ADVERTISEMENT

ಹಣ ಕಂಡರೆ ಈ ಮಹಿಳೆಗೆ ಭಯ!

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2016, 19:47 IST
Last Updated 10 ಆಗಸ್ಟ್ 2016, 19:47 IST
ಚಿತ್ರದುರ್ಗ ತಾಲ್ಲೂಕಿನ ತುರುವನೂರು ಹೋಬಳಿಯ ಕಡಬನಕಟ್ಟೆ ಗ್ರಾಮದ ಸುವರ್ಣಮ್ಮ ಮುಕುಂದಪ್ಪ ಎಂಬ ಮಹಿಳೆಯು ಹಣ ನೋಡಿ ಗಾಬರಿಗೊಂಡಿರುವುದು
ಚಿತ್ರದುರ್ಗ ತಾಲ್ಲೂಕಿನ ತುರುವನೂರು ಹೋಬಳಿಯ ಕಡಬನಕಟ್ಟೆ ಗ್ರಾಮದ ಸುವರ್ಣಮ್ಮ ಮುಕುಂದಪ್ಪ ಎಂಬ ಮಹಿಳೆಯು ಹಣ ನೋಡಿ ಗಾಬರಿಗೊಂಡಿರುವುದು   

ತುರುವನೂರು: ಧನಮೋಹಿಗಳಿಗೆ ಅಪವಾದ ಎಂಬಂತೆ ಇಲ್ಲೊಬ್ಬ ಮಹಿಳೆ ಹಣ ನೋಡಿದರೆ ಸಾಕು, ಗಾಬರಿಗೊಂಡು ವಿಚಿತ್ರವಾಗಿ ವರ್ತಿಸುತ್ತಾರೆ.
ಚಿತ್ರದುರ್ಗ ತಾಲ್ಲೂಕಿನ ತುರುವನೂರು ಹೋಬಳಿಯ ಕಡಬನಕಟ್ಟೆ ಗ್ರಾಮದ ಸುಮಾರು 30 ವರ್ಷದ ಸುವರ್ಣಮ್ಮ ಮುಕುಂದಪ್ಪ ಎಂಬ ಮಹಿಳೆ ಕಳೆದ ಮೂರು ವರ್ಷಗಳಿಂದ ತಾನು ದುಡಿದ ಹಣವನ್ನು ಕೂಡ ಮುಟ್ಟಲು ಹಿಂಜರಿಯುತ್ತಾರೆ, ಭಯದಿಂದ ಕಿರುಚಾಡುತ್ತಾರೆ.

ಪದೇ ಪದೇ ಜ್ವರ ಬರುತ್ತಿತ್ತು ಎಂದು ಧಾರ್ಮಿಕ ಕ್ಷೇತ್ರವೊಂದಕ್ಕೆ ಕರೆದುಕೊಂಡು ಹೋಗಿ ಬಂದಾಗಿನಿಂದ ಹಣ ತೋರಿಸಿದರೆ ಈ ರೀತಿ ವಿಚಿತ್ರ ವರ್ತಿಸುತ್ತಿದ್ದಾರೆ. ದುಡ್ಡನ್ನು ಕಂಡರೆ ಜೋರಾಗಿ ಚೀರುತ್ತಾ ತಿಳಿಯದ ಭಾಷೆಯಲ್ಲಿ ಮಾತನಾಡಲು ಆರಂಭಿಸುತ್ತಾರೆ. ಇದನ್ನು ಕಂಡರೆ ಅಕ್ಕಪಕ್ಕದಲ್ಲಿ ನಿಂತವರು ಭಯಭೀತರಾಗುತ್ತಾರೆ. ಇದಕ್ಕೆಲ್ಲಾ ಮಾಟ ಮಂತ್ರ ಕಾರಣ ಎನ್ನುವುದು ಸುವರ್ಣಮ್ಮ ಪತಿ ಮುರುಗೇಶಿ ನಂಬಿಕೆ.

