ADVERTISEMENT

ಹಫೀಜ್ ಪರ ಪಾಕಿಸ್ತಾನ ನಿಲುವು: ಸಚಿವ ಕೃಷ್ಣ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2012, 19:30 IST
Last Updated 6 ಏಪ್ರಿಲ್ 2012, 19:30 IST

ಬೆಂಗಳೂರು: 26/11ರ ಮುಂಬೈ ಮೇಲಿನ ದಾಳಿಗೆ ಸಂಬಂಧಿಸಿದಂತೆ ಲಷ್ಕರ್ ಎ ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್‌ನನ್ನು ಪಾಕಿಸ್ತಾನ ಸರ್ಕಾರ ಆರೋಪ ಮುಕ್ತಗೊಳಿಸಲು ಸಾಧ್ಯವಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ.ಕೃಷ್ಣ ಹೇಳಿದ್ದಾರೆ.

ಮುಂಬೈ ಮೇಲಿನ ದಾಳಿಯಲ್ಲಿ ಹಫೀಜ್ ಕೈವಾಡ ಸಾಬೀತುಪಡಿಸಬಲ್ಲ ಬಲವಾದ ಸಾಕ್ಷ್ಯಗಳು ದೊರೆತಿಲ್ಲ ಎಂಬ ಪಾಕಿಸ್ತಾನ ಸರ್ಕಾರದ ಹೇಳಿಕೆಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದ ಅವರು, `ನಮ್ಮ ಗೃಹ ಸಚಿವರು ಪಾಕಿಸ್ತಾನ ಸರ್ಕಾರಕ್ಕೆ ನೀಡಿರುವ ದಾಖಲೆಗಳಲ್ಲಿ ಎಲ್ಲ ಸಾಕ್ಷ್ಯಾಧಾರಗಳೂ ಇವೆ. ಮುಂಬೈ ಮೇಲಿನ ದಾಳಿಯಲ್ಲಿ ಯೋಜನೆಯಿಂದ ಕಾರ್ಯಾಚರಣೆವರೆಗೂ ಹಫೀಜ್ ಸಯೀದ್ ಪಾತ್ರ ಇತ್ತು ಎಂಬುದಕ್ಕೆ ಅದರಲ್ಲಿ ಸಾಕ್ಷ್ಯಗಳಿವೆ~ ಎಂದರು.

ಯಾವುದೇ ಹೇಳಿಕೆಗಳಿಂದ ಹಫೀಜ್ ಸಯೀದ್‌ನನ್ನು ಆರೋಪಮುಕ್ತಗೊಳಿಸಲು ಸಾಧ್ಯವಿಲ್ಲ. ಘಟನೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆದು, ಹೊಣೆಗಾರಿಕೆ ನಿಗದಿ ಮಾಡಬೇಕು. ಈ ಬಗ್ಗೆ ಸರಿಯಾದ ತನಿಖೆ ನಡೆಸುವ ಬಗ್ಗೆ ಪಾಕಿಸ್ತಾನ ಸರ್ಕಾರ ಯೋಚಿಸದಿರುವುದು ದುರದೃಷ್ಟಕರ ಸಂಗತಿ ಎಂದು ಕೃಷ್ಣ ಹೇಳಿದರು.

ಹಫೀಜ್ ಸಯೀದ್ ವಿಷಯ ಪಾಕ್ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಪ್ರಧಾನಿ ಡಾ.ಮನಮೋಹನ್ ಸಿಂಗ್ ಭೇಟಿ ಮೇಲೆ ಪರಿಣಾಮ ಬೀರಲಿದೆಯೇ ಎಂಬ ಪ್ರಶ್ನೆಗೆ, `ಎಲ್ಲ ದ್ವಿಪಕ್ಷೀಯ ವಿಷಯಗಳೂ ಮಾತುಕತೆ ವೇಳೆ ಚರ್ಚೆಗೆ ಬರುವ ಸಾಧ್ಯತೆ ಇದೆ~ ಎಂದು ಉತ್ತರಿಸಿದರು.

`ಹಸ್ತಕ್ಷೇಪ ಸಲ್ಲ~: ದಕ್ಷಿಣ ಚೀನಾ ಸಮುದ್ರದಲ್ಲಿ ಭಾರತದ ತೈಲ ಉತ್ಪಾದನಾ ಯೋಜನೆ ಕುರಿತು ಚೀನಾದ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ಕೃಷ್ಣ, `ದಕ್ಷಿಣ ಚೀನಾ ಸಮುದ್ರ ಜಗತ್ತಿನ ಆಸ್ತಿ. ಅದರ ಮೇಲೆ ರಾಷ್ಟ್ರಗಳ ಹಸ್ತಕ್ಷೇಪ ಸಲ್ಲದು~ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

`ದಕ್ಷಿಣ ಚೀನಾ ಸಮುದ್ರ ದಂಡೆಯಲ್ಲಿರುವ ರಾಷ್ಟ್ರಗಳ ವ್ಯಾಪಾರ ವಹಿವಾಟು ವೃದ್ಧಿಗೆ ಈ ಪ್ರದೇಶ ಬಳಕೆಯಾಗಬೇಕು. ಈ ಪ್ರಸ್ತಾವವನ್ನು  `ಆಸಿಯಾನ್~ ಒಕ್ಕೂಟದ ಸದಸ್ಯ ರಾಷ್ಟ್ರಗಳು ಒಪ್ಪಿಕೊಂಡಿವೆ.

`ಆಸಿಯಾನ್~ ಜೊತೆಗಿನ ಮಾತುಕತೆ ವೇಳೆ ಚೀನಾ ಕೂಡ ಸಮ್ಮತಿಸಿದೆ. ಈ ದಿಸೆಯಲ್ಲಿ ಭಾರತದ ನಿಲುವು ಸರಿಯಾಗಿದೆ~ ಎಂದರು.

ದಕ್ಷಿಣ ಚೀನಾ ಸಮುದ್ರದ ವಿಷಯ ಭಾರತ ಮತ್ತು ಚೀನಾ ನಡುವಿನ ಸಂಬಂಧದ ಮೇಲೆ ದುಷ್ಪರಿಣಾಮ ಬೀರಿದೆಯೇ ಎಂದು ಪ್ರಶ್ನಿಸಿದಾಗ, `ಆ ರೀತಿಯ ಯಾವುದೇ ಬೆಳವಣಿಗೆಯೂ ನಡೆದಿಲ್ಲ. ಇತ್ತೀಚಿಗೆ ನಡೆದ `ಬ್ರಿಕ್ಸ್~ ಶೃಂಗಸಭೆಯ ವೇಳೆ ಚೀನಾ ಅಧ್ಯಕ್ಷ ಹು.ಜಿಂಟಾವೊ ಅವರು ದೆಹಲಿಯಲ್ಲಿದ್ದರು. ಅವರೊಂದಿಗೆ ಸೌಹಾರ್ದಯುತ ಮಾತುಕತೆ ನಡೆದಿದೆ~ ಎಂದು ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT