ADVERTISEMENT

ಹಾಲಿ, ಮಾಜಿಗಳಲ್ಲಿ ಯಾರು ಶ್ರೇಷ್ಠರು?

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2012, 19:39 IST
Last Updated 11 ಡಿಸೆಂಬರ್ 2012, 19:39 IST

ಸುವರ್ಣ ವಿಧಾನಸೌಧ (ಬೆಳಗಾವಿ):  `ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರೂ ಮತ್ತು ಲಾಲ್‌ಬಹಾದ್ದೂರ್ ಶಾಸ್ತ್ರಿ ಅವರಲ್ಲಿ ಯಾರು ಹೆಚ್ಚು ಶ್ರೇಷ್ಠರು' ಎನ್ನುವ ಪ್ರಶ್ನೆ ಎತ್ತುವ ಮೂಲಕ ಸಭಾನಾಯಕ ವಿ. ಸೋಮಣ್ಣ, ವಿಧಾನ ಪರಿಷತ್‌ನಲ್ಲಿ ಮಂಗಳವಾರ ಸ್ವಾರಸ್ಯಕರ ಚರ್ಚೆಗೆ ನಾಂದಿ ಹಾಡಿದರು.

ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನದಲ್ಲಿನ ವಿಳಂಬ ಕುರಿತ ಪ್ರಸ್ತಾಪವೇ ಈ ಚರ್ಚೆಗೆ ನೀರೆರೆಯಿತು. ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ, ರಾಜ್ಯ ಸರ್ಕಾರವನ್ನು ಟೀಕಿಸುತ್ತಿದ್ದಂತೆಯೇ ಎದ್ದುನಿಂತ ಸೋಮಣ್ಣ, ಶ್ರೇಷ್ಠತೆ ಪ್ರಶ್ನೆ ಎತ್ತಿದರು.
`ಪ್ರಧಾನಿಯಾಗಿ ನೆಹರೂ ಸುದೀರ್ಘ 17 ವರ್ಷ ಮತ್ತು ಶಾಸ್ತ್ರಿ ಕೇವಲ 28 ತಿಂಗಳು ಅಧಿಕಾರ ನಡೆಸಿದರು. ಇಬ್ಬರ ಸಾಧನೆಯನ್ನೂ ತುಲನೆ ಮಾಡಿ ನೋಡಿದರೆ ಯಾರು ಶ್ರೇಷ್ಠರು ಎಂಬುದು ಗೊತ್ತಾಗುತ್ತದೆ' ಎಂದು ಹೇಳಿದರು.

`ಶಾಸ್ತ್ರಿ ಅವರೇ ಶ್ರೇಷ್ಠರು ಎಂಬುದನ್ನು ನೇರವಾಗಿ ಹೇಳಬಹುದಲ್ಲ' ಎಂದು ಜೆಡಿಎಸ್‌ನ ಬಸವರಾಜ ಹೊರಟ್ಟಿ ಚರ್ಚೆಗೆ ಇನ್ನಷ್ಟು ಬಲ ತುಂಬಿದರು. ಇದರಿಂದ ಕೆರಳಿದ ಕಾಂಗ್ರೆಸ್‌ನ ವೀರಣ್ಣ ಮತ್ತಿಕಟ್ಟಿ `ತಾವು ಬೇಕಾದರೆ ಎಚ್.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಅವರಲ್ಲಿ ಯಾರು ಶ್ರೇಷ್ಠರು ಎಂಬುದರ ಚರ್ಚೆ ಮಾಡಿಕೊಳ್ಳಬಹುದು. ನಮ್ಮ ನಾಯಕರು ದೊಡ್ಡವರು. ಅವರ ಗೊಡವೆ ನಿಮಗೆ ಬೇಡ' ಎಂದು ಆಕ್ಷೇಪ ಎತ್ತಿದರು.

`ನೆಹರೂ, ಶಾಸ್ತ್ರಿ ಇಬ್ಬರೂ ಈಗ ಇತಿಹಾಸ ಪುರುಷರು. ಅವರ ಶ್ರೇಷ್ಠತೆ ಪ್ರಶ್ನೆ ನಮಗೆ ಬೇಡ. ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದಗೌಡ ಮತ್ತು ಹಾಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಲ್ಲಿ ಯಾರು ಶ್ರೇಷ್ಠರು ಎನ್ನುವುದನ್ನು ಯೋಚಿಸೋಣ' ಎಂದು ಜೆಡಿಎಸ್‌ನ ಎಂ.ಸಿ. ನಾಣಯ್ಯ ಚರ್ಚೆಗೆ ಇನ್ನಷ್ಟು ರಂಗು ತುಂಬಿದರು.

