ADVERTISEMENT

ಹುಚ್ಚುಚ್ಚಾಗಿ ಮಾತನಾಡುವವರಿಗೆ ಕಡಿವಾಣ: ಡಿವಿಎಸ್

​ಪ್ರಜಾವಾಣಿ ವಾರ್ತೆ
Published 21 ಜನವರಿ 2012, 19:30 IST
Last Updated 21 ಜನವರಿ 2012, 19:30 IST

ದಾವಣಗೆರೆ: ಪಕ್ಷದ ಪ್ರಮುಖರ ಸಭೆ ನಡೆದ ನಂತರ ಉಲ್ಲಸಿತಗೊಂಡಿರುವ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು, ಇನ್ನು ಮುಂದೆ `ಹುಚ್ಚಾಚ್ಚಾಗಿ ಮಾತನಾಡುವವರಿಗೆ~ ಕಡಿವಾಣ ಬೀಳಲಿದೆ ಎಂದು ಗುಡುಗಿದರು. ಎಲ್ಲ ಗೊಂದಲಗಳಿಗೂ ಈ ಬಾರಿ ತಿಲಾಂಜಲಿ ಬೀಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ  ಶನಿವಾರ ಅಶ್ವಾರೂಢ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಜಿಎಂಐಟಿ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

`ನಮ್ಮ ಪಕ್ಷದ ಪ್ರಮುಖರ ನಡುವೆ ಒಂದಷ್ಟು ಗೊಂದಲಗಳು ಇದ್ದದ್ದು ಹಾಗೂ ಇರುವುದು ನಿಜ ಎಂದು ಒಪ್ಪಿಕೊಂಡರು. ನಮ್ಮಲ್ಲಿ ಗೊಂದಲಗಳೇ ಇಲ್ಲ, ಬಗೆಹರಿದಿವೆ ಎಂದು ಹೇಳಿಕೊಳ್ಳುವುದರಲ್ಲಿ ಅರ್ಥವಿಲ್ಲ.

ಮೂರೂವರೆ ವರ್ಷದ ಇತಿಹಾಸ ನಿಮಗೇ (ಮಾಧ್ಯಮದವರಿಗೇ) ಗೊತ್ತಿದೆ. ನಾವು ಎಷ್ಟೇ ಜಗಳ ಮಾಡಿಕೊಂಡರೂ ನಂತರ ಜನರ, ಕಾರ್ಯಕರ್ತರ ಅಪೇಕ್ಷೆ ಮೇರೆಗೆ ಸರಿ ಮಾಡಿಕೊಂಡಿದ್ದೇವೆ. ಬಹಿರಂಗವಾಗಿ ಮಾತನಾಡುವುದರಿಂದ, ಆಡಳಿತ, ಸಮಾಜ ಹಾಗೂ ಸಂಘಟನೆ ಮೇಲೆ ಆಗುವ ಪರಿಣಾಮವೇನು ಎಂಬುದನ್ನು ನೋಡಿಕೊಳ್ಳಬೇಕು. ಹೀಗಾಗಿ, ನಾನು, ಯಡಿಯೂರಪ್ಪ ಹಾಗೂ ಈಶ್ವರಪ್ಪ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ~.  ಎಂದು ಹೇಳಿದರು.

`ಬಿಜೆಪಿಯಲ್ಲಿ ಗಾಳಿ, ಬಿರುಗಾಳಿ ಇರುವುದು ಸಹಜ. ಹಿಂದೆ `ಸುನಾಮಿ~ ಕೇಳಿಯೇ ಇರಲಿಲ್ಲ, ಇತ್ತೀಚಿನ ದಿನಗಳಲ್ಲಿ ಬರುತ್ತಿದೆ~ ಎಂದು ಪರೋಕ್ಷವಾಗಿ ಹೇಳಿದ ಅವರು, `ಶುಕ್ರವಾರ ಕೋರ್ ಕಮಿಟಿ ಸಭೆಯಲ್ಲಿ ಆಳವಾಗಿ ಚರ್ಚಿಸಿದ್ದೇವೆ. ಹೀಗಾಗಿ, ಎಲ್ಲ ಗೊಂದಲ ನಿವಾರಣೆಯಾಗಲಿದೆ ಎಂಬ ಆಶಾಭಾವ ನನ್ನದು~ ಎಂದು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.