದಿಂದ ವರ್ತಿಸಬೇಕು. ನಮ್ಮ ಬೇಡಿಕೆಯನ್ನು ಈಡೇರಿಸದಿದ್ದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ. ಬಿಜೆಪಿಯು ಬಹುಸಂಖ್ಯಾತ ಸಮಾಜದ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.

‘ಲಿಂಗಾಯತ ಚಳವಳಿಯ ದನಿ ಕ್ಷೀಣಿಸಿಲ್ಲ. ಕೇಂದ್ರಕ್ಕೆ ಸಮಯ ನೀಡಿದ್ದೇವೆ. ಈ ನಡುವೆ, ರಾಜ್ಯ ಸರ್ಕಾರ ಕಳುಹಿಸಿರುವ ಶಿಫಾರಸು ಕಡತ ವಾಪಸ್ ಬಂದಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಅಂತಹ ಬೆಳವಣಿಗೆ ನಡೆದಿಲ್ಲ. ಶಿಫಾರಸು, ಕೇಂದ್ರದ ಅಂಗಳದಲ್ಲಿಯೇ ಇದೆ. ನಮ್ಮ ದನಿ ಅಡಗಿಸುವ ದುರುದ್ದೇಶದಿಂದ ಹಿಂದುತ್ವವಾದಿಗಳು ಹಾಗೂ ವೀರಶೈವವಾದಿಗಳ ಕೈವಾಡದಿಂದಾಗಿ ಅಪಪ್ರಚಾರ ನಡೆಯುತ್ತಿದೆ. ಇದರಿಂದ ನಮ್ಮ ಹೋರಾಟ ಮತ್ತಷ್ಟು ಬಲಗೊಳ್ಳಲಿದೆ’ ಎಂದು ಹೇಳಿದರು.

ADVERTISEMENT

ನ್ಯಾಯಾಲಯದ ಮೊರೆ: ‘ಪ್ರತ್ಯೇಕ ಧರ್ಮಕ್ಕಾಗಿನ ಶಿಫಾರಸನ್ನು ವಾಪಸ್ ಮಾಡಿದಲ್ಲಿ ಅಥವಾ ತಿರಸ್ಕರಿಸಿದಲ್ಲಿ ನಮಗೆ ಬಹಳವೇ ಅನುಕೂಲವಾಗುತ್ತದೆ. ಸುಪ್ರೀಂ ಕೋರ್ಟ್‌ ಮೊರೆ ಹೋಗುತ್ತೇವೆ. ಹೀಗಾಗಿ ತಿರಸ್ಕರಿಸುವ ಧೈರ್ಯವನ್ನು ಕೇಂದ್ರ ಮಾಡುವುದಿಲ್ಲ ಎನ್ನುವ ವಿಶ್ವಾಸವಿದೆ’ ಎಂದು ಹೇಳಿದರು.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕ ಹಾಗೂ ಲಿಂಗಾಯತ ಸಮಾಜವನ್ನು ನಿರ್ಲಕ್ಷಿಸಬಾರದು. ಶಾಸಕರಾದ ಎಂ.ಬಿ.ಪಾಟೀಲ, ಬಸವರಾಜ ಹೊರಟ್ಟಿ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.