ADVERTISEMENT

ಹಿಂದೂಗಳ ಪರ ಕೆಲಸ ಮಾಡಿ, ಸಾಬ್ರು ಪರವಾಗಲ್ಲ: ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ

​ಪ್ರಜಾವಾಣಿ ವಾರ್ತೆ
Published 7 ಜೂನ್ 2018, 18:25 IST
Last Updated 7 ಜೂನ್ 2018, 18:25 IST
ವಿಜಯಪುರ ಜಿಲ್ಲೆಯ ವಿಜಯಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ
ವಿಜಯಪುರ ಜಿಲ್ಲೆಯ ವಿಜಯಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ   

ವಿಜಯಪುರ: ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಈಚೆಗೆ ನಡೆದ ಖಾಸಗಿ ಸಮಾರಂಭವೊಂದರಲ್ಲಿ, ಮುಸ್ಲಿಮರ ವಿರುದ್ಧ ಮಾತನಾಡಿರುವ 30 ಸೆಕೆಂಡ್‌ಗಳ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಮುಸ್ಲಿಮರು, ಪ್ರಗತಿಪರರು ಬಸನಗೌಡ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳು, ಬೆಂಬಲಿಗರು ಸಮರ್ಥನೆ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಜಟಾಪಟಿ ನಡೆಸುತ್ತಿರುವ ಪೋಸ್ಟ್‌ಗಳು ವೈರಲ್‌ ಆಗಿವೆ.

ವಿಡಿಯೊದಲ್ಲಿ ಏನಿದೆ?
‘ಪಾಲಿಕೆಯ ಕಾರ್ಪೊರೇಟರ್‌ಗಳ ಸಭೆ ಕರೆದು ಇನ್ನು ಮುಂದೆ ಹಿಂದೂಗಳ ಪರ ಕೆಲಸ ಮಾಡಬೇಕು. ಸಾಬ್ರು ಪರವಾಗಲ್ಲ ಎಂದು ಹೇಳಿದ್ದೇನೆ. ಯಾಕಂದ್ರಾ... ಹೌದು ಯಾರ್ರೀ ನಂಗ ಬಿಜಾಪುರದಲ್ಲಿ ವೋಟ್‌ ಹಾಕಿರೋದು ? ಎನ್ನುತ್ತಿದ್ದಂತೆ ನೆರೆದಿದ್ದ ಜನರು ಹಿಂದೂ ಹಿಂದೂ ಎಂದು ಕೂಗಿದ್ದಾರೆ.
ಸಾಬರಿಗೆ ನಾ ಬ್ಯಾಡ ಅಂತ ಹೇಳಿದ್ದೇ ಮೊದಲೇ. ನಮ್ಮವರಿಗೆ ಎಲ್ಲರಿಗೂ ತಾಕೀತು ಮಾಡಿದ್ದೆ. ನನ್ನ ಆಫೀಸಿಗೆ ಎಲ್ಲಿಯೂ ಟೊಪ್ಪಿಗೆಯವರು, ಬುರ್ಖಾದವರು ಬಂದು ನಿಲ್ಲಬಾರದು. ನನ್ನ ಹಿಂದೆ–ಮುಂದೆಯೂ ಇರಬಾರದು ಅಂತಹ’ ಎಂಬ ಮಾತುಗಳಿರುವ ಯತ್ನಾಳ ಭಾಷಣದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಚರ್ಚಾರ್ಹ ವಿಷಯವಾಗಿದೆ.

ADVERTISEMENT

‘ಮುಸ್ಲಿಮರ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವ ಮಾತುಗಳನ್ನು ಯತ್ನಾಳ ಆಡಿದ್ದಾರೆ. ತಕ್ಷಣವೇ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಘೋಷಿಸಬೇಕು. ಇಲ್ಲವೇ ಇನ್ನೊಮ್ಮೆ ಇಂತಹ ಪ್ರಚೋದನಾತ್ಮಕ ಭಾಷಣ ಮಾಡಲ್ಲ ಎಂದು ಮುಸ್ಲಿಂ ಸಮುದಾಯದ ಕ್ಷಮೆ ಕೇಳಬೇಕು’ ಎಂದು ಸಿಂದಗಿ ತಾಲ್ಲೂಕಿನ ಕರವೇ ಅಧ್ಯಕ್ಷ ಸದ್ದಾಂ ಕೆ.ಆಲಗೂರ ಆಗ್ರಹಿಸಿದ್ದಾರೆ.

