ADVERTISEMENT

ಹಣ ಮಾಡಲು ಹಬ್ಬದ ಸಂಭ್ರಮವೇ ಬಂಡವಾಳ!

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 19:59 IST
Last Updated 4 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ಗಣೇಶನ ಹಬ್ಬ ಬಂದಿದೆ. ಊರಿಗೆ ಹೋಗಿ ಮನೆಯವರ ಜೊತೆ ಆನಂದದಿಂದ ಹಬ್ಬ ಆಚರಿಸೋಣ ಎಂದುಕೊಂಡವರಿಗೆ ಬಸ್ ದರ ದುಪ್ಪಟ್ಟಾಗಿರುವುದು ಚಿಂತೆಗೀಡು ಮಾಡಿದೆ.

ಹಬ್ಬಕ್ಕೆ ಊರಿಗೆ ಹೋಗಬೇಕು ಎನ್ನುವ ಜನರ ಭಾವನೆಯನ್ನೇ ಬಂಡವಾಳ ಮಾಡಿಕೊಳ್ಳಲು ಮುಂದಾಗಿರುವ ಖಾಸಗಿ ಬಸ್ ಕಂಪೆನಿಗಳು, ಪ್ರಯಾಣ ದರವನ್ನು ಏಕಾಏಕಿ ಹೆಚ್ಚು ಮಾಡಿವೆ. ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಕೂಡ 1200 ಹೆಚ್ಚುವರಿ ಬಸ್ ಹೆಚ್ಚುವರಿಯಾಗಿ ಬಿಟ್ಟಿದ್ದು, ಹೆಚ್ಚುವರಿ ಬಸ್‌ಗಳ ಪ್ರಯಾಣ ದರವನ್ನು ಶೇಕಡ 20ರಷ್ಟು ಹೆಚ್ಚಳ ಮಾಡಿದೆ.

ದೀಪಾವಳಿ, ದಸರಾ, ಗಣೇಶ ಚತುರ್ಥಿ ಸೇರಿದಂತೆ ಪ್ರಮುಖ ಹಬ್ಬಗಳು ಬಂದಾಗ, ಬೆಂಗಳೂರಿನಲ್ಲಿ ನೆಲೆಸಿರುವ ಬೇರೆ ಬೇರೆ ಊರುಗಳ ಜನ, ತಮ್ಮ ಊರಿಗೆ ತೆರಳಿ ಹಬ್ಬ ಆಚರಿಸುವ ಸಂಭ್ರಮದಲ್ಲಿರುತ್ತಾರೆ. ಈ ಸಂದರ್ಭಗಳಲ್ಲಿ ಬೆಂಗಳೂರಿನಿಂದ ಹೊರ ಊರುಗಳಿಗೆ ತೆರಳುವ ಜನರ ಸಂಖ್ಯೆ ಕೂಡ ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. ಖಾಸಗಿ ಬಸ್ ಕಂಪೆನಿಗಳು, ಈ ಸಂದರ್ಭದಲ್ಲಿ ಹೆಚ್ಚಿನ ಹಣ ಸುಲಿಯುವುದನ್ನೇ `ಸಂಪ್ರದಾಯ' ಮಾಡಿಕೊಂಡಿವೆ.

ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ತೆರಳಲು `ಪ್ರಸಿದ್ಧ' ಖಾಸಗಿ ಕಂಪೆನಿಗಳ ಸುಖಾಸೀನ ಬಸ್‌ನ ಟಿಕೆಟ್ ದರ 430 ರೂಪಾಯಿಗಳಿಂದ 550 ರೂಪಾಯಿ. ಮಲ್ಟಿ ಆಕ್ಸೆಲ್ ವೋಲ್ವೊ ಬಸ್ ದರ 650 ರೂಪಾಯಿ. ಆದರೆ ಪ್ರಮುಖ ಹಬ್ಬಗಳು ಎದುರಾದ ಸಂದರ್ಭದಲ್ಲಿ ಅದೇ ಸುಖಾಸೀನ ಬಸ್ಸಿನ ಟಿಕೆಟ್ ದರ 850 ರೂಪಾಯಿಯಿಂದ ಆರಂಭಿಸಿ 950 ರೂಪಾಯಿವರೆಗೆ ಇರುತ್ತದೆ! ಮಲ್ಟಿ ಆಕ್ಸೆಲ್ ವೋಲ್ವೊ ದರ 1100 ರೂಪಾಯಿ!!

