ಬೆಂಗಳೂರು: ಮಾಜಿ ಸಚಿವ ಹರತಾಳು ಹಾಲಪ್ಪನವರ ವಿರುದ್ಧ ಇರುವ ಅತ್ಯಾಚಾರ ಪ್ರಕರಣವನ್ನು ಸಿಬಿಐಗೆ ವಹಿಸಿಕೊಡುವ ಸಂಬಂಧ ರಾಜ್ಯ ಮಾನವ ಹಕ್ಕುಗಳ ಆಯೋಗ ಹೊರಡಿಸಿರುವ ಆದೇಶವನ್ನು ಊರ್ಜಿತಗೊಳಿಸುವಂತೆ ಕೋರಿ ಚಂದ್ರಾವತಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಚಂದ್ರಾವತಿ ಹಾಲಪ್ಪನವರ ಸ್ನೇಹಿತ ವೆಂಕಟೇಶ ಮೂರ್ತಿ ಅವರ ಪತ್ನಿಯಾಗಿದ್ದು, ತಮ್ಮ ಮೇಲೆ ಹಾಲಪ್ಪ ಅತ್ಯಾಚಾರ ಎಸಗಿರುವುದಾಗಿ ಅವರು ಆಯೋಗದ ಮುಂದೆ ದೂರಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಿ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಸ್.ಆರ್.ನಾಯಕ್ 2010ರ ಮೇ 21ರಂದು ಆದೇಶಿಸಿದ್ದರು.
ಈ ಆದೇಶದ ರದ್ದತಿಗೆ ಕೋರಿ ಸರ್ಕಾರ ಅದೇ ಸಮಯದಲ್ಲಿ ಹೈಕೋರ್ಟ್ ಮೊರೆ ಹೋಗಿತ್ತು. ಸಿವಿಲ್ ಪ್ರಕ್ರಿಯಾ ಸಂಹಿತೆಯ ಅಡಿ ಆಯೋಗಕ್ಕೆ ಸಿವಿಲ್ ಕೋರ್ಟ್‌ನ ಅಧಿಕಾರ ನೀಡಲಾಗಿದೆ ನಿಜ. ಆದರೆ ಈ ಅಧಿಕಾರ ಬಳಸುವಾಗ ಆಯೋಗವು ಆರೋಪಿಗೆ ಸಮನ್ಸ್ ಜಾರಿಗೆ ಆದೇಶಿಸಿ ಅವರ ಹೇಳಿಕೆ ಪಡೆಯಬೇಕು. ಎಲ್ಲ ದಾಖಲೆಗಳನ್ನು ಪರಿಶೀಲನೆ ಮಾಡಬೇಕು. ಆದರೆ ಇದಾವುದನ್ನೂ ಗಣನೆಗೆ ತೆಗೆದುಕೊಳ್ಳದೇ ಆಯೋಗ ಆದೇಶ ಹೊರಡಿಸಿದೆ ಎನ್ನುವುದು ಸರ್ಕಾರದ ವಾದವಾಗಿತ್ತು. ಇದನ್ನು ಮಾನ್ಯ ಮಾಡಿದ್ದ ಕೋರ್ಟ್, ಆಯೋಗದ ಆದೇಶಕ್ಕೆ ಜುಲೈ ತಿಂಗಳಿನಲ್ಲಿ ತಡೆ ನೀಡಿತ್ತು. ಈ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಚಂದ್ರಾವತಿ ಅವರು ಅರ್ಜಿಗೆ ಮಧ್ಯಂತರ ಮನವಿ (ಐಎ) ಸಲ್ಲಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಹಾಗೂ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತೆ ಸರ್ಕಾರಿ ವಕೀಲರಿಗೆ ಸೂಚಿಸಿ ವಿಚಾರಣೆ ಮುಂದೂಡಿತು.
ಕುಲಪತಿ ನೇಮಕ ಊರ್ಜಿತ
ನೂತನವಾಗಿ ಸ್ಥಾಪಿಸಲಾದ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ವಿದ್ವಾಂಸ ಪ್ರೊ.ಮಲ್ಲೇಪುರ ಜಿ.ವೆಂಕಟೇಶ್ ಅವರನ್ನು ಕುಲಪತಿ ಮಾಡಿರುವ ಆದೇಶವನ್ನು ಹೈಕೋರ್ಟ್ ಮಂಗಳವಾರ ಊರ್ಜಿತಗೊಳಿಸಿದೆ.
2010ರ ಮೇ 27ರಂದು ಇವರನ್ನು ಪ್ರಥಮ ಕುಲಪತಿಗಳನ್ನಾಗಿ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಮೇಲುಕೋಟೆ ಸಂಸ್ಕೃತ ಅಕಾಡೆಮಿಯ ನಿವೃತ್ತ ರಿಜಿಸ್ಟ್ರಾರ್ ಕೃಷ್ಣಪ್ರಸಾದ್ ಅವರು ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ ವಜಾ ಮಾಡಿದೆ.
ಇವರಿಗೆ ಸೂಕ್ತ ಅರ್ಹತೆ ಇಲ್ಲ ಎನ್ನುವುದು ಅರ್ಜಿದಾರರ ವಾದವಾಗಿತ್ತು. ಆದರೆ ಸಂಸ್ಕೃತ ವಿಶ್ವವಿದ್ಯಾಲಯದ ಕಾಯ್ದೆಯ 68ನೇ ಕಲಮಿನ ಪ್ರಕಾರ, ಈ ವಿವಿಯ ಕುಲಪತಿ ಸ್ಥಾನಕ್ಕೆ ಉಳಿದ ವಿವಿಯ ಕುಲಪತಿ ಹುದ್ದೆಗೆ ಇರುವ ಅರ್ಹತೆಗಳಿಂದ ವಿನಾಯಿತಿ ನೀಡಲಾಗಿದೆ. ಅಷ್ಟೇ ಅಲ್ಲದೆ ಪ್ರಥಮ ಕುಲಪತಿಗಳಾಗಿ ನೇಮಕಗೊಳ್ಳುವವರಿಗೆ ಕೆಲವೊಂದು ಸಡಿಲಿಕೆ ನೀಡಿರುವುದಕ್ಕೆ ಸಂಬಂಧಿಸಿದಂತೆ ಅವರ ಪರ ವಕೀಲರು ಕೋರ್ಟ್ ಗಮನಕ್ಕೆ ತಂದ ಹಿನ್ನೆಲೆಯಲ್ಲಿ, ಅರ್ಜಿಯನ್ನು ವಜಾ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.