ADVERTISEMENT

ಹಸಿದವರು–ಹಳಸಿದವರ ನೇತೃತ್ವದ ಸಮ್ಮಿಶ್ರ ಸರ್ಕಾರ ಶೀಘ್ರ ಪತನ: ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2018, 11:03 IST
Last Updated 3 ಜೂನ್ 2018, 11:03 IST
ಹಸಿದವರು–ಹಳಸಿದವರ ನೇತೃತ್ವದ ಸಮ್ಮಿಶ್ರ ಸರ್ಕಾರ ಶೀಘ್ರ ಪತನ: ಸಿ.ಟಿ.ರವಿ
ಹಸಿದವರು–ಹಳಸಿದವರ ನೇತೃತ್ವದ ಸಮ್ಮಿಶ್ರ ಸರ್ಕಾರ ಶೀಘ್ರ ಪತನ: ಸಿ.ಟಿ.ರವಿ   

ಕಲಬುರ್ಗಿ: ‘ಹಸಿದವರು ಮತ್ತು ಹಳಸಿದವರು ಸೇರಿಕೊಂಡು ರಚಿಸಿಕೊಂಡಿರುವ ಕಾಂಗ್ರೆಸ್‌–ಜೆಡಿಎಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರ ಪೂರ್ಣಪ್ರಮಾಣದ ಆಡಳಿತ ನಡೆಸದೆ, ಶೀಘ್ರ ಪತನವಾಗಲಿದೆ’ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

‘ಅಧಿಕಾರಕ್ಕಾಗಿ ಹಸಿದಿದ್ದ ಕಾಂಗ್ರೆಸ್‌ ಮತ್ತು ಹಳಸಿದಂತೆ ಇರುವ ಜೆಡಿಎಸ್‌ ಇಬ್ಬರದ್ದೂ ಲವ್‌ ಮ್ಯಾರೇಜ್‌ ಅಥವಾ ಅರೇಂಜ್ಡ್ ಮ್ಯಾರೇಜು ಕೂಡ ಅಲ್ಲ. ಅವರಿಬ್ಬರದ್ದು ಲಿವ್‌–ಇನ್‌ ರಿಲೇಶನಶಿಪ್‌ ರೀತಿಯ ಸಂಬಂಧ’ ಎಂದು ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.  

‘ಪೂರ್ಣಪ್ರಮಾಣದ ಸಚಿವ ಸಂಪುಟ ರಚನೆಯಾಗುವ ಮುನ್ನವೇ ಎರಡೂ ಪಕ್ಷಗಳ ನಾಯಕರಲ್ಲಿ ಮತ್ತು ಶಾಸಕರಲ್ಲಿ ಅಸಮಾಧಾನ ಮೂಡಿದೆ. 5 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ಆಡಳಿತ, ಖಾತೆ ಹಂಚಿಕೆ ವಿಷಯಗಳು ಈಗಾಗಲೇ ಅಪಸ್ವರಕ್ಕೆ ಕಾರಣವಾಗಿವೆ’ ಎಂದು ಅವರು ತಿಳಿಸಿದರು.

ADVERTISEMENT

‘ಮಲ್ಲಿಕಾರ್ಜುನ ಖರ್ಗೆಯವರ ಆಕ್ರೋಶ, ಡಾ. ಜಿ.ಪರಮೇಶ್ವರ್ ಅವರ ನೋವು, ಡಿ.ಕೆ.ಶಿವಕುಮಾರ ಅವರ ಸಿಟ್ಟು ಮತ್ತು ಆರ್‌.ವಿ.ದೇಶಪಾಂಡೆಯವರ ಹತಾಶೆಯೇ ಸಮ್ಮಿಶ್ರ ಸರ್ಕಾರಕ್ಕೆ ಮುಳುವಾಗಲಿದೆ’ ಎಂದರು.

‘ಒಂದು ವೇಳೆ ಸಮ್ಮಿಶ್ರ ಸರ್ಕಾರ ಪತನವಾದರೂ ನಾವು ಕಾಂಗ್ರೆಸ್‌ ಅಥವಾ ಜೆಡಿಎಸ್‌ ಜೊತೆ ಕೈ ಜೋಡಿಸುವುದಿಲ್ಲ. ನೇರವಾಗಿ ಜನರ ಎದುರು ಹೋಗುತ್ತೇವೆ. ಜನರ ತೀರ್ಮಾನದಂತೆ ಮುನ್ನಡೆಯುತ್ತೇವೆ’ ಎಂದು ತಿಳಿಸಿದರು.

‘ಈಶಾನ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಬಿ.ಶ್ರೀನಿವಾಸ ಅವರು ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಶಿಕ್ಷಕರು ಮತ್ತು ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಕ್ಷೇತ್ರ ವ್ಯಾಪ್ತಿಯಲ್ಲಿ ಬಹುತೇಕ ಕಡೆ ಕೆ.ಬಿ.ಶ್ರೀನಿವಾಸ ಪರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಅವರು ಗೆಲುವು ಸಾಧಿಸುವರು ಎಂಬ ವಿಶ್ವಾಸವಿದೆ’ ಎಂದು ನುಡಿದರು.

ಮುಖಂಡರಾದ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಬಿ.ಜಿ.ಪಾಟೀಲ, ಶಶೀಲ್ ನಮೋಶಿ, ಅಮರನಾಥ ಪಾಟೀಲ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.