ದರ ಹೆಚ್ಚಳ ಬೆಂಗಳೂರಿನಿಂದ ಮಂಗಳೂರಿಗೆ ಮಾತ್ರ ಸೀಮಿತವಲ್ಲ. ಬೆಂಗಳೂರಿನಿಂದ ಗುಲ್ಬರ್ಗ, ಕಾರವಾರ, ಬಳ್ಳಾರಿ... ಹೀಗೆ ಪ್ರಮುಖ ಊರುಗಳಿಗೆ ಸಾಗುವ ಎಲ್ಲ ಖಾಸಗಿ ಬಸ್ಸುಗಳ ದರವೂ ತೀವ್ರ ಹೆಚ್ಚಳ ಆಗುತ್ತದೆ. ಈ ರೀತಿಯ ಹೆಚ್ಚಳಕ್ಕೆ ಕಾರಣ ಏನು ಬೆಂಗಳೂರಿನ ಖಾಸಗಿ ಬಸ್ ಏಜೆಂಟ್ ಒಬ್ಬರನ್ನು ಪ್ರಶ್ನಿಸಿದಾಗ, `ಹಬ್ಬದ ಸಂದರ್ಭದಲ್ಲಿ ಟಿಕೆಟ್‌ಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಹಾಗಾಗಿ ಕಂಪೆನಿಗಳು ಟಿಕೆಟ್ ದರ ಹೆಚ್ಚಿಸುತ್ತವೆ. ಇದು ಕಂಪೆನಿಗಳ ಆಡಳಿತಾತ್ಮಕ ನಿರ್ಧಾರ' ಎಂದು ಉತ್ತರ ನೀಡಿದರು.

ನಿಯಂತ್ರಣಕ್ಕೆ ವ್ಯವಸ್ಥೆ ಇಲ್ಲ:  ಹಬ್ಬದ ದಿನಗಳೂ ಸೇರಿದಂತೆ ಯಾವುದೇ ಸಂದರ್ಭದಲ್ಲಿ ಖಾಸಗಿ ಬಸ್‌ಗಳ ದರ ನಿಯಂತ್ರಿಸುವ ವ್ಯವಸ್ಥೆ ರಾಜ್ಯದಲ್ಲಿ ಇಲ್ಲ. ಖಾಸಗಿ ಬಸ್ ಕಂಪೆನಿಗಳು ವಿವಿಧ ಮಾರ್ಗಗಳಲ್ಲಿ ಬಸ್ ಓಡಿಸಲು ಕೇಂದ್ರ ಸರ್ಕಾರ ರೂಪಿಸಿರುವ ಕಾಯ್ದೆಯ ಅನ್ವಯ ಪರವಾನಗಿ ಪಡೆದುಕೊಂಡಿವೆ. ಹಾಗಾಗಿ ದರ ನಿಯಂತ್ರಣ ಕುರಿತು ಕಾನೂನಿನ ಪ್ರಕಾರ ರಾಜ್ಯ ಸರ್ಕಾರ ಏನೂ ಮಾಡಲಾಗದು ಎಂದು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ. ರವಿಕುಮಾರ್ ಅವರು `ಪ್ರಜಾವಾಣಿ'ಗೆ ಪ್ರತಿಕ್ರಿಯೆ ನೀಡಿದರು.

ಸಾಮಾನ್ಯನ ಸಂಕಟ: ಹಬ್ಬ ಬಂದಾಗ ಊರಿಗೆ ತೆರಳಬೇಕು ಎಂಬ ಬಯಕೆ ಮೂಡುವುದು ಸಹಜ. ಹಬ್ಬದ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ತನ್ನ ಬಸ್ ಪ್ರಯಾಣ ದರವನ್ನು ತೀರಾ ಹೆಚ್ಚಳ ಮಾಡುವುದಿಲ್ಲ ಎಂಬುದು ನಿಜ. ಆದರೆ ಎಲ್ಲರಿಗೂ ಕೆಎಸ್‌ಆರ್‌ಟಿಸಿ ಟಿಕೆಟ್ ದೊರೆಯುತ್ತದೆ ಎನ್ನಲಾಗದು. ಹಾಗಾಗಿ ಖಾಸಗಿ ಬಸ್‌ಗಳು ಅನಿವಾರ್ಯ. ಖಾಸಗಿ ಬಸ್‌ಗಳಿಂದ ಆಗುತ್ತಿರುವ ಸುಲಿಗೆ ತಪ್ಪಿಸಲು ನಿಯಂತ್ರಣ ಪ್ರಾಧಿಕಾರವೊಂದು ಅಸ್ತಿತ್ವಕ್ಕೆ ಬರಬೇಕು ಎಂಬ ಅಭಿಪ್ರಾಯ ಬೆಂಗಳೂರಿನ ರಾಜಾಜಿನಗರ ನಿವಾಸಿ, ವಿಕ್ರಮ ದೇವಾಡಿಗ ಅವರದ್ದು.

`ನಾವು ಹಬ್ಬದ ಸಂದರ್ಭದಲ್ಲಿ ಹೆಚ್ಚುವರಿ ಬಸ್ ಓಡಿಸುವ ಪದ್ಧತಿಯನ್ನು 1994ರಿಂದಲೂ ಅನುಸರಿಸಿಕೊಂಡು ಬಂದಿದ್ದೇವೆ. ಮಾಮೂಲಾಗಿ ಸಂಚಾರ ನಡೆಸುವ ಯಾವುದೇ ಮಾದರಿಯ ಬಸ್ ಪ್ರಯಾಣ ದರವನ್ನು ನಾವು ಹಬ್ಬದ ನೆವದಲ್ಲಿ ಹೆಚ್ಚಿಸುವುದಿಲ್ಲ. ಆದರೆ ಹೆಚ್ಚುವರಿಯಾಗಿ ಓಡಿಸುವ ಬಸ್‌ಗಳ ಪ್ರಯಾಣ ದರದಲ್ಲಿ ಮಾತ್ರ ಏರಿಕೆ ಆಗುತ್ತದೆ' ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.