ಅನಾರೋಗ್ಯದಿಂದ ಈ ರೀತಿ ಮಾಡುತ್ತಿರಬಹುದು ಎಂದು ಭಾವಿಸಿ, ಸುವರ್ಣಮ್ಮ ಅವರನ್ನು ವೈದ್ಯರ ಬಳಿಗೆ ಕೂಡ ಕರೆದುಕೊಂಡು ಹೋಗಿ ಸೂಕ್ತ ಚಿಕಿತ್ಸೆ ಕೊಡಿಸಲಾಗಿದೆ. ವೈದ್ಯರು, ಯಾವುದೇ ಕಾಯಿಲೆಯಿಲ್ಲ ಎಂದು ಹೇಳಿ, ಸಮಯಕ್ಕೆ ಸರಿಯಾಗಿ ಊಟ ಮಾಡಲು ಸಲಹೆ ನೀಡಿದರು. ಆದರೂ ಸಮಸ್ಯೆ ಬಗೆಹರಿದಿಲ್ಲ ಎನ್ನುತ್ತಾರೆ ಕುಟುಂಬದವರು.

ಹಣ ಕಾಣದಿರುವಾಗ ಎಲ್ಲರಂತೆ ಸಾಮಾನ್ಯವಾಗಿ ಹೊಲ, ಮನೆ ಕೆಲಸದಲ್ಲಿ ನಿರತರಾಗುತ್ತಾರೆ. ಹಲವು ಬಾರಿ ಆಸ್ಪತ್ರೆಗೆ ತೋರಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮದ ಇಂದ್ರಮ್ಮ. ನಾಲ್ಕು ವರ್ಷದ ಹಿಂದೆ ಈ ಮಹಿಳೆ ಸ್ವ ಸಹಾಯ ಸಂಘದ ಪ್ರತಿನಿಧಿಯಾಗಿ ಎಲ್ಲರೊಡನೆ ಉತ್ತಮವಾಗಿ ಬೆರೆಯುತ್ತಿದ್ದರು. ಅಂತ್ಯಾಕ್ಷರಿ, ಹಾಡು, ಪದ ಹಾಡುವ ಮೂಲಕ ಸಂತೋಷದಿಂದ ಇರುತ್ತಿದ್ದರು. ಈ ಘಟನೆ ನಡೆದ ನಂತರ ಸಂಘಕ್ಕೆ ಬರುತ್ತಿಲ್ಲ ಎಂದು ಗ್ರಾಮದ ಇತರ ಕೆಲವು ಮಹಿಳೆಯರು ಬೇಸರದಿಂದ ಹೇಳಿದರು.

ಈ ಮಹಿಳೆಯ ಪರಿಸ್ಥಿತಿ ಕಂಡು ಮನೆಯವರಿಗಲ್ಲದೆ, ನೆರೆಹೊರೆಯವರು ಕೂಡ ಮರುಕ ಪಡುವಂತ ಸ್ಥಿತಿ ನಿರ್ಮಾಣವಾಗಿದೆ.  ಮನೋರೋಗ ತಜ್ಞರಿಂದಲಾದರೂ ಗುಣಮುಖ ಆಗಬಹುದೇ ಎಂಬುದನ್ನು ಕಾದು ನೋಡಬೇಕಾಗಿದೆ ಎಂಬುದಾಗಿ ಹೇಳುತ್ತಾರೆ ಗ್ರಾಮಸ್ಥರು.

ಇದು ಮಾನಸಿಕ ಕಾಯಿಲೆ. ಚಿಕ್ಕಂದಿನಲ್ಲಿ ಹಣದ ವಿಚಾರವಾಗಿ ಏಟು ತಿಂದು ಆಘಾತಕ್ಕೊಳಗಾಗಿದ್ದವರು ಹೀಗೆ ವರ್ತಿಸುತ್ತಾರೆ. ಇದು ಒಂದು ರೀತಿಯ ಡಿಸೋಸಿಯೇಟಿವ್ ಡಿಸ್‌ಆರ್ಡರ್‌. ಗುಣಪಡಿಸಬಹುದಾದ ಕಾಯಿಲೆ.
ಡಾ.ಆರ್.ಎಸ್.ದೀಪಕ್, ಮನೋವೈದ್ಯ, ಚಿತ್ರದುರ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT