ADVERTISEMENT

ಹಾಲಪ್ಪ ಬಿಜೆಪಿ ತೊರೆಯುವ ಸುಳಿವು

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2018, 19:30 IST
Last Updated 31 ಮಾರ್ಚ್ 2018, 19:30 IST

ಬೆಂಗಳೂರು: ‘ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೆ ನನ್ನ ದಾರಿ ನನಗೆ’ ಎಂದು ಹೇಳಿರುವ ಮಾಜಿ ಶಾಸಕ ಹರತಾಳು ಹಾಲಪ್ಪ, ಬಿಜೆಪಿ ತೊರೆಯುವ ಸುಳಿವು ನೀಡಿದ್ದಾರೆ.

ಇಲ್ಲಿನ ಬಸವೇಶ್ವರ ನಗರದಲ್ಲಿರುವ ಮನೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಶನಿವಾರ ಮಾತನಾಡಿದ ಅವರು, ‘ಸಾಗರ ಕ್ಷೇತ್ರದಲ್ಲಿ ಟಿಕೆಟ್ ಕೈತಪ್ಪುವ ಬಗ್ಗೆ ಮಾಹಿತಿ ಇದೆ. ಆದರೆ, ಇನ್ನೂ ಪಟ್ಟಿ ಬಿಡುಗಡೆ ಆಗಿಲ್ಲ. ಒಂದು ವೇಳೆ ಟಿಕೆಟ್ ಸಿಗದಿದ್ದರೆ ಹಿತೈಷಿಗಳು, ಬೆಂಬಲಿಗರ ಜತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದು ಅನಿವಾರ್ಯವಾಗಲಿದೆ’ ಎಂದರು.

‘ಕಳೆದ ಚುನಾವಣೆಯಲ್ಲಿ ಮೂರನೇ ಸ್ಥಾನ ಪಡೆದವರಿಗೆಲ್ಲ ಟಿಕೆಟ್ ಸಿಗುವ ಸಾಧ್ಯತೆ ಇದೆ. ಆದರೆ, ನಾನು ಎರಡನೇ ಸ್ಥಾನ ಪಡೆದವನು. ನನಗೇ ‌ಟಿಕೆಟ್ ಇಲ್ಲ ಅಂದರೆ ಹೇಗೆ’ ಎಂದು ಅವರು ಪ್ರಶ್ನಿಸಿದರು.

ADVERTISEMENT

‘ಬಿಜೆಪಿಯನ್ನು ಹೀನಾಯವಾಗಿ ನಿಂದಿಸಿದ ಬೇಳೂರು ಗೋಪಾಲಕೃಷ್ಣಗೆ ಟಿಕೆಟ್ ನೀಡುತ್ತಾರೆ ಎಂದರೆ ಏನರ್ಥ. ಟಿಕೆಟ್ ಬೇಕಾದರೆ ಯಡಿಯೂರಪ್ಪ ಮತ್ತು ಪಕ್ಷವನ್ನು ನಿಂದಿಸಬೇಕೆಂಬುದು ನನಗೆ ಗೊತ್ತಿರಲಿಲ್ಲ. ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟವರಿಗೆ ಟಿಕೆಟ್ ಕೊಟ್ಟರೆ ವಿರೋಧಿಸುತ್ತೇನೆ’ ಎಂದು ಹೇಳಿದರು.

‘ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಇದ್ದವರು ನಾವು. ಈ ಕಾರಣಕ್ಕೆ ಆಶಾವಾದ ಉಳಿದುಕೊಂಡಿದೆ. ಯಡಿಯೂರಪ್ಪ ಅವರ ಕೈ ಕಟ್ಟಿ ಹಾಕಿರುವ ಹಾಗೆ ಕಾಣುತ್ತಿದೆ, ಆದರೂ ಅವರೊಂದಿಗೆ ಒಮ್ಮೆ ಮಾತನಾಡುತ್ತೇನೆ. ನಂತರ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ನನ್ನ ಜತೆ ಸಂಪರ್ಕದಲ್ಲಿದ್ದಾರೆ’ ಎಂದು ಹೇಳಿದರು.

‘ಹಾಲಪ್ಪ ಬಗ್ಗೆ ಚರ್ಚೆ ನಡೆದಿಲ್ಲ’
‘ಹರತಾಳು ಹಾಲಪ್ಪ ಕಾಂಗ್ರೆಸ್‌ಗೆ ಬರುವ ಬಗ್ಗೆ ಮಾಹಿತಿ ಇಲ್ಲ, ನನ್ನ ಹಂತದಲ್ಲಿ ಚರ್ಚೆ ನಡೆದಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಸ್ಪಷ್ಟಪಡಿಸಿದರು.

‘ಊಹಾಪೋಹದ ಬಗ್ಗೆ ಉತ್ತರಿಸುವುದಿಲ್ಲ. ಹಾಲಪ್ಪ ಪಕ್ಷಕ್ಕೆ ಬರುವ ಸನ್ನಿವೇಶ ಬಂದಾಗ ನೋಡೋಣ’ ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ಆರೋಪಿತ ನಾಯಕರು ಕಾಂಗ್ರೆಸ್‌ಗೆ ಬಂದಿದ್ದಾರೆ. ಹಾಗೆಂದ ಮಾತ್ರಕ್ಕೆ ಕಾನೂನು ಚೌಕಟ್ಟಿನಲ್ಲಿ‌ ಅವರನ್ನು ರಕ್ಷಿಸಲು ಆಗುವುದಿಲ್ಲ. ನಮ್ಮ ಪಕ್ಷದ ಸಿದ್ದಾಂತ ಒಪ್ಪಿದ ನಂತರವೇ ಸೇರಿಸಿಕೊಳ್ಳಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.