ADVERTISEMENT

ಹಾಡಹಗಲೇ ರೂ.16.36 ಲಕ್ಷ ಲೂಟಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 19:59 IST
Last Updated 16 ಸೆಪ್ಟೆಂಬರ್ 2013, 19:59 IST

ವಿಜಾಪುರ: ಬ್ಯಾಂಕಿಗೆ ಹಣ ಸಾಗಿಸುತ್ತಿದ್ದ ಪೆಟ್ರೋಲ್‌ಬಂಕ್‌ ಉದ್ಯೋಗಿಯ ಮೇಲೆ ಹಲ್ಲೆ ನಡೆಸಿ ರೂ.16.36 ಲಕ್ಷ ನಗದು ದೋಚಿದ ಘಟನೆ ಇಲ್ಲಿಯ ಪಾರೇಖ ನಗರದಲ್ಲಿ ಸೋಮವಾರ ಮುಂಜಾನೆ ನಡೆದಿದೆ.

ಇಲ್ಲಿಯ ರಾಷ್ಟ್ರೀಯ ಹೆದ್ದಾರಿ ನಂ.13ರಲ್ಲಿ ಇರುವ ಹುಂಡೇಕಾರ ಪೆಟ್ರೋಲ್‌ ಬಂಕ್‌ ಉದ್ಯೋಗಿ ಪ್ರಕಾಶ ನಾಯಕ ಉರ್ಫ್‌ ರಾಜು ರಾಠೋಡ (32) ಹಣ ಕಳೆದುಕೊಂಡವರು ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಫ್‌.ಎ. ಟ್ರಾಸ್ಗರ್‌ ತಿಳಿಸಿದ್ದಾರೆ.

‘ಪೆಟ್ರೋಲ್‌ ಬಂಕ್‌ನಲ್ಲಿ ಸಂಗ್ರಹವಾಗಿದ್ದ ರೂ.16.36 ಲಕ್ಷ ನಗದನ್ನು ಬಂಜಾರಾ ಕ್ರಾಸ್‌ನಲ್ಲಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಶಾಖೆಗೆ ಸಂದಾಯ ಮಾಡಲು ಬೈಕ್‌ನಲ್ಲಿ ಹೋಗುತ್ತಿದ್ದೆ. ಬಂಕ್‌ ಹಿಂಭಾಗದಲ್ಲಿರುವ ಪಾರೇಖ ನಗರದಲ್ಲಿ ನಿಂತಿದ್ದ ಇಬ್ಬರು ನನ್ನ ಬೈಕ್‌ ನೂಕಿದರು. ಕೆಳಗೆ ಬಿದ್ದ ನನ್ನ ಕಣ್ಣಲ್ಲಿ ಖಾರದ ಪುಡಿ ಎರಚಿ, ಹಣದ ಬ್ಯಾಗ್‌ ಕಿತ್ತುಕೊಂಡು ಪರಾರಿಯಾದರು’ ಎಂದು ಪ್ರಕಾಶ ಅವರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

‘ಪ್ರಕಾಶ ನಾಯಕ ಕೆಲ ವರ್ಷಗಳಿಂದ ನಮ್ಮಲ್ಲಿ ಕೆಲಸ ಮಾಡುತ್ತಿದ್ದು, ನಿಯಮಿತವಾಗಿ ಬ್ಯಾಂಕಿಗೆ ಹಣ ಸಂದಾಯ ಮಾಡುತ್ತಿದ್ದ. ಭಾನುವಾರ ಬ್ಯಾಂಕಿಗೆ ರಜೆ ಇದ್ದಿದ್ದರಿಂದ ಹಣ ಸಂದಾಯ ಮಾಡಲು ಆಗಿರಲಿಲ್ಲ. ಆ ಹಣವನ್ನು ಸೋಮವಾರ ಮುಂಜಾನೆ 10ಕ್ಕೆ ತೆಗೆದುಕೊಂಡು ಹೋಗುತ್ತಿರುವ ಸಮಯದಲ್ಲಿ ಈ ದರೋಡೆ ನಡೆದಿದೆ’ ಎಂದು ಪೆಟ್ರೋಲ್‌ ಬಂಕ್‌ ಮಾಲೀಕ ಅರುಣ ಹುಂಡೇಕಾರ ದೂರು ನೀಡಿದ್ದಾರೆ.

‘ಹಣ ಕಳೆದುಕೊಂಡಿರುವ ಪ್ರಕಾಶನ ಎದೆಯ ಮೇಲೆ ತರಚಿದ ಸಣ್ಣ ಗಾಯವಿದೆ. ಅದನ್ನು ಹೊರತು ಪಡಿಸಿದರೆ ಆತನಿಗೆ ಪೆಟ್ಟಾಗಿಲ್ಲ. ಘಟನಾ ಸ್ಥಳದಲ್ಲಿ ಖಾರದ ಪುಡಿ ಬಿದ್ದಿದೆ. ಪ್ರಕಾಶ ಮೇಲಿಂದ ಮೇಲೆ ಹೇಳಿಕೆ ಬದಲಿಸುತ್ತಿದ್ದು, ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ’ ಎಂದು ಟ್ರಾಸ್ಗರ್‌ ಹೇಳಿದರು. ಇಲ್ಲಿಯ ಆದರ್ಶ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.