ತಕ್ಷಣ ಬಿಜೆಪಿಯ ಭಾರತಿ ಶೆಟ್ಟಿ, `ಚರ್ಚೆ ಆಗುವಂತಹದ್ದು ಏನೂ ಇಲ್ಲ. ಯಡಿಯೂರಪ್ಪನವರೇ ಅತ್ಯಂತ ಶ್ರೇಷ್ಠರು' ಎಂದು ಹೇಳಿದರು. ಸದನದಲ್ಲಿ ಹಾಜರಿದ್ದ ಸದಾನಂದಗೌಡರಿಗೆ ಆಗ ಸುಮ್ಮನೆ ಕೂಡಲು ಆಗಲಿಲ್ಲ. ಅವರೂ ಚರ್ಚೆಯಲ್ಲಿ ಪಾಲ್ಗೊಂಡು ಅದರ ಸ್ವಾರಸ್ಯವನ್ನು ಇನ್ನಷ್ಟು ಹೆಚ್ಚಿಸಿದರು.

`ನಾಣಯ್ಯ ಪ್ರಸ್ತಾಪಿಸಿದ ಮೂವರು ಮುಖ್ಯಮಂತ್ರಿಗಳ ಜೊತೆ ನಾನು ಮತ್ತಿಬ್ಬರು ಮಾಜಿಗಳ ಹೆಸರನ್ನು ಸೇರಿಸುತ್ತೇನೆ. ಒಬ್ಬರು ಕೇಂದ್ರದ ಸಚಿವರಾಗಿ ಇದೀಗ ವಿಶ್ರಾಂತ ಜೀವನ ಆರಂಭಿಸಿದವರು. ಮತ್ತೊಬ್ಬರು ಸಂಸದರಾಗಿದ್ದರೂ ರಾಜ್ಯದ ಪರವಾಗಿ ಬಾಯಿ ತೆಗೆಯದೆ ಓಡಾಡಿಕೊಂಡಿರುವವರು'.

`ಇನ್ನೊಬ್ಬರು ರಾಜೀನಾಮೆ ಕೊಟ್ಟು ರಾಜಕೀಯ ಅಖಾಡಕ್ಕೆ ಇಳಿದವರು. ನಾನು ಸದನದ ಸದಸ್ಯ. ಇನ್ನು ಉಳಿದವರು ಹಾಲಿ ಮುಖ್ಯಮಂತ್ರಿ. ಯಾರೊಂದಿಗೂ ಹೋಲಿಕೆ ಬೇಡ. ಶ್ರೇಷ್ಠರು ಯಾರು ಎಂಬುದು ಜನರಿಗೆ ಗೊತ್ತು' ಎಂದು ಸದಾನಂದಗೌಡ ಹೇಳಿದರು.

`ಇನ್ನು ಪುನಃ ಶ್ರೇಷ್ಠ ಪ್ರಧಾನಿ ಯಾರು ಎಂಬುದರ ಚರ್ಚೆ ನಡೆಸೋಣ' ಎಂಬ ಮಾತು ಸದನದ ಮಧ್ಯದಿಂದ ತೇಲಿ ಬಂತು. `ನರೇಂದ್ರ ಮೋದಿ ಅತ್ಯಂತ ಶ್ರೇಷ್ಠ ಪ್ರಧಾನಿ ಆಗಬಲ್ಲರು ಎಂಬುದನ್ನು  ಸಮೀಕ್ಷೆಗಳು ಹೇಳುತ್ತಿವೆ' ಎಂದು ಬಿಜೆಪಿಯ ಲೆಹರ್ ಸಿಂಗ್ ತಿಳಿಸಿದರು. `ಇದೆಂತಹ ಹೇಳಿಕೆ; ಇದನ್ನೆಲ್ಲ ಸಹನೆ ಮಾಡಿಕೊಂಡು ಸುಮ್ಮನೆ ಕೂಡಲು ಸಾಧ್ಯವಿಲ್ಲ.

ಮನಮೋಹನ್ ಸಿಂಗ್ ಅತ್ಯಂತ ಶ್ರೇಷ್ಠ ಪ್ರಧಾನಿ' ಎಂದು ಕಾಂಗ್ರೆಸ್‌ನ ಮೋಟಮ್ಮ ಕೇಳಿದರು. `ಸದಸ್ಯರು ಪ್ರಸ್ತಾಪಿಸಿದ ಎಲ್ಲರೂ ಶ್ರೇಷ್ಠರೇ. ಈಗ ಕೃಷ್ಣಾ ನದಿ ನೀರಿನ  ವಿಷಯಕ್ಕೆ ವಾಪಸು ಬರೋಣ' ಎಂದು ಸಭಾಪತಿ ಪೀಠದಲ್ಲಿದ್ದ ಕೆ.ಬಿ. ಶಾಣಪ್ಪ ಚರ್ಚೆ ಕೊನೆಗೊಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.