ADVERTISEMENT

ಹಿಂದಿ ಹೇರಿಕೆ ವಿರುದ್ಧ ತೀವ್ರ ಹೋರಾಟ ನಡೆಯಲಿ

ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ ದುಂಡುಮೇಜಿನ ಸಭೆಯಲ್ಲಿ ಮುಖಂಡರ ಒಕ್ಕೊರಲ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 19:30 IST
Last Updated 15 ಜುಲೈ 2017, 19:30 IST
ಸಭೆಯಲ್ಲಿ ಬರಗೂರು ರಾಮಚಂದ್ರಪ್ಪ ಮಾತನಾಡಿದರು. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಟಿ.ಎ.ನಾರಾಯಣಗೌಡ, ಬಸವ ಜಯಮೃತ್ಯುಂಜಯ ಸ್ವಾಮೀಜಿ, ಚಂದ್ರಶೇಖರ ಪಾಟೀಲ ಇದ್ದಾರೆ  –ಪ್ರಜಾವಾಣಿ ಚಿತ್ರ
ಸಭೆಯಲ್ಲಿ ಬರಗೂರು ರಾಮಚಂದ್ರಪ್ಪ ಮಾತನಾಡಿದರು. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಟಿ.ಎ.ನಾರಾಯಣಗೌಡ, ಬಸವ ಜಯಮೃತ್ಯುಂಜಯ ಸ್ವಾಮೀಜಿ, ಚಂದ್ರಶೇಖರ ಪಾಟೀಲ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ದೇಶದ ಸಂವಿಧಾನದ ಪ್ರಕಾರ ರಾಷ್ಟ್ರಭಾಷೆ ಎಂಬುದು ಇಲ್ಲ. ಆದರೆ, ಹಿಂದಿ ಭಾಷೆಯನ್ನು ರಾಷ್ಟ್ರಭಾಷೆ ಎಂಬಂತೆ ಬಿಂಬಿಸಿ ಅನ್ಯ ಭಾಷೆಗಳ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. ಇದರ ವಿರುದ್ಧ ರಾಷ್ಟ್ರವ್ಯಾಪಿ ಹೋರಾಟ ನಡೆಯಬೇಕು.’

ಭಾರತ ಒಕ್ಕೂಟದಲ್ಲಿ ಭಾಷಾ ಸಮಾನತೆಗೆ ಒತ್ತಾಯಿಸಿ ಹಾಗೂ ‘ನಮ್ಮ ಮೆಟ್ರೊ’ದಲ್ಲಿ ಹಿಂದಿ ಹೇರಿಕೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯು ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ದುಂಡುಮೇಜಿನ ಸಭೆ’ಯಲ್ಲಿ ವ್ಯಕ್ತವಾದ ಒಕ್ಕೊರಲ ಅಭಿಪ್ರಾಯವಿದು.

‘ದೇಶದಲ್ಲಿರುವ ಎಲ್ಲ ಭಾಷೆಗಳೂ ರಾಷ್ಟ್ರಭಾಷೆಗಳೇ. ಹಿಂದಿಗೆ ವಿಶೇಷ ಸ್ಥಾನ ನೀಡಿರುವ ಸಂವಿಧಾನದ 344 ಹಾಗೂ 351ನೇ ವಿಧಿಗಳನ್ನು ಕನ್ನಡ ಸೇರಿದಂತೆ ಎಲ್ಲ ಭಾಷೆಗಳಿಗೂ ವಿಸ್ತರಿಸಬೇಕು. ಹಿಂದಿ ಭಾಷೆ ಹೇರಿಕೆಯು ದೇಶದ ವಿಭಜನೆಗೆ ನಾಂದಿ ಹಾಡುತ್ತದೆ’ ಎಂದು ಕೆಲವು  ಸಾಹಿತಿಗಳು ಹಾಗೂ ಹೋರಾಟಗಾರರು ಎಚ್ಚರಿಕೆಯನ್ನೂ ನೀಡಿದರು.

ADVERTISEMENT

ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ‘ನಾವು ಹಿಂದಿ ಭಾಷಿಕರ ವಿರೋಧಿಗಳಲ್ಲ. ಆದರೆ, ಹಿಂದಿ ಹೇರಿಕೆಯನ್ನು ವಿರೋಧಿಸುತ್ತೇವೆ. ಬಹು ಸಾಂಸ್ಕೃತಿಕ, ಭಾಷಿಕ ದೇಶದ ಒಳಗೆ ಎಲ್ಲ ಭಾಷೆಗಳಿಗೂ ಸಮಾನ ಸ್ಥಾನ ಸಿಗಬೇಕು. ಸಂವಿಧಾನದ 344 ಹಾಗೂ 351ನೇ ವಿಧಿಗಳು ಹಿಂದಿಗೆ ವಿಶೇಷ ಸ್ಥಾನ ನೀಡಿವೆ. ಆದರೆ, ರಾಷ್ಟ್ರಭಾಷಾ ಸ್ಥಾನ ನೀಡಿಲ್ಲ’ ಎಂದರು.