‘ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ. ಒಳ್ಳೆಯ ಆಡಳಿತ ನೀಡಬಲ್ಲರು ಎಂಬುದನ್ನು ಕಾಡು ನೋಡ್ತೀವಿ. ಕೆಟ್ಟ ಆಡಳಿತ ನೀಡಲು ಮುಂದಾದರೆ ಬಡಿಗೆ ತೆಗೆದುಕೊಂಡು ನಿಲ್ತೀವಿ. ಈ ವಿಷಯದಲ್ಲಿ ಇಷ್ಟಕ್ಕಿಂತ ಹೆಚ್ಚಿನದೇನು ಹೇಳಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ, ಮುಧೋಳ ಶಾಸಕ ಗೋವಿಂದ ಕಾರಜೋಳ ಯತ್ನಾಳ ವಿಡಿಯೋ ವೈರಲ್‌ಗೆ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಗೆ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.

ಯತ್ನಾಳ ಗರಂ ?
ಮುಸ್ಲಿಮರ ಕುರಿತು ಮಾತನಾಡಿರುವ ವಿಡಿಯೋ ವೈರಲ್‌ ಆಗಿರುವುದಕ್ಕೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿಯಲ್ಲಿ ಯತ್ನಾಳರನ್ನು ಪ್ರಶ್ನಿಸಿದ್ದಕ್ಕೆ, ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

‘ಏನ್‌ ವೈರಲ್‌ ಅಂತಹ ಕೇಳ್ತೀರಿ ? ಬಿಟ್ಟಾಕ್ರೀ ಅದನ್ನು. ಕಳೆದ ಐದು ವರ್ಷ ನಮಗೆ ಅನ್ಯಾಯವಾಗಿದ್ದಕ್ಕೆ ಆ ರೀತಿ ಮಾತನಾಡ್ವೀನಿ. ಹಿಂದೂಗಳ ಪರ ಮಾತನಾಡೋದು ತಪ್ಪಾ. ನಿಮಗ್ಯಾಕ್ರೀ ಬೆಂಕಿ ಹತ್ತೈತಿ. ನಾನ್‌ ಮಾತನಾಡಿರೋದು ಒಂದು ತಾಸ್‌. ನೀವ್ ತೋರಿಸೋದು ಎಷ್ಟ್ರೀ ? ನಿಮ್ಗ ಬೇಕಾದಂಗ ಎಡಿಟ್‌ ಮಾಡಿಕೊಳ್ತೀರಿ.

ನಾ ಈಗಲೂ ಹೇಳ್ತ್ವೀನಿ. ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಒಳ್ಳೆಯವರು. ಸಂಸದ ಅಸಾದುದ್ದೀನ್‌ ಓವೈಸಿ ಒಬ್ಬ ಲೋಫರ್‌’ ಎಂದರು. ಸರಣಿ ಪ್ರಶ್ನೆ ಕೇಳಲು ಮುಂದಾದ ಪತ್ರಕರ್ತರ ವಿರುದ್ಧವೇ ಹರಿಹಾಯ್ದರು.

‘ಅವ್ರು ಮಾತನಾಡಿದ್ದು, ವೈರಲ್‌ ಆದಾಗ ಯಾವ ಮಾಧ್ಯಮದಲ್ಲೂ ಬರಲಿಲ್ಲ. ನಮ್ಮವು ಮಾತ್ರ ಕಾಂಟ್ರಾವಸ್ರಿ ಆಗ್ತಾವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂಗಳ ಪರ ಮಾತನಾಡಿದರೆ ಕೋಮುವಾದಿ. ಮುಸ್ಲಿಮರ ಪರ ಮಾತನಾಡಿದರೆ ಮಾತ್ರ ಜಾತ್ಯತೀತ. ಪ್ರಗತಿಪರ ಚಿಂತಕ. ಎಲ್ಲರ ಜಾತ್ಯತೀತತೆ ಎಷ್ಟಿದೆ ? ಎಂಬುದು ನನಗೂ ಗೊತ್ತಿದೆ. ನನ್ನ ಸ್ಥಾನಮಾನದ ಅರಿವಿದೆ.
–ಬಸನಗೌಡ ಪಾಟೀಲ ಯತ್ನಾಳ, ವಿಜಯಪುರ ನಗರ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.