ADVERTISEMENT

ಹತ್ತು ಶುಶ್ರೂಷಕರು ಅಸ್ವಸ್ಥ

ಸೇವೆ ಕಾಯಂಗೆ ಒತ್ತಾಯಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2014, 19:30 IST
Last Updated 19 ಫೆಬ್ರುವರಿ 2014, 19:30 IST
ಸೇವೆ ಕಾಯಂಗೊಳಿಸುವಂತೆ ಒತ್ತಾಯಿಸಿ ರಾಜ್ಯ ಗುತ್ತಿಗೆ ಆಧಾರಿತ ಶುಶ್ರೂಷಕರ ಸಂಘವು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಬುಧವಾರ ಅಸ್ವಸ್ಥಗೊಂಡ ಶುಶ್ರೂಷಕಿಯನ್ನು ಇತರೆ ಧರಣಿನಿರತರು ಉಪಚರಿಸಿದರು	– ಕೆಪಿಎನ್‌ ಚಿತ್ರ.
ಸೇವೆ ಕಾಯಂಗೊಳಿಸುವಂತೆ ಒತ್ತಾಯಿಸಿ ರಾಜ್ಯ ಗುತ್ತಿಗೆ ಆಧಾರಿತ ಶುಶ್ರೂಷಕರ ಸಂಘವು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಬುಧವಾರ ಅಸ್ವಸ್ಥಗೊಂಡ ಶುಶ್ರೂಷಕಿಯನ್ನು ಇತರೆ ಧರಣಿನಿರತರು ಉಪಚರಿಸಿದರು – ಕೆಪಿಎನ್‌ ಚಿತ್ರ.   

ಬೆಂಗಳೂರು: ಸೇವೆ ಕಾಯಂಗೊಳಿಸು­ವಂತೆ ಒತ್ತಾಯಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ಗುತ್ತಿಗೆ ಆಧಾ­ರಿತ ಶುಶ್ರೂಷಕರಲ್ಲಿ 10 ಮಂದಿ ಬುಧವಾರ ಅಸ್ವಸ್ಥಗೊಂಡಿದ್ದಾರೆ.

8 ದಿನದಿಂದ ಧರಣಿ ಮಾಡುತ್ತಿ­ರುವ ಶುಶ್ರೂಷಕರಲ್ಲಿ ಸಂಧ್ಯಾ, ಪೂರ್ಣಿಮಾ, ಅನ್ನಪೂರ್ಣ, ರುಕ್ಮಿಣಿ, ಮಂಜುಳಾ, ಅನುರಾಧ, ರೀನಾ, ರೇಖಾ, ಸೀತಾಬಾಯಿ ಮತ್ತು ಎಮಿಲ್ಡ್‌ ಎಂಬುವರು ಅಸ್ವಸ್ಥಗೊಂಡಿ­ದ್ದಾರೆ. ಅವರನ್ನು ಕೆ.ಸಿ.ಜನರಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಸುಮಾರು ನಾಲ್ಕು ಸಾವಿರ ಶುಶ್ರೂಷ­ಕರು 13 ವರ್ಷಗಳಿಂದ ಗುತ್ತಿಗೆ ಆಧಾರ­ದಲ್ಲಿ ಕಾರ್ಯ ನಿರ್ವಹಿಸುತ್ತಿ­ದ್ದಾರೆ. ಸೇವೆ ಕಾಯಂಗೊಳಿಸುವಂತೆ ಹಲವು ಬಾರಿ ಪ್ರತಿಭಟನೆ ಮಾಡಿ­ದ್ದೇವೆ. ಆದರೆ, ಯಾವುದೇ ಸರ್ಕಾರ ಸೇವೆ ಕಾಯಂಗೊಳಿಸಲು ಕ್ರಮ ಕೈ­ಗೊಂಡಿಲ್ಲ’ ಎಂದು ರಾಜ್ಯ ಗುತ್ತಿಗೆ ಆಧಾರಿತ ಶುಶ್ರೂಷಕರ ಸಂಘದ ಖಜಾಂಚಿ ಎಚ್‌.ಸಿ.ನಾಗರಾಜ್‌ ದೂರಿದರು.

‘2012ರ ಫೆಬ್ರುವರಿಯಲ್ಲಿ ಪ್ರತಿ­ಭಟನೆ ಮಾಡಿದ್ದಾಗ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸೇವೆ ಕಾಯಂ­ಗೊಳಿಸುವು­ದಾಗಿ ನೀಡಿದ್ದ ಭರವಸೆ ಈ­ವರೆಗೂ ಭರವಸೆ ಈಡೇ­ರಿಸಿಲ್ಲ’ ಎಂದರು.

ಸರ್ಕಾರ ಮಾಸಿಕ ₨ 8 ಸಾವಿರ ವೇತನ ನೀಡುತ್ತಿದೆ. ವೇತನ ಕಡಿಮೆ ಇರುವುದರಿಂದ ಜೀವನ ನಿರ್ವಹಣೆಗೆ ಕಷ್ಟವಾಗುತ್ತಿದೆ. ಮತ್ತೊಂದೆಡೆ ಸೇವಾ ಭದ್ರತೆಯು ಇಲ್ಲ ಎಂದು ಧರಣಿ­ನಿರತರು ಅಳಲು ತೋಡಿಕೊಂಡರು.

ಗುತ್ತಿಗೆ ವೈದ್ಯರು ಮತ್ತು ದಂತ ವೈದ್ಯ­ರನ್ನು ಕಾಯಂ ಮಾಡಿರುವಂತೆ ಶುಶ್ರೂಷಕರನ್ನು ಕಾಯಂ ಮಾಡಿ­ಕೊಳ್ಳಬೇಕು. ಇಲಾಖೆಯಲ್ಲಿ ಖಾಲಿ ಇರುವ 2 ಸಾವಿರ ಶುಶ್ರೂಷಕರ ಹುದ್ದೆ­ಗಳಿಗೆ ಹೊಸ ನೇಮಕಾತಿ  ಬದಲಿಗೆ ಗುತ್ತಿಗೆ ಸಿಬ್ಬಂದಿಯನ್ನೇ ಆ ಹುದ್ದೆಗಳಿಗೆ ನೇಮಿಸಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.