‘ಒಕ್ಕೂಟದ ನಿಜವಾದ ಗುಣ ವಿಕೇಂದ್ರೀಕರಣದಲ್ಲಿ ಇದೆ. ಆದ್ದರಿಂದ ದಾಯಾದಿ ಕಲಹ ಬಿಟ್ಟು ದೇಶದ ಎಲ್ಲ ಭಾಷಿಕರು ಹಿಂದಿ ಹೇರಿಕೆ ವಿರುದ್ಧ ಹೋರಾಡಬೇಕು. ಇಲ್ಲದಿದ್ದರೆ ಒಕ್ಕೂಟ ವ್ಯವಸ್ಥೆಯ ಪತನ ಆಗುತ್ತದೆ’ ಎಂದು ಹೇಳಿದರು.

ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ, ‘ನಮ್ಮ ಮೆಟ್ರೊದಲ್ಲಿ ಹಿಂದಿ ಹೇರಿಕೆಯು ಕನ್ನಡಕ್ಕೆ ಸಂಬಂಧಿಸಿದ್ದಲ್ಲ. ಅದು ಎಲ್ಲ ಭಾಷೆಗಳ ಸಮಸ್ಯೆ. ನಮ್ಮ ನೆರೆಯ ರಾಜ್ಯಗಳ ಜತೆ ಏನೇ ಜಗಳ ಇದ್ದರೂ ಅದನ್ನು ಬದಿಗಿಟ್ಟು ಭಾಷೆಯ ವಿಷಯಕ್ಕೆ ಒಟ್ಟಾಗಿ ಹೋರಾಟ ಮಾಡಲೇಬೇಕು’ ಎಂದು ಮನವಿ ಮಾಡಿದರು.

‘ಒಂದು ತೆರಿಗೆ, ಒಂದು ದೇಶ ಎನ್ನುತ್ತಾರೆ. ಇದು ಇಲ್ಲಿಗೆ ನಿಲ್ಲುವುದಿಲ್ಲ. ಮುಂದೆ, ಒಂದೇ ಧರ್ಮ, ಒಂದೇ ಭಾಷೆ, ಒಂದೇ ಆಹಾರ, ಉಡುಗೆ–ತೊಡುಗೆ ಎಂದರೆ ಏನು ಮಾಡುವುದು’ ಎಂದು ಪ್ರಶ್ನಿಸಿದರು.

ಸಾಹಿತಿ ಕಮಲಾ ಹಂಪನಾ, ‘ಹಿಂದಿಯು ಬಕಾಸುರನ ರೀತಿಯಲ್ಲಿ ಬರುತ್ತಿದೆ. ಅದು ಎಲ್ಲವನ್ನೂ ನುಂಗಿ ನೀರು ಕುಡಿಯುತ್ತದೆ. ಇದಕ್ಕೆ ಅವಕಾಶ ಕೊಡಬಾರದು. ಹೊರಗಿನಿಂದ ಬರುವ ಮಾರಿಯನ್ನು (ಹಿಂದಿ ಹೇರಿಕೆ) ಹೋಗಲಾಡಿಸಬೇಕು. ಒಳಗಡೆಯೇ ಇರುವ ಹುಂಬರನ್ನು (ಕನ್ನಡದ ಬಗ್ಗೆ ನಿರ್ಲಕ್ಷ್ಯ ತೋರುವ ಮಂದಿ) ಸರಿದಾರಿಗೆ ತರಬೇಕು’ ಎಂದು ಹೇಳಿದರು.

ಸಭೆಯಲ್ಲಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ನಟ ಚೇತನ್‌, ಗೀತರಚನೆಕಾರ ಕವಿರಾಜ್‌, ಬನವಾಸಿ ಬಳಗದ ಆನಂದ್‌,  ಡಾ.ಸಿ.ಎಸ್‌.ದ್ವಾರಕಾನಾಥ್‌, ಪ್ರೊ.ಮಳಲಿ ವಸಂತಕುಮಾರ್‌, ಲೇಖಕ ರಂಜಾನ್‌ ದರ್ಗಾ ಇದ್ದರು.

**

‘ಮೋದಿ ರಾಷ್ಟ್ರೀಯ ಇಸ್ತ್ರಿ ಪೆಟ್ಟಿಗೆ’

‘ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಇಸ್ತ್ರಿ ಪೆಟ್ಟಿಗೆ ಇದ್ದಂತೆ. ಬಟ್ಟೆಯಲ್ಲಿ ಸುಕ್ಕುಗಳು ಇರಬಾರದು, ಬಣ್ಣ  ಇರಬಾರದು ಎಂಬ ಧೋರಣೆ ಅವರದ್ದು. ಉದ್ದ ಕೂದಲು ಬಿಡಬಾರದು, ಮೀಸೆ ಬಿಡಬಾರದು ಎಂದೂ ಕಾನೂನನ್ನೂ ತರಬಹುದು’ ಎಂದು ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷ ಡಾ.ಪಿ.ವಿ.ನಾರಾಯಣ ವ್ಯಂಗ್ಯವಾಗಿ ಹೇಳಿದರು.

‘ದ್ವಿಭಾಷಾ ಸೂತ್ರ ಅನುಸರಿಸುವ ಪಕ್ಷಗಳಿಗೆ ಮಾತ್ರ ಮತ ನೀಡುತ್ತೇವೆ ಎಂದು ಕರೆಕೊಡಬೇಕು’ ಎಂದರು.

**

‘ಹೆದ್ದಾರಿ ನಾಮಫಲಕಕ್ಕೆ ಮಸಿ’
‘ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಳವಡಿಸಿರುವ ಹಿಂದಿ ನಾಮಫಲಕಗಳಿಗೆ ಕ.ರ.ವೇ ಕಾರ್ಯಕರ್ತರು ಮಸಿ ಬಳಿಯಲಿದ್ದಾರೆ. ಹಿಂದಿ ಹೇರಿಕೆ ವಿರುದ್ಧ ದಕ್ಷಿಣ ಭಾರತದ ಪ್ರಾದೇಶಿಕ ಪಕ್ಷಗಳ ಮುಖಂಡರ ಸಮಾವೇಶವನ್ನು ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ನಡೆಸಲು ನಿರ್ಧರಿಸಲಾಗಿದೆ’ ಎಂದು ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದರು.

**

ನಮ್ಮ ಮಧ್ಯೆ ಸಣ್ಣಪುಟ್ಟ ಜಗಳ ಇರುತ್ತದೆ. ಆದರೆ, ಭಾಷಾ ಅಸ್ಮಿತೆ ವಿಷಯ ಬಂದಾಗ ನಾವೆಲ್ಲ ಒಂದಾಗಿ ಹೋರಾಟ ನಡೆಸಬೇಕು
–ಎಸ್‌.ಸೆಂಥಿಲ್‌ನಾಥನ್‌
ತಮಿಳುನಾಡಿನ ಭಾಷಾ ಹಕ್ಕುಗಳ ಹೋರಾಟಗಾರ

*

ಹಿಂದಿ ಭಾಷೆಯನ್ನು ಬೆಳೆಸುವುದಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ಹೇರಿಕೆಗೆ ವಿರೋಧ ಇದೆ. ಧರ್ಮ, ಭಾಷೆಯನ್ನು ಅತಿರೇಕಕ್ಕೆ ತೆಗೆದುಕೊಂಡು ಹೋಗಬಾರದು
–ವಿ.ಆರ್‌. ಸುದರ್ಶನ್‌
ಕಾಂಗ್ರೆಸ್‌ ಮುಖಂಡ

*

ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲ ಅವರನ್ನು ಬದಲಾಯಿಸಬೇಕು. ಇಲ್ಲವೇ, ಹಿಂದಿ ಬಳಕೆಯನ್ನು ನಿಲ್ಲಿಸುವಂತೆ ಸರ್ಕಾರ ಸೂಚಿಸಬೇಕು
–‘ಮುಖ್ಯಮಂತ್ರಿ’ ಚಂದ್ರು
ನಟ

*

ಬೆಳಗಾವಿ ಸಮಸ್ಯೆ, ಕಾವೇರಿ ಸಮಸ್ಯೆ ಏನೇ ಇರಲಿ. ಅವುಗಳನ್ನು ಬದಿಗಿಟ್ಟು ಪ್ರಾದೇಶಿಕ ಭಾಷೆಗಳ ಜನರು ಒಗ್ಗಟ್ಟಾಗಬೇಕು. ಈ ಬಗ್ಗೆ ಮುಂಬೈನಲ್ಲೂ ಸಭೆ ನಡೆಸಬೇಕು.
–ಸಂದೀಪ್‌ ದೇಶಪಾಂಡೆ
ಮಹಾರಾಷ್ಟ್ರದ ನವ ನಿರ್ಮಾಣ ಸೇನೆ

*

ಮೆಟ್ರೊ  ರೈಲು ನೆಪದಲ್ಲಿ ಕನ್ನಡಿಗರ ಕುತ್ತಿಗೆಯನ್ನು ಹಿಸುಕಲಾಗುತ್ತಿದೆ. ಇದು ಹಿಂದಿಯೇತರ ಭಾಷಿಕರ ಜೀವನ್ಮರಣದ ಪ್ರಶ್ನೆಯಾಗಿದೆ.
–ಡಾ.ಸಿದ್ಧಲಿಂಗಯ್ಯ
ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.